ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದೇವ್ ದಾಳಿಗೆ ಸುಸ್ತಾದ ಗ್ರೀನ್

ದುಲೀಪ್ ಟ್ರೋಫಿ ಫೈನಲ್: ಮಳೆಯ ಆಟದ ನಡುವೆ ನಡೆದ ಪಂದ್ಯ
Last Updated 4 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಬುಧವಾರ ಇಡೀ ದಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆಯ ಆಟ ಮತ್ತು ಎಡಗೈ ಮಧ್ಯಮವೇಗಿ ಜಯದೇವ್ ಉನದ್ಕತ್ ಅವರ ಮೋಡಿಯಾಟ ನಡೆದವು.

ಆಗಾಗ ಸುರಿದು ಹೋದ ಮಳೆಯಿಂದಾಗಿ ಸುಮಾರು ನಾಲ್ಕು ಗಂಟೆಗಳಷ್ಟು ಆಟ ಸ್ಥಗಿತವಾಯಿತು. ಇಂಡಿಯಾ ರೆಡ್ ತಂಡದ ಜಯದೇವ್ ನಾಲ್ಕು ವಿಕೆಟ್ ಪಡೆದು ಇಂಡಿಯಾ ಗ್ರೀನ್ ತಂಡದ ಬ್ಯಾಟಿಂಗ್‌ ಬಲಕ್ಕೆ ಪೆಟ್ಟು ನೀಡಿದರು. ಇದರಿಂದಾಗಿ ಗ್ರೀನ್ ತಂಡವು ದಿನದಾಟದ ಕೊನೆಗೆ 49 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 147 ರನ್‌ ಗಳಿಸಿತು.

ಬೆಳಿಗ್ಗೆ ಟಾಸ್ ಗೆದ್ದ ಫೈಜ್ ಫಜಲ್ ನಾಯಕತ್ವದ ಗ್ರೀನ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ತಂಪು ಗಾಳಿ ಸುಳಿದಾಡುತ್ತಿದ್ದ ಬೆಳಿಗ್ಗೆಯ ವಾತಾವರಣದಲ್ಲಿ ಜಯದೇವ್ ಮೇಲುಗೈ ಸಾಧಿಸಿದರು. ಇನಿಂಗ್ಸ್‌ನ ಏಳನೇ ಓವರ್‌ನಲ್ಲಿಯೇ ಫಜಲ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿ, ತಮ್ಮ ಬೇಟೆ ಆರಂಭಿಸಿದರು.

ಅಕ್ಷತ್ ರೆಡ್ಡಿ ಮತ್ತು ಧ್ರುವ ಶೋರೆ ಎರಡನೇ ವಿಕೆಟ್‌ಗೆ 34 ರನ್‌ಗಳನ್ನು ಸೇರಿಸಿದರು. ಈ ಜೊತೆಯಾಟವನ್ನು ಸಂದೀಪ್ ವಾರಿಯರ್ ಮುರಿದರು.

ಕ್ರೀಸ್‌ಗೆ ಬಂದ ಭರವಸೆಯ ಬ್ಯಾಟ್ಸ್‌ಮನ್ ಸಿದ್ಧೇಶ್ ಲಾಡ್ ಖಾತೆಯನ್ನೇ ತೆರೆಯಲಿಲ್ಲ. ಉನದ್ಕತ್ ಪ್ರಯೋಗಿಸಿದ ಸ್ವಿಂಗ್‌ ಎಸೆತದ ಲಯ ಗುರುತಿಸುವಲ್ಲಿ ವಿಫಲರಾದರು. ಪ್ರಿಯಾಂಕ್ ಪಾಂಚಾಲ್ ಅವರಿಗೆ ಕ್ಯಾಚಿತ್ತರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಕ್ಷಯ್ ವಾಡಕರ್ (6 ರನ್) ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ರಾಜೇಶ್ ಮೊಹಾಂತಿ ಅವರನ್ನೂ ಪೆವಿಲಿಯನ್‌ಗೆ ಮರಳಿ ಕಳಿಸುವಲ್ಲಿ ಜಯದೇವ್ ಸಫಲರಾದರು.

ಅಕ್ಷದೀಪ್ ನಾಥ್ (29; 46ಎಸೆತ, 5ಬೌಂಡರಿ) ಮತ್ತು ಕ್ರೀಸ್‌ನಲ್ಲಿರುವ ಮಯಂಕ್ ಮಾರ್ಕಂಡೆ (ಬ್ಯಾಟಿಂಗ್ 32) ಅವರು ಮಾತ್ರ ಬೌಲರ್‌ಗಳಿಗೆ ಸ್ವಲ್ಪ ಪ್ರತಿರೋಧ ಒಡ್ಡಿದರು. ಅದರಿಂದಾಗಿ ತಂಡದ ಮೊತ್ತವು ನೂರರ ಗಡಿ ದಾಟಲು ಸಾಧ್ಯವಾಯಿತು. ಸಂದೀಪ್ ವಾರಿಯರ್, ಆವೇಶ್ ಖಾನ್ ಮತ್ತು ಸ್ಪಿನ್ನರ್ ಆದಿತ್ಯ ಸರ್ವಟೆ ತಲಾ ಒಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರು: ಇಂಡಿಯಾ ಗ್ರೀನ್: 49 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 147 (ಫೈಜ್ ಫಜಲ್ 12, ಅಕ್ಷತ್ ರೆಡ್ಡಿ 16, ಧ್ರುವ ಶೋರೆ 23, ಅಕ್ಷದೀಪ್ ನಾಥ್ 29, ಧರ್ಮೇಂದ್ರಸಿಂಹ ಜಡೇಜ 15, ಮಯಂಕ್ ಮಾರ್ಕಂಡೆ ಬ್ಯಾಟಿಂಗ್ 32, ಜಯದೇವ್ ಉನದ್ಕತ್ 58ಕ್ಕೆ4, ಸಂದೀಪ್ ವಾರಿಯರ್ 25ಕ್ಕೆ1, ಆವೇಶ್ ಖಾನ್ 45ಕ್ಕೆ1, ಆದಿತ್ಯ ಸರ್ವಟೆ 14ಕ್ಕೆ1) ಇಂಡಿಯಾ ರೆಡ್ ಎದುರಿನ ಪಂದ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT