ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಫ್ರಾ ಅವರದ್ದು ಸ್ವಾರ್ಥ ನಡೆ

ಇಂಗ್ಲೆಂಡ್‌ನ ಖ್ಯಾತ ಕ್ರಿಕೆಟಿಗ ಮೈಕಲ್‌ ವಾನ್‌ ಹೇಳಿಕೆ
Last Updated 17 ಜುಲೈ 2020, 11:17 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್‌: ‘ಇಂಗ್ಲೆಂಡ್‌ನ ವೇಗದ ಬೌಲರ್‌ ಜೋಫ್ರಾ ಆರ್ಚರ್‌ ಅವರು ತಮ್ಮ ಸ್ವಾರ್ಥಕ್ಕಾಗಿ ಇಡೀ ತಂಡವನ್ನೇ ಅಪಾಯಕ್ಕೆ ದೂಡುವ ಕೆಲಸ ಮಾಡಿದ್ದಾರೆ. ಅವರಿಗೆ ವೆಸ್ಟ್‌ ಇಂಡೀಸ್‌ ಎದುರಿನ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಸ್ಥಾನ ಸಿಗುವುದು ಅನುಮಾನ’ ಎಂದುಇಂಗ್ಲೆಂಡ್‌ನ ಖ್ಯಾತ ಕ್ರಿಕೆಟಿಗ ಮೈಕಲ್‌ ವಾನ್‌ ಶುಕ್ರವಾರ ಹೇಳಿದ್ದಾರೆ.

ಜೀವ ಸುರಕ್ಷಾ (ಬಯೊ ಸೆಕ್ಯುರ್‌) ವಾತಾವರಣ ನಿಯಮ ಉಲ್ಲಂಘಿಸಿರುವ ಕಾರಣ ಜೋಫ್ರಾ ಅವರನ್ನು ಎರಡನೇ ಟೆಸ್ಟ್‌ನಿಂದ ಕೈಬಿಡಲಾಗಿತ್ತು. ‘ಹೋಟೆಲ್‌ನಲ್ಲಿ ಐದು ದಿನಗಳ ಕಾಲ ಸ್ವಯಂ ಪ್ರತ್ಯೇಕವಾಸದಲ್ಲಿದ್ದು, ಈ ಅವಧಿಯಲ್ಲಿ ಎರಡು ಬಾರಿ ಕೋವಿಡ್‌ ಪರೀಕ್ಷೆ ಎದುರಿಸಬೇಕು’ ಎಂದು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯು (ಇಸಿಬಿ) ಸೂಚಿಸಿತ್ತು.

‘ಮೂರನೇ ಟೆಸ್ಟ್‌ನಲ್ಲಿ ಆರ್ಚರ್‌ ಆಡುವುದು ಅನುಮಾನ. ಅವರಿನ್ನೂ ಚಿಕ್ಕವರು. ತಿಳಿಯದೇ ತಪ್ಪು ಮಾಡಿದ್ದಾರೆ. ಇದೇ ಮೊದಲ ಸಲ ಅವರಿಂದ ಇಂತಹ ಗಂಭೀರ ಸ್ವರೂಪದ ಪ್ರಮಾದವಾಗಿದೆ. ಇದು ಅವರಿಗೆ ಪಾಠವಾಗಲಿದೆ. ಅವರೀಗ ಕ್ವಾರಂಟೈನ್‌ನಲ್ಲಿದ್ದಾರೆ. ಈ ಅವಧಿಯಲ್ಲಿ ನಾವೆಲ್ಲಾ ಜೋಫ್ರಾಗೆ ಒತ್ತಾಸೆಯಾಗಿ ನಿಲ್ಲಬೇಕು. ಹೋಟೆಲ್‌ ಕೋಣೆಯೊಳಗೆ ಏಕಾಂತ ಕಾಡದಂತೆ ಎಚ್ಚರವಹಿಸಬೇಕು. ಎಲ್ಲರೂ ಸಮಯ ಸಿಕ್ಕಾಗಲೆಲ್ಲಾ ದೂರವಾಣಿ ಕರೆ ಮಾಡಿ ಧೈರ್ಯ ಹೇಳಬೇಕು’ ಎಂದು ವಾನ್‌ ತಿಳಿಸಿದ್ದಾರೆ.

‘ಎಲ್ಲರೂ ತಪ್ಪು ಮಾಡುತ್ತಾರೆ. ಹಾಗಂತ ಅವರನ್ನು ಕೈಬಿಡಬಾರದು. ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ಕೊಡಬೇಕು. ಆರ್ಚರ್‌ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಈ ವೇಳೆ ಹಲವರ ಪ್ರತಿಕ್ರಿಯೆಗಳನ್ನು ಕಂಡು ಅವರಿಗೆ ತಮ್ಮ ತಪ್ಪಿನ ಅರಿವಾಗಬಹುದು’ ಎಂದಿದ್ದಾರೆ.

‘ಕ್ರೀಡಾಂಗಣದ ಹೊರಗೆ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಆರ್ಚರ್‌ಗೆ ಅರಿವು ಮೂಡಿಸಬೇಕು. ಅವರು ತಂಡದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಈಗ ಅವರು ಸಹ ಆಟಗಾರರು ಹಾಗೂ ನೆರವು ಸಿಬ್ಬಂದಿಯ ನಂಬಿಕೆ ಗಳಿಸಬೇಕಿದೆ. ನಾನು ನಿತ್ಯವೂ ದೂರವಾಣಿ ಕರೆ ಮಾಡಿ ಆರ್ಚರ್‌ ಜೊತೆ ಮಾತನಾಡುತ್ತೇನೆ. ಅವರ ಯೋಗಕ್ಷೇಮ ವಿಚಾರಿಸಿ ಆತ್ಮಸ್ಥೈರ್ಯ ತುಂಬಲು ಪ್ರಯತ್ನಿಸುತ್ತೇನೆ’ ಎಂದೂ ಅವರು ನುಡಿದಿದ್ದಾರೆ.

‘ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಟೆಸ್ಟ್‌ ಸರಣಿ ನಡೆಯುತ್ತಿರುವುದಕ್ಕೆ ವೆಸ್ಟ್‌ ಇಂಡೀಸ್‌ ತಂಡದವರ ತ್ಯಾಗ ಮನೋಭಾವವೇ ಕಾರಣ. ಜೂನ್‌ 8ರಂದೇ ಇಂಗ್ಲೆಂಡ್‌ಗೆ ಬಂದಿದ್ದ ಅವರು ಇಲ್ಲೇ ಕ್ವಾರಂಟೈನ್‌ನಲ್ಲಿದ್ದರು. ಈ ಅವಧಿಯಲ್ಲಿ ಕ್ರೀಡಾಂಗಣ ಮತ್ತು ಹೋಟೆಲ್‌ ಬಿಟ್ಟು ಬೇರೆಲ್ಲೂ ಹೋಗಿಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್‌ ಪರ 82 ಟೆಸ್ಟ್‌ ಪಂದ್ಯಗಳನ್ನು ಆಡಿದ್ದ 45 ವರ್ಷ ವಯಸ್ಸಿನ ವಾನ್,‌‌ 5,719ರನ್‌ಗಳನ್ನು ದಾಖಲಿಸಿದ್ದಾರೆ. 51 ಟೆಸ್ಟ್‌ ಪಂದ್ಯಗಳಲ್ಲಿ ಅವರು ಆಂಗ್ಲರ ನಾಡಿನ ತಂಡವನ್ನು ಮುನ್ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT