ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದುಲೀಪ್ ಟ್ರೋಫಿ ಕ್ರಿಕೆಟ್: ನವದೀಪ್ ಸೈನಿ ಆಲ್‌ರೌಂಡ್ ಆಟ

ಭಾರತ ಎ ತಂಡಕ್ಕೆ ರಾಹುಲ್, ರಿಯಾನ್ ಆಸರೆ
Published : 6 ಸೆಪ್ಟೆಂಬರ್ 2024, 20:23 IST
Last Updated : 6 ಸೆಪ್ಟೆಂಬರ್ 2024, 20:23 IST
ಫಾಲೋ ಮಾಡಿ
Comments

ಬೆಂಗಳೂರು: ಮುಷೀರ್ ಖಾನ್ ಜೊತೆಗೆ ದ್ವಿಶತಕದ ಜೊತೆಯಾಟವಾಡುವ ಮೂಲಕ ಭಾರತ ಬಿ ತಂಡಕ್ಕೆ ಉತ್ತಮ ಮೊತ್ತ ಗಳಿಸಿಕೊಟ್ಟ ನವದೀಪ್ ಸೈನಿ, ಬೌಲಿಂಗ್‌ನಲ್ಲಿಯೂ ಮಿಂಚಿದರು. 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದ ಎರಡನೇ ದಿನವಾದ ಶುಕ್ರವಾರ ಮುಷೀರ್ ಮತ್ತು ನವದೀಪ್ ಅವರು 8ನೇ ವಿಕೆಟ್ ಜೊತೆಯಾಟದಲ್ಲಿ 205 ರನ್ ಕಲೆಹಾಕಿದರು. ಅದರಿಂದಾಗಿ ಬಿ ತಂಡವು 116 ಓವರ್‌ಗಳಲ್ಲಿ 321 ರನ್‌ ಗಳಿಸಿತು. ಅದಕ್ಕುತ್ತರವಾಗಿ ಮಧ್ಯಾಹ್ನ ಬ್ಯಾಟಿಂಗ್ ಮಾಡಿದ  ಭಾರತ ಎ ತಂಡಕ್ಕೆ ನವದೀಪ್ ಆರಂಭಿಕ ಪೆಟ್ಟುಕೊಟ್ಟರು. ಮಯಂಕ್ ಅಗರವಾಲ್ ಮತ್ತು ನಾಯಕ ಶುಭಮನ್ ಗಿಲ್ ಅವರ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. 

ಸ್ಥಳೀಯ ಹೀರೊ ಕೆ.ಎಲ್. ರಾಹುಲ್ (ಬ್ಯಾಟಿಂಗ್ 23) ಮತ್ತು ಅಸ್ಸಾಂ ಪ್ರತಿಭೆ ರಿಯಾನ್ ಪರಾಗ್ (ಬ್ಯಾಟಿಂಗ್ 27) ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲಿ 68 ರನ್ ಕಲೆಹಾಕಿದರು. ಇದರಿಂದಾಗಿ ದಿನದಾಟದಂತ್ಯಕ್ಕೆ ಭಾರತ ಎ ತಂಡವು 35 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 134 ರನ್ ಗಳಿಸಿತು. ಬಿ ತಂಡದ ಮೊದಲ ಇನಿಂಗ್ಸ್‌ನ ಮೊತ್ತವನ್ನು ಚುಕ್ತಾ ಮಾಡಲು ಇನ್ನೂ 187 ರನ್‌ ಗಳಿಸುವ ಸವಾಲು ಗಿಲ್ ಬಳಗದ ಮುಂದೆ ಇದೆ. 

ಸೈನಿ ಶೈನಿಂಗ್: ಪಂದ್ಯದ ಮೊದಲ ದಿನವಾದ ಗುರುವಾರ ಬಿ ತಂಡವು 43.5 ಓವರ್‌ಗಳಲ್ಲಿ 94 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಆತಂಕದಲ್ಲಿದ್ದಾಗ ಮುಷೀರ್ ಮತ್ತು ಸೈನಿ ಜೊತೆಗೂಡಿದ್ದರು. ನಂತರದ ಆಟದಲ್ಲಿ ಶತಕ ಪೂರೈಸಿದ್ದ ಮುಷೀರ್ ಮತ್ತು 29 ರನ್ ಗಳಿಸಿದ್ದ ನವದೀಪ್ ಅವರಿಬ್ಬರೂ ಕ್ರೀಸ್‌ನಲ್ಲಿ ಉಳಿದಿದ್ದರು. ಶುಕ್ರವಾರ ಬೆಳಿಗ್ಗೆ ತಮ್ಮ ಚೆಂದದ ಆಟವನ್ನು ಮುಂದುವರಿಸಿದರು. ಮುಷೀರ್ ದ್ವಿಶತಕ ಪೂರೈಸುವ ವಿಶ್ವಾಸ ಮೂಡಿಸಿದ್ದರು. ವೇಗದ ಬೌಲರ್ ಆಗಿರುವ ಸೈನಿ ನುರಿತ ಬ್ಯಾಟರ್ ಮಾದರಿಯಲ್ಲಿಯೇ ತಾಳ್ಮೆಯಿಂದ ಆಡಿದರು. ಇವರಿಬ್ಬರ ಜೊತೆಯಾಟವನ್ನು ಮುರಿಯಲು ಬೌಲರ್‌ಗಳು ಮಾಡಿದ ಪ್ರಯತ್ನಗಳು ಕೈಗೂಡಿದ್ದು ಊಟದ ವಿರಾಮದ ನಂತರವೇ. 

ಪಂದ್ಯದಲ್ಲಿ ಒಟ್ಟು 373 ಎಸೆತಗಳನ್ನು ಎದುರಿಸಿ 181 ರನ್ ಗಳಿಸಿದ ಮುಷೀರ್ ಅವರ ವಿಕೆಟ್ ಗಳಿಸುವಲ್ಲಿ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಯಶಸ್ವಿಯಾದರು.  ನವದೀಪ್ (56; 144ಎಸೆತ, 4X8, 6X1) ಅರ್ಧಶತಕ ಪೂರೈಸಿದರು. ಕೊನೆಯವರಾಗಿ ಔಟಾದರು. ಯಶ್ ದಯಾಳ್ ಕೂಡ 10 ರನ್‌ಗಳ ಕಾಣಿಕೆ ನೀಡಿದರು. 

ಬೌಲಿಂಗ್‌ನಲ್ಲಿಯೂ ಮಿಂಚಿದ ಸೈನಿ ಭಾರತ ಬಿ ತಂಡಕ್ಕೆ ಆರಂಭದಲ್ಲಿಯೇ ಯಶಸ್ಸು ತಂದುಕೊಟ್ಟರು. ಇನಿಂಗ್ಸ್‌ನ 14ನೇ ಓವರ್‌ನಲ್ಲಿ ಸೈನಿ ಅವರು ಆಫ್‌ಸ್ಟಂಪ್‌ಗೆ ನೇರವಾಗಿ ಪ್ರಯೋಗಿಸಿದ್ದ ಎಸೆತವನ್ನು ತಪ್ಪಾಗಿ ಅಂದಾಜಿಸಿದ ಗಿಲ್ ತಲೆದಂಡವಾಯಿತು. ಚಹಾ ವಿರಾಮದ ನಂತರದ ಅವಧಿಯಲ್ಲಿ ತಾಳ್ಮೆಯಿಂದ ಆಡುತ್ತಿದ್ದ ಮಯಂಕ್ ಅಗರವಾಲ್ ಅವರು ಸೈನಿ ಲೆಗ್‌ ಸ್ಪಂಪ್‌ ಲೈನ್‌ನಲ್ಲಿ ಹಾಕಿದ ಎಸೆತವನ್ನು ಕೆಣಕಿದರು. ವಿಕೆಟ್‌ಕೀಪರ್ ರಿಷಭ್ ಪಂತ್ ಚುರುಕಾಗಿ ಜಿಗಿದು ಕ್ಯಾಚ್ ಪಡೆದರು. 

ಸಂಕ್ಷಿಪ್ತ ಸ್ಕೋರು: ಭಾರತ ಬಿ: 116 ಓವರ್‌ಗಳಲ್ಲಿ 321 (ಮುಷೀರ್ ಖಾನ್ 181, ನವದೀಪ್ ಸೈನಿ 56, ಯಶ್ ದಯಾಳ್ 10, ಆಕಾಶ್ ದೀಪ್ 60ಕ್ಕೆ4, ಆವೇಶ್ ಖಾನ್ 59ಕ್ಕೆ2, ಖಲೀಲ್ ಅಹಮದ್ 54ಕ್ಕೆ2, ಕುಲದೀಪ್ ಯಾದವ್ 81ಕ್ಕೆ1) ಭಾರತ ಎ : 35 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 134 (ಮಯಂಕ್ ಅಗರವಾಲ್ 36, ಶುಭಮನ್ ಗಿಲ್ 25, ರಿಯಾನ್ ಪರಾಗ್ ಬ್ಯಾಟಿಂಗ್ 27, ಕೆ.ಎಲ್. ರಾಹುಲ್ ಬ್ಯಾಟಿಂಗ್ 23, ನವದೀಪ್ ಸೈನಿ 36ಕ್ಕೆ2) 

ಭಾರತ ಬಿ ತಂಡದ  ನವದೀಪ್ ಸೈನಿ ಬ್ಯಾಟಿಂಗ್   –ಪಿಟಿಐ ಚಿತ್ರ
ಭಾರತ ಬಿ ತಂಡದ  ನವದೀಪ್ ಸೈನಿ ಬ್ಯಾಟಿಂಗ್   –ಪಿಟಿಐ ಚಿತ್ರ

ರಾಹುಲ್‌..ರಾಹುಲ್‌..

ತವರಿನಂಗಳದಲ್ಲಿ ಆಡಲು ಬಂದ ಕೆ.ಎಲ್. ರಾಹುಲ್ ಅವರಿಗೆ ಅಭಿಮಾನಿಗಳಿಂದ ಪ್ರೀತಿಯ ಸ್ವಾಗತ ಲಭಿಸಿತು.  ತಮ್ಮ ‘ಗೆಳೆಯ’ ಮಯಂಕ್ ಅಗರವಾಲ್ ಅವರು ಔಟಾದಾಗ ರಾಹುಲ್ ಕ್ರೀಸ್‌ಗೆ ಬಂದರು.  ಈ ಸಂದರ್ಭದಲ್ಲಿ ಕ್ರೀಡಾಂಗಣದ ಒಂದು ಗ್ಯಾಲರಿಯಲ್ಲಿದ್ದ ಅಭಿಮಾನಿಗಳಿಂದ ಚಪ್ಪಾಳೆಯ ಸ್ವಾಗತ ದೊರೆಯಿತು. ರಾಹುಲ್‌.. ರಾಹುಲ್‌.. ಎಂದು ಕೂಗಿದರು.  ಆರಂಭದಲ್ಲಿ ರಾಹುಲ್ ತುಸು ತಡಬಡಾಯಿಸಿದರು. ನಂತರ ಚೆಂಡಿನ ಚಲನೆಯನ್ನು ಸರಿಯಾಗಿ ಗುರುತಿಸುವಲ್ಲಿ ಯಶಸ್ವಿಯಾಗಿ ಆಡಿದರು. ಅವರಿಗೆ ರಿಯಾನ್ ಉತ್ತಮ ಜೊತೆ ನೀಡಿದರು.

ದೇವದತ್ತ ಶ್ರೇಯಸ್ ಉತ್ತಮ ಬ್ಯಾಟಿಂಗ್

 ಅನಂತಪುರ (ಪಿಟಿಐ): ಕನ್ನಡಿಗ ದೇವದತ್ತ ಪಡಿಕ್ಕಲ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರು ಗಳಿಸಿದ ಅರ್ಧಶತಕಗಳ ಬಲದಿಂದ ಭಾರತ ಡಿ ತಂಡವು ಇಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಪಂದ್ಯದಲ್ಲಿ ಭಾರತ ಸಿ ತಂಡದ ಎದುರು 202 ರನ್‌ಗಳ ಮುನ್ನಡೆ ಸಾಧಿಸಿದೆ.  ಮೊದಲ ಇನಿಂಗ್ಸ್‌ನಲ್ಲಿ ಡಿ ತಂಡವು 164 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ಸಿ ತಂಡವು 168 ರನ್‌ ಗಳಿಸಿ ಅತ್ಯಲ್ಪ ಮುನ್ನಡೆ ಪಡೆಯಿತು. ಎರಡನೇ ದಿನದಾಟದಲ್ಲಿ ಎರಡನೇ ಇನಿಂಗ್ಸ್ ಆಂಭಿಸಿದ ಡಿ ತಂಡಕ್ಕೆ ಎದುರಾಳಿ ಬಳಗದ ಮಾನವ ಸುತಾರ (30ಕ್ಕೆ5) ಬಲವಾಗಿ ಕಾಡಿದರು. ಇದರ ನಡುವೆಯೂ ನಾಯಕ ಶ್ರೇಯಸ್ (54; 44ಎ 4X9 6X1) ಮತ್ತು ದೇವದತ್ತ (56; 70ಎ 4X8) ಅರ್ಧಶತಕ ದಾಖಲಿಸಿದರು. ರಿಕಿ ಭುಯ್ ಅವರು ತಾಳ್ಮೆಯ ಆಟವಾಡಿ 91 ಎಸೆತಗಳಲ್ಲಿ 44 ರನ್‌ ಗಳಿಸಿದರು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ ಡಿ: 48.3 ಓವರ್‌ಗಳಲ್ಲಿ 164. ಭಾರತ ಸಿ: 62.2 ಓವರ್‌ಗಳಲ್ಲಿ 168. ಎರಡನೇ ಇನಿಂಗ್ಸ್: ಭಾರತ ಡಿ: 49 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 206 (ಶ್ರೇಯಸ್ ಅಯ್ಯರ್ 54 ದೇವದತ್ತ ಪಡಿಕ್ಕಲ್ 56 ರಿಕಿ ಭುಯ್ 44 ಮಾನವ್ ಸುತಾರ್ 30ಕ್ಕೆ5 ವೈಶಾಖ ವಿಜಯಕುಮಾರ್ 51ಕ್ಕೆ2) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT