ಗಂಗೂಲಿ ಆರೋಗ್ಯ ಸ್ಥಿರ: ಅಗತ್ಯಬಿದ್ದರೆ ಮತ್ತೊಂದು ಆ್ಯಂಜಿಯೊಪ್ಲಾಸ್ಟಿ –ವೈದ್ಯರು

ಕೋಲ್ಕತ್ತ: ಲಘು ಹೃದಯಾಘಾತದ ನಂತರ ಶನಿವಾರ ಆ್ಯಂಜಿಯೊಪ್ಲಾಸ್ಟಿಗೆ ಒಳಗಾಗಿದ್ದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಭಾನುವಾರ ತಿಳಿಸಿದ್ದಾರೆ.
ಆ್ಯಂಜಿಯೊಗ್ರಾಮ್ ವೇಳೆ ಅವರ ಹೃದಯದ ರಕ್ತನಾಳಗಳಲ್ಲಿ ಮೂರು ಕಡೆ ತಡೆಗಳು (ಬ್ಲಾಕ್ಗಳು) ಪತ್ತೆಯಾಗಿದ್ದವು. ಇದರಲ್ಲಿ ಒಂದು ಕಡೆ ರಕ್ತಚಲನೆ ಸುಗಮಗೊಳಿಸಲು ಸ್ಟಂಟ್ ಅಳವಡಿಸಲಾಗಿತ್ತು.
‘ಅವರು ಯಾವುದೇ ಆರೋಗ್ಯ ತೊಂದರೆಯಿಲ್ಲದೇ ರಾತ್ರಿ ನಿದ್ದೆ ಮಾಡಿದ್ದಾರೆ’ ಎಂದು ಅವರು ಚಿಕಿತ್ಸೆಗೆ ದಾಖಲಾಗಿರುವ ಖಾಸಗಿ ಆಸ್ಪತ್ರೆಯ ಬುಲೆಟಿನ್ ತಿಳಿಸಿದೆ.
‘ಅವರ ಆರೋಗ್ಯಸ್ಥಿತಿ ನೋಡಿಕೊಂಡು ಇನ್ನೊಮ್ಮೆ ಆ್ಯಂಜಿಯೊಪ್ಲಾಸ್ಟಿ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಮುಖ ರಕ್ತನಾಳಗಳಿಗೆ ಬಾಧೆಯಿರುವ ಕಾರಣ ಅವರಿಗೆ ಮತ್ತೊಂದು ಆ್ಯಂಜಿಯೊಪ್ಲಾಸ್ಟಿ ಬೇಕಾಗಬಹುದು. ಆದರೆ ಇದು ಅವರ ದೇಹಸ್ಥಿತಿಯನ್ನು ಅವಲಂಬಿಸಿದೆ. ಈಗ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ’ ಎಂದು ಶನಿವಾರ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.