ಸೋಮವಾರ, ಮೇ 23, 2022
28 °C

ನೆಟ್ಸ್‌ಗೆ ಮರಳಿದ ಅಕ್ಷರ್ ಪಟೇಲ್; ನದೀಮ್‌ಗೆ ಕೊಕ್ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಗಾಯದಿಂದ ಚೇತರಿಸಿಕೊಂಡಿರುವ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ನೆಟ್ಸ್‌ ಅಭ್ಯಾಸಕ್ಕೆ ಮರಳಿದ್ದಾರೆ.

ಇದೇ 13ರಿಂದ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ಅಕ್ಷರ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ ಶಹಬಾಜ್ ನದೀಮ್ ಬೆಂಚ್‌ಗೆ ಮರಳುವುದು ಬಹುತೇಕ ಖಚಿತವಾಗಿದೆ. 38 ಅಂತರರಾಷ್ಟ್ರೀಯ ಏಕದಿನ ಮತ್ತು 11 ಟ್ವಿಂಟಿ20 ಪಂದ್ಯಗಳನ್ನು ಆಡಿರುವ ಗುಜರಾತಿನ ಅಕ್ಷರ್ ಟೆಸ್ಟ್ ಪದಾರ್ಪಣೆಗೆ ಕಾದಿದ್ದಾರೆ.

’ಅಕ್ಷರ್ ಅವರಿಗೆ ಮೊಣಕಾಲಿನ ನೋವಿತ್ತು. ಇದೀಗ ಅವರು ಚೇತರಿಸಿಕೊಂಡಿದ್ದಾರೆ. ನೆಟ್ಸ್‌ನಲ್ಲಿ ಬ್ಯಾಟಿಂಗ್ ಕೂಡ ಮಾಡುತ್ತಿದ್ದಾರೆ.  ಮುಂದಿನ ಒಂದೆರಡು ದಿನಗಳಲ್ಲಿ ಬೌಲಿಂಗ್ ಆರಂಭಿಸುವ ಸಾಧ್ಯತೆ ಇದೆ‘ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.

’ಮೊದಲ ಟೆಸ್ಟ್‌ನಲ್ಲಿ ಅವರಿಗೆ ಅವಕಾಶ ನೀಡುವ ಎಲ್ಲ ಸಾಧ್ಯತೆಗಳೂ ಇದ್ದವು. ಆದರೆ ಅವರ ಗಾಯದ ಕಾರಣದಿಂದಾಗಿ ಪರಿಗಣಿಸಲಿಲ್ಲ. ಮುಂದಿನ ಪಂದ್ಯದಲ್ಲಿ ಅವರಿಗೆ ಅವಕಾಶ ನೀಡುವ ಕುರಿತು ಮುಖ್ಯ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ನಾಯಕ ವಿರಾಟ್ ಕೊಹ್ಲಿ ನಿರ್ಧಾರ ಕೈಗೊಳ್ಳುವರು‘ ಎಂದು ತಿಳಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಭಾರತ ತಂಡವು ಹೀನಾಯ ಸೋಲನುಭವಿಸಿತ್ತು. ನಂತರದ ಸುದ್ದಿಗೋಷ್ಠಿಯಲ್ಲಿ ವಿರಾಟ್, ’ನದೀಂ ಮತ್ತು ಸುಂದರ್ ಅವರು ಬೌಲಿಂಗ್‌ನಲ್ಲಿ ಸಫಲರಾಗಲಿಲ್ಲ. ಜಸ್‌ಪ್ರೀತ್ ಬೂಮ್ರಾ, ಇಶಾಂತ್ ಶರ್ಮಾ ಮತ್ತು ಆರ್. ಅಶ್ವಿನ್ ಅವರು ಬ್ಯಾಟ್ಸ್‌ಮನ್‌ಗಳಿಗೆ ಒತ್ತಡ ಹೇರುವಲ್ಲಿ ಸಫಲರಾಗಿದ್ದರು. ಆದರೆ ಇಬ್ಬರು ಯುವ ಬೌಲರ್‌ಗಳಿಂದ ಅಂತಹ ಸಾಮರ್ಥ್ಯ ಕಂಡುಬರಲಿಲ್ಲ‘ ಎಂದಿದ್ದರು.

ನದೀಂ ಪಂದ್ಯದಲ್ಲಿ ಒಟ್ಟು 59 ಓವರ್‌ ಬೌಲಿಂಗ್ ಮಾಡಿ 233 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು.  ಅದರಲ್ಲೂ ಅವರ ಒಟ್ಟು ಒಂಬತ್ತು ಎಸೆತಗಳು ನೋಬಾಲ್ ಆಗಿದ್ದವು.

ಬೌಲಿಂಗ್ ಮಾಡುವಾಗ ತಾವು ಜಂಪ್ ಮಾಡುವ ಶೈಲಿಯಲ್ಲಿ ಸಮಸ್ಯೆ ಇರುವುದಾಗಿ ನದೀಂ ಅವರೇ ಹೇಳಿಕೊಂಡಿದ್ದಾರೆ.

ಆದರೆ, ವಾಷಿಂಗ್ಟನ್ ಸುಂದರ್ ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದರು. ಆದ್ದರಿಂದ ಅವರು ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆ ಇದೆ.

ಜೋಫ್ರಾ ಆರ್ಚರ್  ಎಸೆತವನ್ನು ಆಡುವ ಸಂದರ್ಭದಲ್ಲಿ ಆರ್. ಅಶ್ವಿನ್ ಕೈಗೆ ಚೆಂಡು ಬಡಿದು ಗಾಯವಾಗಿತ್ತು. ಆದರೆ ಅವರು ಫಿಟ್ ಆಗಿದ್ದಾರೆಂದು ತಂಡದ ಮೂಲಗಳು ಸ್ಷಷ್ಟಪಡಿಸಿವೆ.

ಪಿಚ್‌ ಕ್ಯುರೇಟರ್‌ ಮೇಲೆ ಹೊಣೆ: ಎರಡನೇ ಟೆಸ್ಟ್‌ಗೆ ಪಿಚ್‌ ಸಿದ್ಧಗೊಳಿಸುತ್ತಿರುವ ತಮಿಳುನಾಡು ಕ್ರಿಕೆಟ್ ಸಂಸ್ಥೆ ಯ ಕ್ಯುರೇಟರ್ ವಿ ರಮೇಶ್ ಕುಮಾರ್ ಮತ್ತು ಬಿಸಿಸಿಐ ಪಿಚ್ ವಿಭಾಗದ ಮುಖ್ಯಸ್ಥ ತಪೋಷ್ ಚಟರ್ಜಿ ಅವರ ಮೇಲೆ ಈಗ ಎಲ್ಲರ ಗಮನ ಕೇಂದ್ರಿಕೃತವಾಗಿದೆ.

ಮೊದಲ ಟೆಸ್ಟ್ ನಡೆದ ಪಿಚ್‌ನ ಪಕ್ಕದಲ್ಲಿಯೇ ಇರುವ ಅಂಕಣವನ್ನು ಮುಂದಿನ ಟೆಸ್ಟ್‌ಗೆ ಸಿದ್ಧಗೊಳಿಸಲಾಗುತ್ತಿದೆ. ಈ ಮೊದಲು ಅದರ ಮೇಲೆ ಹಸಿರು ಹುಲ್ಲಿನ ಎಸಳುಗಳು ಯಥೇಚ್ಚವಾಗಿ ಇದ್ದವು. ಆದರೆ, ಮುಂದಿನ  ಎರಡು–ಮೂರು ದಿನಗಳಲ್ಲಿ ನೀರು ಸಿಂಪಡಿಸುವುದನ್ನು ನಿಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಖರ ಬಿಸಿಲಿನಲ್ಲಿ ಪಿಚ್‌ ಸಂಪೂರ್ಣ ಒಣಗಿದರೆ ಬೇಗನೆ ಬಿರುಕುಗಳು ಆಗುತ್ತವೆ. ಆಗ ಸ್ಪಿನ್ನರ್‌ಗಳಿಗೆ ಪಿಚ್ ನೆರವಾಗುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು