ಶನಿವಾರ, ಸೆಪ್ಟೆಂಬರ್ 18, 2021
21 °C
ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ಎದುರಿನ ಐದನೇ ಟೆಸ್ಟ್ ಇಂದಿನಿಂದ: ಪಂದ್ಯ ಡ್ರಾ ಆದರೂ ವಿರಾಟ್ ಬಳಗಕ್ಕೆ ಸರಣಿ

IND vs ENG: ಇಂದಿನಿಂದ 5ನೇ ಟೆಸ್ಟ್ ಆರಂಭ– ಭಾರತಕ್ಕೆ ಐತಿಹಾಸಿಕ ಜಯದ ತವಕ

ಪಿಟಿಐ Updated:

ಅಕ್ಷರ ಗಾತ್ರ : | |

prajavani

ಮ್ಯಾಂಚೆಸ್ಟರ್: ವಿರಾಟ್ ಕೊಹ್ಲಿ ನಾಯಕತ್ವದ ಬಳಗವು ಇಂಗ್ಲೆಂಡ್ ತಂಡದ ಎದುರು ಐತಿಹಾಸಿಕ ಸರಣಿ ಜಯ ಸಾಧನೆಯ ಹೊಸ್ತಿಲಲ್ಲಿದೆ. 

ಶುಕ್ರವಾರ ಓಲ್ಡ್ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಆರಂಭವಾಗ
ಲಿರುವ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಜಯಿಸಿದರೆ ಅಥವಾ ಡ್ರಾ ಮಾಡಿಕೊಂಡರೂ ಭಾರತ ಸರಣಿ ಜಯದ ಸಂಭ್ರಮದಲ್ಲಿ ತೇಲಾಡುವುದು ಖಚಿತ. ಈಗಾಗಲೇ 2–1ರಿಂದ ಮುಂದಿರುವ ತಂಡಕ್ಕೆ ಸರಣಿ ಸೋಲಿನ ಭೀತಿಯಂತೂ ಇಲ್ಲ. ಇದರಿಂದಾಗಿ ಆತ್ಮವಿಶ್ವಾಸದ ಆಗಸದಲ್ಲಿ ವಿರಾಟ್ ಬಳಗ ತೇಲಾಡುತ್ತಿದೆ.

ಆದರೆ ಜೋ ರೂಟ್ ನಾಯಕತ್ವದ ಇಂಗ್ಲೆಂಡ್ ತಂಡಕ್ಕೆ ಈ ಪಂದ್ಯದಲ್ಲಿ ಜಯಿಸಲೇಬೇಕಾದ ಒತ್ತಡವಿದೆ. ಸರಣಿ ಜಯದ ಆಸೆಯಂತೂ ತಂಡಕ್ಕೆ ಕಮರಿದೆ. ಗೆದ್ದರೆ ಸಮ ಮಾಡಿಕೊಂಡು ಸಮಾಧಾನಪಡುವ ಅವಕಾಶ ಮಾತ್ರ ಈಗ ಇದೆ. ಆದರೆ, ಪಂದ್ಯದಲ್ಲಿ ಎರಡು ದಿನಗಳಲ್ಲಿ ಮಳೆ ಬರುವ ಬಗ್ಗೆ ಹವಾಮಾನ ವರದಿಗಳು ಇವೆ. ಆದ್ದರಿಂದ ಪಂದ್ಯದ ಫಲಿತಾಂಶ ಹೊರಹೊಮ್ಮದಿರುವ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತಿದೆ. 

ಈ ಸರಣಿಯಲ್ಲಿ ಗೆದ್ದರೆ ವಿದೇಶಿ ನೆಲದಲ್ಲಿ ಸತತ ಎರಡು  ಸರಣಿಗಳನ್ನು ಗೆದ್ದ ಪ್ರಥಮ ನಾಯಕನೆಂಬ ಹೆಗ್ಗಳಿಕೆಗೆ ವಿರಾಟ್ ಪಾತ್ರರಾಗುವರು. 2018–19ರಲ್ಲಿ ವಿರಾಟ್ ನಾಯಕತ್ವದಲ್ಲಿ ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದಿತ್ತು.

ರಹಾನೆಗೆ ಕೊನೆ ಅವಕಾಶ?

ಬ್ಯಾಟಿಂಗ್‌ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಉಪನಾಯಕ ಅಜಿಂಕ್ಯ ರಹಾನೆ ಅವರಿಗೆ ಲಯಕ್ಕೆ ಮರಳಲು ಕೊನೆಯ ಅವಕಾಶ ಸಿಗಬಹುದು.  ಹಾಗೊಂದು ವೇಳೆ ಅವರನ್ನು ಕೈಬಿಟ್ಟರೆ, ಸೂರ್ಯಕುಮಾರ್ ಯಾದವ್ ಅಥವಾ ಹನುಮವಿಹಾರಿಗೆ ಅವಕಾಶ ಸಿಗಬಹುದು.

ಕೊರೊನಾ ಸೋಂಕು ತಗುಲಿರುವುದರಿಂದ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಅವರು ಲಂಡನ್‌ನಲ್ಲಿ ಐಸೋಲೆಷನ್‌ನಲ್ಲಿದ್ದಾರೆ. ಆದ್ದರಿಂದ ಅವರ ಗೈರುಹಾಜರಿನಲ್ಲಿ ವಿರಾಟ್ ಹನ್ನೊಂದರ ಬಳಗವನ್ನು ಆಯ್ಕೆ ಮಾಡಲಿದ್ದಾರೆ. ಓವಲ್ ಟೆಸ್ಟ್‌ನ ವಿಜೇತ ತಂಡವನ್ನೇ ಮುಂದುವರಿಸುವ ಇರಾದೆಯೂ  ಅವರದ್ದಾಗಿರಬಹುದು.

ಆದರೆ, ಆ ಪಂದ್ಯದಲ್ಲಿ ಗಾಯಗೊಂಡಿದ್ದ ರೋಹಿತ್ ಶರ್ಮಾ ಮತ್ತು ಚೇತೇಶ್ವರ್ ಪೂಜಾರ ಅವರ ಫಿಟ್‌ನೆಸ್‌ ಮೇಲೆ ವೈದ್ಯಕೀಯ ತಂಡ ನಿಗಾ ಇರಿಸಿದೆ. ಪಂದ್ಯದ ದಿನ ಬೆಳಿಗ್ಗೆಯಷ್ಟೇ ಅವರು ಕಣಕ್ಕಿಳಿಯುವ ಬಗ್ಗೆ ಖಚಿತವಾಗಲಿದೆ. ರೋಹಿತ್ ಆಡದಿದ್ದರೆ ಕರ್ನಾಟಕದ ಮಯಂಕ್ ಅಗರವಾಲ್ ಅಥವಾ ಅಭಿಮನ್ಯು ಈಶ್ವರನ್ ಅವರಿಗೆ ಅವಕಾಶ ಸಿಗಬಹುದು. ಪೂಜಾರ ಕಣಕ್ಕಿಳಿಯದಿದ್ದರೆ ಹನುಮವಿಹಾರಿ ಆಡಬಹುದು.

ಮೊಹಮ್ಮದ್ ಶಮಿ ಫಿಟ್ ಆಗಿರುವುದರಿಂದ ಅವರು ಆಡುವುದು ಬಹುತೇಕ ಖಚಿತವಾಗಿದೆ. ಬೂಮ್ರಾ ಸತತ ನಾಲ್ಕು ಪಂದ್ಯಗಳಲ್ಲಿಯೂ ಚೆನ್ನಾಗಿ ಆಡಿದ್ದಾರೆ. ರಿವರ್ಸ್‌ ಸ್ವಿಂಗ್‌ಗಳ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದಾರೆ. ಆದ್ದರಿಂದ ಅವರನ್ನು ಉಳಿಸಿಕೊಂಡು ಮೊಹಮ್ಮದ್ ಸಿರಾಜ್ ಗೆ ವಿಶ್ರಾಂತಿ ಕೊಡುವ ಸಾಧ್ಯತೆಯೇ ಹೆಚ್ಚಿದೆ. ಕಳೆದ ಪಂದ್ಯದಲ್ಲಿ ಉತ್ತಮವಾಗಿ ಆಡಿರುವ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಮತ್ತು ಮಧ್ಯಮವೇಗಿ ಉಮೇಶ್ ಯಾದವ್‌ ಈ ಪಂದ್ಯದಲ್ಲಿಯೂ ಆಡಲಿಳಿಯುವುದು ಖಚಿತ.

ಆದರೆ ಇಂಗ್ಲೆಂಡ್ ತಂಡದ ಬೌಲರ್‌ಗಳ ಮುಂದೆ ಭಾರತ ತಂಡದ ಎಲ್ಲ ವಿಕೆಟ್‌ಗಳನ್ನೂ ಗಳಿಸುವ ಒತ್ತಡವಿದೆ. 9 ಮತ್ತು 10ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನೂ ನಿರ್ಲಕ್ಷಿಸುವಂತಿಲ್ಲ. ಅನುಭವಿ ಜೇಮ್ಸ್ ಆ್ಯಂಡರ್ಸನ್, ಒಲಿ ರಾಬಿನ್ಸನ್, ಮಾರ್ಕ್ ವುಡ್ ಅವರು ತಮ್ಮ ಸ್ವಿಂಗ್ ಅಸ್ತ್ರಗಳನ್ನು ಮತ್ತಷ್ಟು ಮೊನಚು ಮಾಡಿಕೊಳ್ಳುವ ಅನಿವಾರ್ಯತೆ ಇದೆ.

 ಓಲ್ಡ್ ಟ್ರಾಫರ್ಡ್ ಪಿಚ್ ಸ್ಪಿನ್ನರ್‌ಗಳಿಗೆ ನೆರವು ನೀಡಿದರೆ ಮೋಯಿನ್ ಅಲಿ ಪರಿಣಾಮಕಾರಿಯಾಗಬಲ್ಲರು. ಅವರೊಂದಿಗೆ ಜ್ಯಾಕ್ ಲೀಚ್ ಕೂಡ ಕಣಕ್ಕಿಳಿಯುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು