ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್ ನಿಧನ

Published 3 ಸೆಪ್ಟೆಂಬರ್ 2023, 7:47 IST
Last Updated 3 ಸೆಪ್ಟೆಂಬರ್ 2023, 7:47 IST
ಅಕ್ಷರ ಗಾತ್ರ

ಜೊಹಾನೆಸ್‌ಬರ್ಗ್: ಜಿಂಬಾಬ್ವೆಯ ದಿಗ್ಗಜ ಕ್ರಿಕೆಟಿಗರಲ್ಲೊಬ್ಬರಾದ ಹೀತ್‌ ಸ್ಟ್ರೀಕ್‌ (49) ಭಾನುವಾರ ನಿಧನರಾದರು. ಕಳೆದ ಕೆಲ ಸಮಯಗಳಿಂದ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

ಜಿಂಬಾಬ್ವೆಯ ಬುಲವಾಯೊ ನಗರದಿಂದ 55 ಕಿ.ಮೀ ದೂರದಲ್ಲಿರುವ ನಿವಾಸದಲ್ಲಿ ಬೆಳಗಿನ ಜಾವ ಅವರು ಕೊನೆಯುಸಿರೆಳೆದರು. ಈ ವಿಷಯವನ್ನು ಅವರ ಪತ್ನಿ ನಾದಿನ್‌ ಸ್ಟ್ರೀಕ್‌ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. ಸ್ಟ್ರೀಕ್‌ ಕೊನೆಯ ದಿನಗಳನ್ನು ಕುಟುಂಬದ ಸದಸ್ಯರು ಮತ್ತು ಪ್ರೀತಿಪಾತ್ರರ ಜತೆ ಕಳೆಯಲು ಬಯಸಿದ್ದರು ಎಂದು ಹೇಳಿದ್ದಾರೆ.

'ಸ್ಟ್ರೀಕ್‌, ಕ್ಯಾನ್ಸರ್‌ಗೆ ಚಿಕಿತ್ಸೆಗಾಗಿ ಆಗಿಂದಾಗ್ಗೆ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸುತ್ತಿದ್ದರು. ಹುಟ್ಟೂರಿನಲ್ಲಿ ಅವರು ತಮ್ಮ ಹೆಚ್ಚಿನ ಸಮಯವನ್ನು ಮೀನುಗಾರಿಕೆ, ಕೃಷಿ ಮತ್ತು ಹೈನುಗಾರಿಕೆಯಲ್ಲಿ ಕಳೆಯುತ್ತಿದ್ದರು’ ಎಂದು ಅವರ ಕುಟುಂಬದ ಸದಸ್ಯರೊಬ್ಬರು ತಿಳಿಸಿದರು.

ವೇಗದ ಬೌಲರ್‌ ಆಗಿದ್ದ ಸ್ಟ್ರೀಕ್‌, ಉಪಯುಕ್ತ ಬ್ಯಾಟರ್‌ ಆಗಿಯೂ ಗುರುತಿಸಿಕೊಂಡಿದ್ದರು. 1990 ರಿಂದ 2000 ವರೆಗಿನ ಅವಧಿಯಲ್ಲಿ ಜಿಂಬಾಬ್ವೆ ತಂಡದ ಪ್ರಮುಖ ಬಲ ಎನಿಸಿಕೊಂಡಿದ್ದರು.

65 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಅವರು 236 ವಿಕೆಟ್‌ಗಳನ್ನು ಪಡೆದಿದ್ದಾರೆ. ಜಿಂಬಾಬ್ವೆಯ ಇತರ ಯಾವುದೇ ಬೌಲರ್‌ ಟೆಸ್ಟ್‌ನಲ್ಲಿ 80ಕ್ಕಿಂತ ಹೆಚ್ಚು ವಿಕೆಟ್‌ ಪಡೆದಿಲ್ಲ. 22.35ರ ಸರಾಸರಿಯಲ್ಲಿ 1,990 ರನ್ ಪೇರಿಸಿದ್ದಾರೆ. ಅವರ ಏಕೈಕ ಶತಕ (ಅಜೇಯ 127) ವೆಸ್ಟ್‌ ಇಂಡೀಸ್‌ ವಿರುದ್ಧ ಹರಾರೆಯಲ್ಲಿ (2003) ದಾಖಲಾಗಿತ್ತು.

ಏಕದಿನ ಕ್ರಿಕೆಟ್‌ನಲ್ಲಿ 187 ಪಂದ್ಯಗಳಿಂದ 237 ವಿಕೆಟ್‌ಗಳನ್ನು ಗಳಿಸಿದ್ದು, 2,901 ರನ್‌ ಕಲೆಹಾಕಿದ್ದಾರೆ. ಪ್ರಮುಖ ತಂಡಗಳ ವಿರುದ್ಧದ ಪಂದ್ಯಗಳಲ್ಲಿ ಏಕಾಂಗಿ ಹೋರಾಟ ನಡೆಸಿ ಅವರು ಗಮನ ಸೆಳೆದಿದ್ದರು. ನಾಯಕತ್ವದ ಜವಾಬ್ದಾರಿಯನ್ನೂ ನಿಭಾಯಿಸಿದ್ದ ಸ್ಟ್ರೀಕ್, 21 ಟೆಸ್ಟ್‌ ಮತ್ತು 68 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.

2005 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ವಿರಮಿಸಿದ್ದ ಅವರು 2016 ರಿಂದ 2018ರ ವರೆಗೆ ಜಿಂಬಾಬ್ವೆ ತಂಡದ ಕೋಚ್‌ ಅಗಿಯೂ ಕಾರ್ಯನಿರ್ವಹಿಸಿದ್ದರು.

ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ (ಐಸಿಸಿ) ಭ್ರಷ್ಟಾಚಾರ ನಿಗ್ರಹ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ 2021 ರಲ್ಲಿ ಐಸಿಸಿ ಅವರ ಮೇಲೆ ಎಂಟು ವರ್ಷಗಳ ನಿಷೇಧ ಹೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT