ಬುಧವಾರ, ಸೆಪ್ಟೆಂಬರ್ 22, 2021
25 °C
ಆ್ಯಷಸ್‌ ಸರಣಿ ಎರಡನೇ ಟೆಸ್ಟ್‌ ಇಂದಿನಿಂಧ

ಸ್ಮಿತ್‌ ಕಟ್ಟಿಹಾಕಲು ಇಂಗ್ಲೆಂಡ್‌ ಯತ್ನ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಲಂಡನ್‌ : ರನ್‌ ಸುಗ್ಗಿಯಲ್ಲಿರುವ ಆಸ್ಟ್ರೇಲಿಯಾದ ಬ್ಯಾಟಿಂಗ್‌ ತಾರೆ ಸ್ಟೀವ್‌ ಸ್ಮಿತ್‌ ಅವರನ್ನು ಕಟ್ಟಿಹಾಕಲು ಇಂಗ್ಲೆಂಡ್‌ ತಂಡ ಜೋಫ್ರಾ ಆರ್ಚರ್‌ ಅವರನ್ನೊಳಗೊಂಡ ಭಿನ್ನ ದಾಳಿಯ ಸಂಯೋಜನೆಗೆ ಸಿದ್ಧತೆ ನಡೆಸಿದೆ. ಆ್ಯಷಸ್‌ ಸರಣಿಯ ಎರಡನೇ ಟೆಸ್ಟ್‌ ಬುಧವಾರ ಲಾರ್ಡ್ಸ್‌ನಲ್ಲಿ ಆರಂಭವಾಗಲಿದೆ.

ಇಂಗ್ಲೆಂಡ್‌ ನೆಲದಲ್ಲಿ 18 ವರ್ಷಗಳ ನಂತರ ಆ್ಯಷಸ್‌ ಸರಣಿ ಗೆಲ್ಲುವ ಇರಾದೆಯಲ್ಲಿರುವ ಆಸ್ಟ್ರೇಲಿಯಾ, ಎಜ್‌ಬಾಸ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯವನ್ನು 251 ರನ್‌ಗಳ ಭಾರಿ ಅಂತರದಿಂದ ಗೆದ್ದುಕೊಂಡಿತ್ತು. ಚೆಂಡು ವಿರೂಪ ಹಗರಣದಲ್ಲಿ ಒಂದು ವರ್ಷ ನಿಷೇಧ ಶಿಕ್ಷೆ ಅನುಭವಿಸಿದ್ದ ಸ್ಮಿತ್‌ ಎರಡೂ ಇನಿಂಗ್ಸ್‌ಗಳಲ್ಲಿ ಅತ್ಯಮೂಲ್ಯ ಶತಕ ಬಾರಿಸಿ ಆತಿಥೇಯರಿಗೆ ತಲೆನೋವಾಗಿದ್ದರು. 

ಮೊದಲ ಟೆಸ್ಟ್‌ ಸೋತ ನಂತರ ಆ್ಯಷಸ್‌ ಸರಣಿಯನ್ನು ಇಂಗ್ಲೆಂಡ್‌ ಗೆದ್ದುಕೊಂಡಿರುವುದು ಎರಡು ಬಾರಿ ಮಾತ್ರ. 1981ರಲ್ಲಿ ಇಯಾನ್‌ ಬೋಥಂ ಅವರ ಅಮೋಘ ಆಲ್‌ರೌಂಡ್‌ ಆಟದಿಂದ ಸರಣಿ ಗೆದ್ದುಕೊಂಡಿತ್ತು. 2005ರಲ್ಲೂ ಇಂಗ್ಲೆಂಡ್‌ ಮೊದಲ ಟೆಸ್ಟ್‌ ಸೋಲಿನಿಂದ ಚೇತರಿಸಿ 2–1 ರಿಂದ ಸರಣಿ ತನ್ನದಾಗಿಸಿಕೊಂಡಿತ್ತು.

ಮೀನಖಂಡದ ಸಮಸ್ಯೆಯಿಂದಾಗಿ 37 ವರ್ಷದ ವೇಗಿ ಜೇಮ್ಸ್‌ ಆ್ಯಂಡರ್ಸನ್‌ ಕೇವಲ ನಾಲ್ಕು ಓವರ್‌ ಬೌಲ್‌ ಮಾಡಿ ನಿರ್ಗಮಿಸಿದ್ದು ಇಂಗ್ಲೆಂಡ್‌ನ ಹಿನ್ನಡೆಯಾಗಿದೆ. ಆ್ಯಷಸ್‌ ಸರಣಿಯಲ್ಲಿ ಅತ್ಯಧಿಕ ವಿಕೆಟ್‌ ದಾಖಲೆ ಹೊಂದಿರುವ ಅವರ ಅನುಪಸ್ಥಿತಿಯಲ್ಲಿ ವಿಶ್ವಕಪ್‌ ಹೀರೊ, 24 ವರ್ಷದ ಜೋಫ್ರಾ ಆರ್ಚರ್‌ ಟೆಸ್ಟ್‌ ಪದಾರ್ಪಣೆಗೆ ಸಜ್ಜಾಗಿದ್ದಾರೆ.

ಪಕ್ಕೆಲುಬಿನ ನೋವಿನಿಂದ ಮೊದಲ ಟೆಸ್ಟ್‌ನಿಂದ ಹೊರಬಿದ್ದಿದ್ದ ಆರ್ಚರ್‌, ಗ್ಲಾಸ್ಟರ್‌ಶೈರ್‌ ವಿರುದ್ಧ ಸಸೆಕ್ಸ್‌ ಪರ 27 ರನ್ನಿಗೆ 6 ವಿಕೆಟ್‌ ಪಡೆದು ತಾವು ಫಿಟ್‌ ಆಗಿರುವುದನ್ನು ಸಾಬೀತುಪಡಿಸಿದ್ದಾರೆ.

ಇಂಗ್ಲೆಂಡ್‌, ಈ ಪಂದ್ಯದಲ್ಲಿ ಎಡಗೈ ಸ್ಪಿನ್ನರ್‌ ಜಾಕ್‌ ಲೀಚ್‌ ಅವರನ್ನೂ ಆಡಿಸಲಿದೆ. ಐರ್ಲೆಂಡ್‌ ಎದುರಿನ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಅವರು 92 ರನ್‌ ಬಾರಿಸಿದ್ದರು. ಮೊಯಿನ್‌ ಅಲಿ ಅವರನ್ನು ಕೈಬಿಟ್ಟ ಕಾರಣ ಲೀಚ್‌ ಹಾದಿ ಸುಗಮವಾಗಿದೆ.

ಆಸ್ಟ್ರೇಲಿಯಾ ತಂಡ, ಎರಡನೇ ಟೆಸ್ಟ್‌ಗೆ ವೇಗದ ಬೌಲರ್‌ ಜೇಮ್ಸ್‌ ಪ್ಯಾಟಿನ್ಸನ್‌ ಅವರನ್ನು ಕೈಬಿಟ್ಟಿದೆ. ಪುನರಾಗಮನ ಯತ್ನದಲ್ಲಿರುವ ಮಿಷೆಲ್‌ ಸ್ಟಾರ್ಕ್‌ ಮತ್ತು ಜೋಶ್‌ ಹ್ಯಾಜೆಲ್‌ವುಡ್‌ ಆ ಸ್ಥಾನಕ್ಕೆ ಪೈಪೋಟಿಯಲ್ಲಿದ್ದಾರೆ.

12 ಆಟಗಾರರ ತಂಡಗಳು ಇಂತಿವೆ:

ಇಂಗ್ಲೆಂಡ್‌: ಜೋ ರೂಟ್‌ (ಕ್ಯಾಪ್ಟನ್‌), ಜೇಸನ್‌ ರಾಯ್‌, ಜೊ ಡೆನ್ಲಿ, ಬೆನ್‌ ಸ್ಟೋಕ್ಸ್‌, ಸ್ಯಾಮ್‌ ಕರನ್‌, ಜಾನಿ ಬೇಸ್ಟೊ, ಜೋಸ್‌ ಬಟ್ಲರ್‌, ರೋರಿ ಜೋಸೆಫ್‌ ಬರ್ನ್ಸ್‌, ಕ್ರಿಸ್‌ ವೋಕ್ಸ್‌, ಜಾಕ್‌ ಲೀಚ್‌, ಜೋಫ್ರಾ ಆರ್ಚರ್‌, ಸ್ಟುವರ್ಟ್‌ ಬ್ರಾಡ್‌.

ಆಸ್ಟ್ರೇಲಿಯಾ: ಟಿಮ್‌ ಪೇನ್‌ (ಕ್ಯಾಪ್ಟನ್‌– ವಿಕೆಟ್‌ ಕೀಪರ್‌), ಡೇವಿಡ್‌ ವಾರ್ನರ್‌, ಕ್ಯಾಮರೂನ್‌ ಬ್ಯಾಂಕ್ರಾಫ್ಟ್‌, ಉಸ್ಮಾನ್‌ ಖ್ವಾಜಾ, ಸ್ಟೀವ್‌ ಸ್ಮಿತ್‌, ಟ್ರಾವಿಸ್‌ ಹೆಡ್‌, ಮ್ಯಾಥ್ಯೂ ವೇಡ್‌, ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಪೀಟರ್‌ ಸಿಡಲ್‌, ನಥಾನ್‌ ಲಯಾನ್‌, ಜೋಶ್‌ ಹ್ಯಾಜಲ್‌ವುಡ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು