ಸೋಮವಾರ, ಜೂನ್ 14, 2021
24 °C

ದೇಶದ ಘನತೆಗಾಗಿ ಆಡಿದ್ದೀರಿ: ಸುರೇಶ್‌ ರೈನಾ ಕುರಿತು ಪ್ರಧಾನಿ ಮೋದಿ ಮೆಚ್ಚುಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ನಿವೃತ್ತಿ ಎಂಬ ಪದ ಬಳಸಲು ನಾನು ಇಷ್ಟಪಡುವುದಿಲ್ಲ. ಏಕೆಂದರೆ ನೀವಿನ್ನೂ ಅತ್ಯಂತ ಕಿರಿಯ ಮತ್ತು ಅತ್ಯುತ್ಸಾಹಿ. ದೇಶ ಮತ್ತು ತಂಡದ ಘನತೆಗಾಗಿ ಆಡಿದ್ದೀರಿ...

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಇತ್ತೀಚೆಗೆ ವಿದಾಯ ಹೇಳಿದ್ದ ಸುರೇಶ್‌ ರೈನಾ ಅವರ ಕುರಿತು ಹೇಳಿದ ಮೆಚ್ಚುಗೆಯ ಮಾತುಗಳಿವು. ಈ ಕುರಿತು ರೈನಾ ಅವರಿಗೆ ಎರಡು ಪುಟಗಳ ಪತ್ರವನ್ನು ಮೋದಿ ಬರೆದಿದ್ದಾರೆ.

ವಿಶ್ವಕಪ್‌ ವಿಜೇತ ತಂಡದ ನಾಯಕ ಮಹೇಂದ್ರಸಿಂಗ್‌ ಧೋನಿಯ ಆಗಸ್ಟ್‌ 15ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅವರನ್ನು ಅನುಸರಿಸಿ ಕೆಲವೇ ನಿಮಿಷಗಳ ಬಳಿಕ 33 ವರ್ಷದ ರೈನಾ ಕೂಡ ನಿವೃತ್ತಿ ಪ್ರಕಟಿಸಿದ್ದರು.

‘ನಿಮ್ಮ ಕ್ರಿಕೆಟ್‌ ವೃತ್ತಿ ಬದುಕಿನಲ್ಲಿ ಕೆಲವೊಂದು ಬಾರಿ ಗಾಯ ಅಥವಾ ಮತ್ತಾವುದೋ ಕಾರಣಗಳಿಂದ ಹಿನ್ನಡೆ ಅನುಭವಿಸಿದ್ದೀರಿ. ಆದರೆ ಅಂತಹ ಸವಾಲುಗಳನ್ನು ಮೀರಿ ಮುನ್ನಡೆದಿದ್ದೀರಿ, ನಿಮ್ಮ ಸ್ಥಿರತೆಗೆ ಅಭಿನಂದನೆಗಳು‘ ಎಂದು ಮೋದಿ ಹೇಳಿದ್ದಾರೆ.

ಮೋದಿ ಅವರಿಗೆ ರೈನಾ ಕೃತಜ್ಞತೆ ಸಲ್ಲಿಸಿದ್ದಾರೆ.

‘ದೇಶಕ್ಕಾಗಿ ಕ್ರೀಡಾಂಗಣಗಳಲ್ಲಿ ನಮ್ಮ ರಕ್ತ ಮತ್ತು ಬೆವರು ಸುರಿಸಿದ್ದೇವೆ. ದೇಶದ ಜನರು ಹಾಗೂ ಅದಕ್ಕಿಂತ ಹೆಚ್ಚಾಗಿ ಪ್ರಧಾನಿ ತೋರುವ ಪ್ರೀತಿಗಿಂತ ಹೆಚ್ಚಿನ ಗೌರವ ಯಾವುದೂ ಇಲ್ಲ. ನಿಮ್ಮ ಮೆಚ್ಚುಗೆ ಹಾಗೂ ಶುಭಹಾರೈಕೆಗಳಿಗೆ ಧನ್ಯವಾದಗಳು ಮೋದೀಜಿ. ಜೈ ಹಿಂದ್‌‘  ಎಂದು ರೈನಾ ಟ್ವೀಟ್‌ ಮಾಡಿದ್ದಾರೆ.

2011ರ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ‌ ಕ್ವಾರ್ಟರ್‌ಫೈನಲ್‌ನಲ್ಲಿ ಸುರೇಶ್‌ ರೈನಾ ಅವರು ಬಾರಿಸಿದ ಸುಂದರ ಕವರ್‌ಡ್ರೈವ್‌ಗಳನ್ನು  ಮೋದಿ ಮೆಲುಕುಹಾಕಿದ್ದಾರೆ. ಅಹ್ಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ರೈನಾ ಔಟಾಗದೆ 34 ರನ್‌ ಗಳಿಸಿದ್ದರು. ಆಸ್ಟ್ರೇಲಿಯಾ ತಂಡ ನೀಡಿದ 260 ರನ್‌ಗಳ ಗುರಿ ಬೆನ್ನತ್ತಿದ್ದ ಭಾರತ 5 ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ತಲುಪಿತ್ತು.

‘2011ರ ವಿಶ್ವಕಪ್‌ನಲ್ಲಿ ಅದರಲ್ಲೂ ವಿಶೇಷವಾಗಿ ನಿರ್ಣಾಯಕ ಪಂದ್ಯಗಳಲ್ಲಿ ನಿಮ್ಮ ಆಟ ಸ್ಫೂರ್ತಿದಾಯಕವಾಗಿತ್ತು. ಮೊಟೆರಾ ಕ್ರೀಡಾಂಗಣದಲ್ಲಿ ನಿಮ್ಮ ಆಟವನ್ನು ನಾನು ನೇರವಾಗಿ ವೀಕ್ಷಿಸಿದೆ. ಕ್ರೀಸ್‌ನಲ್ಲಿ ಲಂಗರು ಹಾಕಿ ಆಡಿದ ನಿಮ್ಮ ಆ ಇನಿಂಗ್ಸ್‌ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತ್ತು‘ ಎಂದು ಮೋದಿ ಶ್ಲಾಘಿಸಿದ್ದಾರೆ.

‘ಆ ದಿನದ ಆಟಕ್ಕೆ ಸಾಕ್ಷಿಯಾಗಲು ಅದೃಷ್ಟ ಮಾಡಿದ್ದೆ. ನಿಮ್ಮ ಸೊಗಸಾದ ಕವರ್‌ ಡ್ರೈವ್‌ಗಳು ಅಭಿಮಾನಿಗಳಿಗೆ ಇನ್ನು ನೋಡಲು ಸಿಗುವುದಿಲ್ಲ‘ ಎಂದು ಆ ವೇಳೆ ಗುಜರಾತ್‌ನ ಮುಖ್ಯಮಂತ್ರಿ ಆಗಿದ್ದ ಮೋದಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ರೈನಾ ಎಂದರೆ ತಂಡದ ಉತ್ಸಾಹಕ್ಕೆ ಯಾವಾಗಲೂ ಸಮಾನಾರ್ಥಕ ಪದ. ನೀವು (ರೈನಾ) ವೈಯಕ್ತಿಕವಾಗಿ ಅಲ್ಲ; ತಂಡ ಮತ್ತು ದೇಶದ ಘನತೆಗಾಗಿ ಆಡಿದ್ದೀರಿ. ಫೀಲ್ಡಿಂಗ್‌ನಲ್ಲಿ ನೀವು ತೋರಿದ ಉತ್ಸಾಹ ಇತರರೂ ಅನುಕರಿಸುವಂತದ್ದು. ಎದುರಾಳಿಯ ವಿಕೆಟ್‌ ಬಿದ್ದಾಗ ಅತ್ಯಂತ ಹೆಚ್ಚು ಸಂಭ್ರಮಿಸುವ ಆಟಗಾರರಲ್ಲಿ ನೀವು ಮೊದಲಿಗರು‘ ಎಂದು ಮೋದಿ ಬರೆದಿದ್ದಾರೆ.

‘ಒಬ್ಬ ಬ್ಯಾಟ್ಸ್‌ಮನ್‌ ಆಗಿ ಕ್ರಿಕೆಟ್‌ನ ಎಲ್ಲ ಮಾದರಿಗಳಲ್ಲೂ ವಿಶಿಷ್ಟ ಎನಿಸಿಕೊಂಡಿದ್ದೀರಿ. ಅದರಲ್ಲೂ ವಿಶೇಷವಾಗಿ ಹೊಸ ಮಾದರಿ ಟಿ20 ಕ್ರಿಕೆಟ್‌ನಲ್ಲಿ. ಇದು ಸುಲಭ ಮಾದರಿಯಂತೂ ಅಲ್ಲ. ಇಲ್ಲಿ ಸಮಯಕ್ಕೆ ಅನುಗುಣವಾಗಿ ಚುರುಕುತನ ಬೇಕಾಗುತ್ತದೆ. ನಿಮ್ಮ ಚುರುಕುತನ ಹಾಗೂ ವೇಗದ ಆಟವೇ ಈ ಮಾದರಿಯ ಜೀವಾಳ‘ ಎಂದು ಮೋದಿ ಹೇಳಿದ್ದಾರೆ.

ರೈನಾ ಅವರ ಚುರುಕಿನ ಫಿಲ್ಡಿಂಗ್‌ ಬಗ್ಗೆಯೂ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವಚ್ಛ ಭಾರತ ಅಭಿಯಾನ ಹಾಗೂ ಮಹಿಳಾ ಸಬಲೀಕರಣದಂತಹ ಸಾಮಾಜಿಕ ಕಾರ್ಯಗಳಲ್ಲಿ ರೈನಾ ಅವರು ತೊಡಗಿಸಿಕೊಂಡಿದ್ದನ್ನು ಮೋದಿ ಶ್ಲಾಘಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು