ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮ್ಯುನಿಸ್ಟರ ಹಳೆಯ ಚಾಳಿ!

Last Updated 26 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಪ್ರಸನ್ನ ಅವರು ಬಹಳ ಜಾಣತನದಿಂದ ರಾಮಾಯಣ ಒಂದು ಬದ್ಧ ಕಲಾಕೃತಿ, ಅರ್ಥಾತ್ ಎಡಪಂಥಕ್ಕೆ ಬದ್ಧವಾದ ಕಲಾಕೃತಿ ಎಂದು ವಾದಿಸುತ್ತಲೇ (ಪ್ರ.ವಾ., ಮಾರ್ಚ್‌ 15) ಪರೋಕ್ಷವಾಗಿ ರಾಮನೊಬ್ಬ ಎಡಪಂಥೀಯ ಎಂಬುದರ ಸೂಚನೆ ನೀಡಿದಂತಿದೆ. ಪ್ರಸನ್ನ ಇಷ್ಟೆಲ್ಲ ವಾದಿಸಿದ ಮೇಲೂ ವಾಲ್ಮೀಕಿ ಒಬ್ಬ ಬದ್ಧ ಕವಿ ಹೌದೋ ಅಲ್ಲವೋ ಎಂಬುದು ಚರ್ಚಾಸ್ಪದವಾಗಿಯೇ ಉಳಿಯಬಹುದಾದರೂ ಪ್ರಸನ್ನ ಅವರ ಬದ್ಧತೆ ಮಾತ್ರ ನಿಚ್ಚಳ. ಇದನ್ನು ಹೊರತುಪಡಿಸಿದರೆ ಅವರ ಲೇಖನ ಖಂಡಿತವಾಗಿಯೂ ರಾಮಾಯಣವನ್ನು ಕುರಿತ ಒಂದು ಅತಿ ಸುಂದರವಾದ ವ್ಯಾಖ್ಯಾನವೆಂಬುದರಲ್ಲಿ ಎರಡು ಮಾತಿಲ್ಲ.

ಮಾತೆತ್ತಿದರೆ ‘ರಾಮನೊಬ್ಬ ನಿರ್ದಯಿ, ಪತ್ನಿಪೀಡಕ’ ಎಂಬ ಕೆಲವರ ಕೆರಳಿಕೆಯ ಉದ್ದೇಶದ ‘ಎಡವಟ್ಟು’ ಮಾತುಗಳಿಗಿಂತ ಪ್ರಸನ್ನ ಅವರ ಈ ‘ಎಡಪಟ್ಟು’ವಾದ ವಾಂಛನೀಯವೇ. ರಾಮಾಯಣ– ಮಹಾಭಾರತಗಳನ್ನು ನಾವು ಹೀಗೆಯೇ ವ್ಯಾಖ್ಯಾನಿಸಬೇಕೆಂದು ತೋರುತ್ತದೆ. ‘ಎಡಪಂಥ ತುಂಬ ಪ್ರಾಚೀನ’ ವೆಂದು ವಾದಿಸುವ ಎಡಪಂಥೀಯರ ಚಾಳಿ ತುಂಬ ಹಳೆಯದೆಂದೇ ತೋರುತ್ತದೆ.

ಸುಮಾರು ನಾಲ್ಕು ದಶಕಗಳ ಹಿಂದೆ ಕನ್ನಡ ಮಾಸ ಪತ್ರಿಕೆ ‘ಕಸ್ತೂರಿ’ಯಲ್ಲಿ ಓದಿದ್ದ ಒಂದು ಸಂಗತಿಯನ್ನು ನನ್ನ ವಾದಕ್ಕೆ ಸಮರ್ಥನೆಯಾಗಿ ನಿರೂಪಿಸಬಹುದೆನಿಸುತ್ತದೆ. ಅದು ಹೀಗಿದೆ: ಕಮ್ಯುನಿಸ್ಟ್ ದೇಶವಾದ ರಷ್ಯಾಕ್ಕೂ ಕಮ್ಯುನಿಸ್ಟ್ ದೇಶವಲ್ಲದ ಈಜಿಪ್ಟ್‌ಗೂ ಯಾವುದೋ ವಿಷಯದಲ್ಲಿ ಒಂದು ಒಪ್ಪಂದದ ಸಲುವಾಗಿ ಶೃಂಗಸಭೆ ಏರ್ಪಟ್ಟಿರುತ್ತದೆ. ಮಾತುಕತೆಗಳೆಲ್ಲಾ ಮುಗಿದು, ರಷ್ಯಾದ ಆಗಿನ ಅಧ್ಯಕ್ಷರೂ ಹಾಗೂ ಆಗ ಈಜಿಪ್ಟಿನ ಅಧ್ಯಕ್ಷರಾಗಿದ್ದ ಅನ್ವರ್ ಸಾದತ್ ಅವರೂ ಒಪ್ಪಂದಕ್ಕೆ ಸಹಿ ಹಾಕುವ ಹಂತ ಸಮೀಪಿಸುತ್ತದೆ. ಅ ಸಮಯದಲ್ಲಿ ರಷ್ಯಾದ ಅಧ್ಯಕ್ಷರ ನಿಕಟವರ್ತಿಯೊಬ್ಬರು, ‘ರಷ್ಯಾದ ಅಧ್ಯಕ್ಷರು ಒಪ್ಪಂದಕ್ಕೆ ಸಹಿ ಹಾಕಲು ಒಂದು ವಿಚಿತ್ರ ಷರತ್ತನ್ನು ಮುಂದಿಟ್ಟಿದ್ದಾರೆ’ ಎಂದು ಹೇಳುತ್ತಾರೆ.

‘ಕ್ರೈಸ್ತ ಪುರಾಣದಲ್ಲಿ ಬರುವ ಮಾನವರ ಮೂಲ ಪುರುಷರಾದ ಆ್ಯಡಮ್ ಮತ್ತು ಈವ್ ಇಬ್ಬರೂ ಕಮ್ಯುನಿಸ್ಟರಾಗಿದ್ದರೆಂದು ಈಜಿಪ್ಟ್‌ನ ಅಧ್ಯಕ್ಷರು ಒಪ್ಪಬೇಕು’ ಎಂಬುದೇ ಆ ಷರತ್ತು. ಇದನ್ನು ಒಪ್ಪುವುದು ಹೇಗೆ ಎಂಬುದು ಈಜಿಪ್ಟ್‌ನ ಅಧ್ಯಕ್ಷರ ಸಮಸ್ಯೆ. ಕೊನೆಗೆ ಅವರು ತಮ್ಮ ಅಪ್ತ ಸಲಹೆಗಾರರನ್ನು ಈ ಬಗ್ಗೆ ಕೇಳುತ್ತಾರೆ. ಅವರು, ಈ ಮಾತಿಗೆ ನಿಸ್ಸಂದೇಹವಾಗಿ ಒಪ್ಪಿಗೆ ನೀಡಬಹುದೆಂದು ಹೇಳುತ್ತಾರೆ. ‘ಹೇಗೆ’ ಎಂದು ಈಜಿಪ್ಟ್ ಅಧ್ಯಕ್ಷರು ಕೇಳಿದಾಗ– ‘ಆ್ಯಡಮ್ ಮತ್ತು ಈವ್ ಇಬ್ಬರಿಗೂ ಅವರು ಇದ್ದ ತೋಟವನ್ನು ಬಿಟ್ಟರೆ ಇರಲು ಬೇರೆ ಮನೆ ಇರಲಿಲ್ಲ. ಮೈ ಮೇಲೊಂದು ಬಟ್ಟೆಯ ತುಣುಕೂ ಇರಲಿಲ್ಲ; ನಿಷಿದ್ಧ ಫಲವಾದ (forbidden fruit) ಸೇಬೊಂದನ್ನು ಬಿಟ್ಟರೆ ತಿನ್ನಲು ಬೇರೇನೂ ಇರಲಿಲ್ಲ. ಆದರೂ ಅವರು ತಾವು ಸ್ವರ್ಗದಲ್ಲಿದ್ದೇವೆಂಬ (ಪ್ಯಾರಡೈಸ್) ಭ್ರಮೆಯಲ್ಲಿದ್ದರು. ಕಮ್ಯುನಿಸಂ ಅಂದರೆ ಇನ್ನೇನು! ಹಾಗಾಗಿ ಅವರು ಕಮ್ಯುನಿಸ್ಟರೆಂದು ಒಪ್ಪಲು ಕಷ್ಟವೇನೂ ಇಲ್ಲ!’ ಎಂದು ಅವರು ಹೇಳಿದ ಕೂಡಲೇ ‘ಆ್ಯಡಮ್ ಮತ್ತು ಈವ್ ಕಮ್ಯುನಿಸ್ಟರಾಗಿದ್ದರೆಂದು ಒಪ್ಪಲು ಅಭ್ಯಂತರವಿಲ್ಲ’ ಎಂದು ಹೇಳಿ ರಷ್ಯಾದ ಅಧ್ಯಕ್ಷರ ಮಾತಿಗೆ ಸಮ್ಮತಿ ಇತ್ತರಂತೆ.

ಹೀಗೆ ಎಲ್ಲರನ್ನೂ ‘ಎಡಪಂಥಕ್ಕೆ ಸೇರಿದವರು’ ಎಂದು ವಾದಿಸುವುದು ಅವರ ಹಳೆಯ ಚಾಳಿಯೇ ಇರಬೇಕೆಂದು ನನ್ನ ಗುಮಾನಿ! ಎಸ್.ಎ. ಡಾಂಗೆಯವರ ‘ಸಂಘಜೀವನದಿಂದ ಗುಲಾಮಗಿರಿಗೆ’ ಎಂಬ ಗ್ರಂಥ ಕೂಡ ಇಂಥದೇ ಅಂಶಗಳನ್ನು ಪ್ರಸ್ತಾಪಿಸುತ್ತದೆಂದು ನನ್ನ ಕ್ಷೀಣ ನೆನಪು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT