ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಹಾರ್ದಿಕ್ ಪಾಂಡ್ಯ

Published 25 ಮಾರ್ಚ್ 2024, 13:46 IST
Last Updated 25 ಮಾರ್ಚ್ 2024, 13:46 IST
ಅಕ್ಷರ ಗಾತ್ರ

ಬೆಂಗಳೂರು: ಐದು ಬಾರಿಯ ಐಪಿಎಲ್ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡ ಹಾರ್ದಿಕ್ ಪಾಂಡ್ಯ ಅವರು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ಭಾನುವಾರ ರಾತ್ರಿ ಐಪಿಎಲ್ ಪಂದ್ಯ ನಡೆದ ಅಹಮದಾಬಾದಿನ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೇರಿದ್ದ ಸುಮಾರು ಒಂದು ಲಕ್ಷ ಪ್ರೇಕ್ಷಕರ ಗ್ಯಾಲರಿಗಳಿಂದ ಹಾರ್ದಿಕ್‌ ಅವರನ್ನು ಹಾರ್ದಿಕ್ ಅವರಿಗೆ ಬೂ..ಬೂ.. ಎಂದು ಗೇಲಿ ಮಾಡಿದರು. ಈ ಪಂದ್ಯದಲ್ಲಿ ಮುಂಬೈ ತಂಡವು ಗುಜರಾತ್ ಟೈಟನ್ಸ್‌ ವಿರುದ್ಧ ಸೋತಿತು. ಎರಡೂ ತಂಡಗಳ ಅಭಿಮಾನಿಗಳಿಂದಲೂ ಹಾರ್ದಿಕ್ ಟೀಕೆಗೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ  ಮಹಾಪೂರವೇ ಉಕ್ಕುತ್ತಿದೆ. ಸೋತಿದ್ದಕ್ಕೆ ಹಾರ್ದಿಕ್ ಮತ್ತು ತಿಲಕ್ ವರ್ಮಾ ಅವರ ಆಟದ ವೈಖರಿಯೇ ಕಾರಣ ಎಂದೂ ಟೀಕಿಸಿದ್ದಾರೆ. 

ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಮುಂಬೈ ತಂಡದ ನಿಕಟಪೂರ್ವ ನಾಯಕ ರೋಹಿತ್ ಶರ್ಮಾ ಅವರೊಂದಿಗಿನ ಹಾರ್ದಿಕ್ ಅವರ ನಡವಳಿಕೆಯು ಟೀಕೆಗೊಳಗಾಗಿದೆ. ಭಾರತ ತಂಡದ ನಾಯಕರೂ ಆಗಿರುವ ರೋಹಿತ್ ಅವರನ್ನು ಲಾಂಗ್‌ ಆನ್‌ನಲ್ಲಿ ಫೀಲ್ಡಿಂಗ್‌ಗೆ ಕಳಿಸಿದ್ದು, ಪದೇ ಪದೇ ಅವರ ಪೊಸಿಷನ್‌ ಬದಲಾವಣೆ ಮಾಡಿದ್ದು ಟೀಕೆಗೊಳಗಾಗಿದೆ. ರೋಹಿತ್ ಅವರು ಹೆಚ್ಚಾಗಿ 30 ಯಾರ್ಡ್‌ ವೃತ್ತದೊಳಗೇ ಫೀಲ್ಡಿಂಗ್ ಮಾಡುವುದು ರೂಢಿ. ಅವರನ್ನು ದಿಢೀರ್ ಆಗಿ ‘ಲಾಂಗ್‌ ಆನ್‌ಗೆ ಹೋಗು ’ ಎಂದು ಹಾರ್ದಿಕ್ ಹೇಳಿದ ರೀತಿಯಿಂದ ಸ್ವತಃ ರೋಹಿತ್ ಕೂಡ ಅಚ್ಚರಿಗೊಂಡಿದ್ದರು. ಆದರೆ ರೋಹಿತ್ ಯಾವುದೇ ಗೊಂದಲಕ್ಕೆ ಅವಕಾಶ ಕೊಡದೇ ಫೀಲ್ಡಿಂಗ್ ಮಾಡಿದರು. ಗುಜರಾತ್ ಬ್ಯಾಟರ್ ಶುಭಮನ್ ಗಿಲ್ ಅವರ ಕ್ಯಾಚ್‌ ಕೂಡ ಪಡೆದರು. ನಂತರ ಬ್ಯಾಟಿಂಗ್‌ನಲ್ಲಿಯೂ ಮಿಂಚಿದ ರೋಹಿತ್ ಅವರಿಗೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಅವರ ಪರವಾಗಿ ಘೋಷಣೆಗಳನ್ನು ಕೂಗಿದರು. 

ಸಾಮಾಜಿಕ ಜಾಲತಾಣಗಳಲ್ಲಿ ರೋಹಿತ್ ಅವರ ಪರವಾಗಿ ದೊಡ್ಡಮಟ್ಟದ ಪ್ರಚಾರ ಶುರುವಾಗಿದೆ. ಹಾರ್ದಿಕ್ ಅವರ ನಡೆ ಅಹಂಕಾರದ್ದು ಎಂದು ಟೀಕಿಸಲಾಗುತ್ತಿದೆ. ಬಾಹುಬಲಿ ಚಲನಚಿತ್ರದ ನಾಯಕನಿಗೆ ರೋಹಿತ್ ಅವರನ್ನೂ ಖಳನಾಯಕನ ಪಾತ್ರಧಾರಿಯನ್ನು ಹಾರ್ದಿಕ್‌ ಅವರಿಗೂ ಹೋಲಿಕೆ ಮಾಡಿ ರಚಿಸಲಾಗಿರುವ ವಿಡಿಯೊಗಳು ಮತ್ತು ಮಿಮ್‌ಗಳು ಗಮನ ಸೆಳೆಯುತ್ತಿವೆ. 

ಹಾರ್ದಿಕ್ ಅವರ ಬಗ್ಗೆ ಟೀಕೆಗಳು ವ್ಯಕ್ತವಾಗಲು ಇನ್ನೂ ಒಂದು ಕಾರಣ ಇದೆ.  ಕಳೆದ ಎರಡು ವರ್ಷ ಅವರು ಗುಜರಾತ್ ಟೈಟನ್ಸ್ ತಂಡದ ನಾಯಕರಾಗಿದ್ದರು. ಇದೇ ಅಂಗಳದಲ್ಲಿ  ಅವರ ಮುಂದಾಳತ್ವದಲ್ಲಿ ತಂಡವು ಒಂದು ಬಾರಿ ಚಾಂಪಿಯನ್, ಮತ್ತೊಂದು ಬಾರಿ ರನ್ನರ್ಸ್ ಅಪ್ ಆಗಿತ್ತು. ಈ ವರ್ಷ ಅವರು ಮುಂಬೈಗೆ ಜಿಗಿದಿದ್ದರು. ಭವಿಷ್ಯದ ನಾಯಕತ್ವ ರೂಪಿಸುವ ಭಾಗವಾಗಿ ಹಾರ್ದಿಕ್ ಅವರನ್ನು ನಾಯಕರನ್ನಾಗಿ ಮಾಡಿ ರೋಹಿತ್ ಅವರನ್ನು ಆಟಗಾರನಾಗಿ ಮುಂದುವರಿಸಿತು.  ಮೂಲತಃ ಗುಜರಾತ್ ರಾಜ್ಯದವರೇ ಆದ ಹಾರ್ದಿಕ್, ತವರಿನ ತಂಡವನ್ನು ತೊರೆದು ಹೋಗಿದ್ದು ಕೂಡ ಅಭಿಮಾನಿಗಳ ವಲಯದಲ್ಲಿ ಬೇಸರಕ್ಕೆ ಕಾರಣವಾಗಿತ್ತು. 

ಹಾರ್ದಿಕ್ ಅವರು ಗುಜರಾತ್‌ ತಂಡಕ್ಕೆ ಹೋಗುವ ಮುನ್ನ ಕೆಲವು ವರ್ಷಗಳ ಕಾಲ ರೋಹಿತ್ ನಾಯಕತ್ವದಲ್ಲಿ ಮುಂಬೈ ತಂಡದಲ್ಲಿ ಆಡಿದ್ದರು. 

ಗುಜರಾತ್ ತಂಡವನ್ನು ಜಯದತ್ತ ಮುನ್ನಡೆಸಿದ ಯುವ ನಾಯಕ ಶುಭಮನ್ ಗಿಲ್ ಅವರ ನಾಯಕತ್ವ, ಬೌಲಿಂಗ್ ಹಾಗೂ ಫೀಲ್ಡಿಂಗ್ ನಿಯೋಜನೆಯ ತಂತ್ರಗಾರಿಕೆಗಳ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT