ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

India vs Australia: ಬಾಕ್ಸಿಂಗ್ ಡೇ ಟೆಸ್ಟ್‌ಗೆ ರಾಹುಲ್, ಪಂತ್‌ಗೆ ಅವಕಾಶ?

ವೃದ್ಧಿಮಾನ್ ಸಹಾ, ಪೃಥ್ವಿ ಶಾಗೆ ವಿಶ್ರಾಂತಿ ನೀಡಲು ಚಿಂತನೆ; ಯುವ ಆಟಗಾರ ಶುಭಮನ್‌ ಗಿಲ್‌ಗೆ ಸ್ಥಾನ ನಿರೀಕ್ಷೆ
Last Updated 20 ಡಿಸೆಂಬರ್ 2020, 15:50 IST
ಅಕ್ಷರ ಗಾತ್ರ

ನವದೆಹಲಿ:ಆಸ್ಟ್ರೇಲಿಯಾ ಎದುರು ಡಿಸೆಂಬರ್ 26ರಂದು ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಕೆ.ಎಲ್. ರಾಹುಲ್, ರಿಷಭ್ ಪಂತ್ ಮತ್ತು ಶುಭಮನ್ ಗಿಲ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ.

ಅಡಿಲೇಡ್‌ನಲ್ಲಿ ಅನುಭವಿಸಿದ ಹೀನಾಯ ಸೋಲಿನ ನಂತರ ತಂಡದಆಡಳಿತವು ಈ ಕುರಿತು ಗಂಭೀರವಾಗಿ ಚಿಂತನೆ ನಡೆಸಿದೆ. ಮೊದಲ ಪಂದ್ಯದಎರಡೂ ಇನಿಂಗ್ಸ್‌ಗಳಲ್ಲಿ ವೈಫಲ್ಯ ಅನುಭವಿಸಿದ್ದ ಪೃಥ್ವಿ ಶಾ ಮತ್ತು ಬ್ಯಾಟಿಂಗ್‌ನಲ್ಲಿ ಎಡವಿದ್ದ ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ದಟ್ಟವಾಗಿದೆ.

ಶನಿವಾರ ಅಡಿಲೇಡ್ ಓವಲ್‌ನಲ್ಲಿ ನಡೆದಿದ್ದ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಭಾರತ ತಂಡವು ಕೇವಲ 36 ರನ್‌ಗಳಿಗೆ ಆಲೌಟ್ ಆಗಿತ್ತು. ಅದರಿಂದಾಗಿ ಬಹಳಷ್ಟು ಟೀಕೆಗಳನ್ನು ಎದುರಿಸುತ್ತಿದೆ. ಪೃಥ್ವಿ ಶಾ ಅವರ ಕಳಪೆ ಬ್ಯಾಟಿಂಗ್ ಬಗ್ಗೆ ಹಲವು ಮಾಜಿ ಕ್ರಿಕೆಟಿಗರೂ ಟೀಕಿಸಿದ್ದಾರೆ.

ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆಯ ಕಾರಣ ಮುಂದಿನ ಮೂರು ಟೆಸ್ಟ್‌ಗಳಲ್ಲಿ ಆಡುವುದಿಲ್ಲ. ರೋಹಿತ್ ಶರ್ಮಾ ಕ್ವಾರಂಟೈನ್‌ನಲ್ಲಿರುವುದರಿಂದ ಎರಡನೇ ಟೆಸ್ಟ್‌ಗೆ ಅವರು ಅಲಭ್ಯರಾಗಿದ್ದಾರೆ. ಆದ್ದರಿಂದ ಮಯಂಕ್ ಅಗರವಾಲ್ ಜೊತೆಗೆ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅವರನ್ನು ಇನಿಂಗ್ಸ್‌ ಆರಂಭಿಸಲು ಕಳಿಸುವ ಯೋಚನೆ ತಂಡಕ್ಕಿದೆ.

ಕೆ.ಎಲ್. ರಾಹುಲ್ ಅಥವಾ ಹನುಮವಿಹಾರಿ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬಹುದು.ಆಲ್‌ರೌಂಡರ್ ರವೀಂದ್ರ ಜಡೇಜ ಕೂಡ ಫಿಟ್ ಆಗಿರುವುದರಿಂದ ಮುಂದಿನ ಪಂದ್ಯದಲ್ಲಿ ತಂಡಕ್ಕೆ ಮರಳುವ ಸಾಧ್ಯತೆ ಇದೆ. ಮೊಹಮ್ಮದ್ ಶಮಿ ಮಣಿಕಟ್ಟಿನ ಗಾಯದಿಂದಾಗಿ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಮೊಹಮ್ಮದ್ ಸಿರಾಜ್ ಅವರನ್ನೂಕಣಕ್ಕಿಳಿಸುವ ಸಾಧ್ಯತೆ ಇದೆ. ಜಸ್‌ಪ್ರೀತ್ ಬೂಮ್ರಾ ಮತ್ತು ಉಮೇಶ್ ಯಾದವ್ ಅವರು ಲಯದಲ್ಲಿರುವುದರಿಂದ ತಂಡದಲ್ಲಿ ಮುಂದುವರಿಯುವುದು ಖಚಿತ.

ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ರಿಷಭ್ ಪಂತ್ ಶತಕ ಬಾರಿಸಿದ್ದರು.ಆದರೆ ಅಡಿಲೇಡ್‌ನಲ್ಲಿ ಸಹಾಗೆ ಅವಕಾಶ ನೀಡಲಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್, ‘ನಾವು ಅಧಿಕಾರದಲ್ಲಿದ್ದಾಗ ಒಂದು ನಿರ್ಣಯ ಮಾಡಿಕೊಂಡಿದ್ದೆವು. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ನಡೆಯುವ ಸರಣಿಗಳಿಗೆ ವಿಕೆಟ್‌ಕೀಪರ್ ಸ್ಥಾನದಲ್ಲಿ ರಿಷಭ್ ಪಂತ್ ಅದ್ಯತೆ ನೀಡುವುದು. ಸಹಾ ಎರಡನೇ ಆಯ್ಕೆಯಾಗಿದ್ದರು.ಪಂತ್ ಈಗ ತಮ್ಮ ಫಿಟ್‌ನೆಸ್‌ಗೆ ಮರಳಿದ್ದಾರೆ. ಲವಲವಿಕೆಯಿಂದ ಆಡಬಲ್ಲರು. ಅವರಿಗೆ ಮುಂದಿನ ಪಂದ್ಯಗಳಲ್ಲಿ ಅವಕಾಶ ಕೊಡುವುದು ಸೂಕ್ತ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ಅವರ ಹಿಂದಿನ ಸಾಧನೆಯು ಉತ್ತಮವಾಗಿಯೂ ಇದೆ’ಎಂದಿದ್ದಾರೆ.

‘ಹನುಮವಿಹಾರಿ 4 ಅಥವಾ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ ಚೆನ್ನಾಗಿ ಆಡಬಲ್ಲರು. ರಾಹುಲ್ ಆರನೇ ಕ್ರಮಾಂಕದಲ್ಲಿ ಆಡಬಹುದು. ಆದ್ದರಿಂದ ಬ್ಯಾಟಿಂಗ್ ಬಲಾಢ್ಯವಾಗುತ್ತದೆ’ಎಂದು ಪ್ರಸಾದ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT