ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಟ್ಲರ್‌ ಬೆನ್ನಿಗೆ ನಿಂತ ಸಿಲ್ವರ್‌ವುಡ್‌

Last Updated 14 ಜುಲೈ 2020, 11:56 IST
ಅಕ್ಷರ ಗಾತ್ರ

ಸೌತಾಂಪ್ಟನ್‌: ವೆಸ್ಟ್‌ ಇಂಡೀಸ್‌ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ರನ್‌ ಗಳಿಸಲು ಪರದಾಡಿದ್ದ ಜೋಸ್‌ ಬಟ್ಲರ್‌ ಅವರನ್ನು ಇಂಗ್ಲೆಂಡ್‌ ತಂಡದ ಮುಖ್ಯ ಕೋಚ್‌ ಕ್ರಿಸ್‌ಸಿಲ್ವರ್‌ವುಡ್‌ ಸಮರ್ಥಿಸಿಕೊಂಡಿದ್ದಾರೆ.

ಅನುಭವಿ ವಿಕೆಟ್‌ ಕೀಪರ್‌ ಬಟ್ಲರ್‌ ಹಿಂದಿನ 15 ಟೆಸ್ಟ್‌ ಇನಿಂಗ್ಸ್‌ಗಳಲ್ಲಿ ಒಂದೂ ಅರ್ಧಶತಕ ದಾಖಲಿಸಿಲ್ಲ. ವಿಂಡೀಸ್‌ ಎದುರಿನ ಪಂದ್ಯದಲ್ಲಿ ಅವರು ಜರ್ಮೈನ್‌ ಬ್ಲ್ಯಾಕ್‌ವುಡ್‌ ಅವರ ಕ್ಯಾಚ್‌ ಕೂಡ ಕೈಚೆಲ್ಲಿದ್ದರು. ಈ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದ ಬ್ಲ್ಯಾಕ್‌ವುಡ್‌ 95ರನ್‌ ಕಲೆಹಾಕಿ ಕೆರಿಬಿಯನ್‌ ತಂಡಕ್ಕೆ ಜಯ ತಂದುಕೊಟ್ಟಿದ್ದರು.

ಇನ್ನೆರಡು ಪಂದ್ಯಗಳಲ್ಲಿ ಮಿಂಚದೇ ಹೋದರೆ ಬಟ್ಲರ್‌ ಅವರ ಸ್ಥಾನಕ್ಕೆ ಕುತ್ತು ಎದುರಾಗಲಿದೆ ಎಂದು ಇಂಗ್ಲೆಂಡ್‌ನ ಹಿರಿಯ ಕ್ರಿಕೆಟಿಗ ಡರೆನ್‌ ಗಫ್‌ ಇತ್ತೀಚೆಗೆ ಹೇಳಿದ್ದರು.

‘ಬಟ್ಲರ್‌ ಅವರ ಸಾಮರ್ಥ್ಯವನ್ನು ಪ್ರಶ್ನಿಸುವ ಮೂಲಕ ಅವರನ್ನು ಇನ್ನಷ್ಟು ಒತ್ತಡಕ್ಕೆ ಸಿಲುಕಿಸುವ ಕೆಲಸವನ್ನು ನಾನು ಮಾಡುವುದಿಲ್ಲ. ಲಯ ಕಂಡುಕೊಳ್ಳಲು ಅವರಿಗೆ ಇನ್ನಷ್ಟು ಅವಕಾಶ ನೀಡುತ್ತೇವೆ’ ಎಂದು ಸಿಲ್ವರ್‌ವುಡ್‌ ತಿಳಿಸಿದ್ದಾರೆ.

‘ವಿಂಡೀಸ್‌ ಎದುರಿನ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸದಲ್ಲಿ ಬಟ್ಲರ್‌ ಉತ್ತಮ ಸಾಮರ್ಥ್ಯ ತೋರಿದ್ದರು. ಮೊದಲ ಇನಿಂಗ್ಸ್‌ನಲ್ಲೂ ಚೆನ್ನಾಗಿ ಆಡಿದ್ದರು. ಅವರು ಬೇಗನೆ ವಿಕೆಟ್‌ ಒಪ್ಪಿಸದೇ ದೊಡ್ಡ ಇನಿಂಗ್ಸ್‌ ಕಟ್ಟುವತ್ತ ಚಿತ್ತ ಹರಿಸಬೇಕು. ಇದು ಅವರಿಗೂ ಗೊತ್ತಿದೆ.ಬೆನ್‌ ಫೋಕಸ್‌ ಪ್ರತಿಭಾನ್ವಿತ ವಿಕೆಟ್‌ ಕೀಪರ್‌. ಅವರೂ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ’ಎಂದು 45 ವರ್ಷ ವಯಸ್ಸಿನ ಸಿಲ್ವರ್‌ವುಡ್‌ನುಡಿದಿದ್ದಾರೆ.

ಜೋ ಡೆನ್ಲಿ ಅವರ ವೈಫಲ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಅವರು ‘ಡೆನ್ಲಿ ಕಠಿಣ ಪರಿಶ್ರಮದಿಂದ ಅಭ್ಯಾಸ ನಡೆಸುತ್ತಾರೆ. ಪಂದ್ಯದ ವೇಳೆ ಅವರು ಒತ್ತಡಕ್ಕೆ ಒಳಗಾಗಿಬಿಡುತ್ತಾರೆ. ಹೀಗಾಗಿಯೇ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗುತ್ತಿಲ್ಲ’ ಎಂದಿದ್ದಾರೆ.

‘ವಿಂಡೀಸ್‌ ಎದುರಿನ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಜ್ಯಾಕ್‌ ಕ್ರಾವ್ಲಿ ಅಮೋಘವಾಗಿ ಆಡಿದರು. ಅವರ ಆಟದಲ್ಲಿ ಪ್ರಬುದ್ಧತೆ ಎದ್ದು ಕಾಣುತ್ತಿದೆ. ತಪ್ಪುಗಳನ್ನು ತಿದ್ದಿಕೊಂಡು ಸಾಗುತ್ತಿದ್ದಾರೆ. ವಿಂಡೀಸ್‌ ವಿರುದ್ಧ ಅವರು ಶತಕ ಗಳಿಸಬಹುದೆಂದು ನಿರೀಕ್ಷಿಸಿದ್ದೆವು. ಆದರೆ 76 ರನ್‌ಗಳಿಗೆ ಔಟಾಗಿ ಬಿಟ್ಟರು’ ಎಂದೂ ಹೇಳಿದ್ದಾರೆ.

ವಿಂಡೀಸ್‌ ಮತ್ತು ಇಂಗ್ಲೆಂಡ್‌ ನಡುವಣ ಎರಡನೇ ಟೆಸ್ಟ್‌ ಪಂದ್ಯವು ಗುರುವಾರದಿಂದ ಓಲ್ಡ್‌ ಟ್ರಾಫರ್ಡ್‌ನಲ್ಲಿ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT