ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL; ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ಶುಭಮನ್ ಗಿಲ್ ನೇಮಕ

ಮುಂಬೈ ಇಂಡಿಯನ್ಸ್‌ಗೆ ವಾಪಸಾದ ಆಲ್‌ರೌಂಡ್‌ ಆಟಗಾರ ಹಾರ್ದಿಕ್‌ ಪಾಂಡ್ಯ
Published 27 ನವೆಂಬರ್ 2023, 11:13 IST
Last Updated 27 ನವೆಂಬರ್ 2023, 11:13 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಪ್ರೀಮಿಯರ್‌ ಲೀಗ್‌ ಕ್ರಿಕೆಟ್ ಟೂರ್ನಿಯ 2024ರ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಭಾರತ ತಂಡದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಮುನ್ನಡೆಸಲಿದ್ದಾರೆ.

ಗುಜರಾತ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಮತ್ತೆ ಮುಂಬೈ ಇಂಡಿಯನ್ಸ್‌ ತಂಡಕ್ಕೆ ವಾಪಸಾದ ಬೆನ್ನಲ್ಲೇ ಗುಜರಾತ್ ಫ್ರಾಂಚೈಸಿಯಿಂದ ಈ ನಿರ್ಧಾರ ಹೊರಬಿದ್ದಿದೆ.

ಏಕಬಾರಿಯ ನಗದು ಪಾವತಿಯ ಒಪ್ಪಂದ ಅಂತಿಮಗೊಂಡ ಬೆನ್ನಲ್ಲೇ ಭಾರತ ಟಿ20 ತಂಡದ ನಾಯಕರೂ ಆಗಿರುವ ಪಾಂಡ್ಯ ಅವರು ಈ ಹಿಂದೆ ಪ್ರತಿನಿಧಿಸಿದ್ದ ಮುಂಬೈ ತಂಡಕ್ಕೆ ಪಾಂಡ್ಯ ಹಿಂದಿರುಗಿದ್ದಾರೆ. ಇದರನ್ವಯ, ಗುಜರಾತ್ ಟೈಟನ್ಸ್ ಫ್ರಾಂಚೈಸಿಗೆ ಮುಂಬೈ ಫ್ರಾಂಚೈಸಿಯಿಂದ ₹15 ಕೋಟಿ ವ್ಯಾಪಾರ ಒಪ್ಪಂದದಿಂದ ಸಿಗಲಿದೆ. ಜೊತೆಗೆ ಬಹಿರಂಗಪಡಿಸದ ದೊಡ್ಡ ಮೊತ್ತವನ್ನು ವರ್ಗಾವಣೆ ಶುಲ್ಕ ಹೊರತುಪಡಿಸಿ, ಒಂದು ಭಾಗ ಕ್ರಿಕೆಟಿಗನಿಗೆ ನೀಡಲಿದೆ.‌

ಕಳೆದ ಐಪಿಎಲ್ ಆವೃತ್ತಿಯಲ್ಲಿ 24 ವರ್ಷದ ಗಿಲ್‌ ಅವರು 890 ರನ್ ಸಿಡಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ( 973) ನಂತರ ಐಪಿಎಲ್ ಸರಣಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ಗಿಲ್ ಅವರನ್ನು ಟೈಟಾನ್ಸ್ ತಂಡದ ನಾಯಕನಾಗಿ ಆಯ್ಕೆ ಮಾಡಲಾಗಿದೆ.

‘ತಂಡದ ನಾಯಕನಾಗಿ ಆಯ್ಕೆಯಾಗಿದ್ದಕ್ಕೆ ಹೆಮ್ಮೆ ಮತ್ತು ಸಂತಸವಾಗುತ್ತಿದೆ. ನನ್ನ ಮೇಲೆ ನಂಬಿಕೆ ಇಟ್ಟು ಇಂತಹ ಅದ್ಭುತ ಹೊಣೆಗಾರಿಕೆ ನೀಡಿದ ಫ್ರಾಂಚೈಸಿಗೆ ಧನ್ಯವಾದಗಳು. ಎರಡು ಶ್ರೇಷ್ಠ ಆವೃತ್ತಿಗಳನ್ನು ನಾವು ಕಂಡಿದ್ದೇವೆ. ತಂಡವನ್ನು ಮುನ್ನಡೆಸಲು ಉತ್ಸುಕನಾಗಿದ್ದೇನೆ’ ಎಂದು ಗಿಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.‌

ಎರಡು ಆವೃತ್ತಿಯಲ್ಲಿ ಗುಜರಾತ್‌ ತಂಡದ ಪರ 30 ಇನ್ನಿಂಗ್ಸ್‌ ಆಡಿರುವ ಪಾಂಡ್ಯ ಅವರು 133.49ರ ಸ್ಟೈಕ್‌ ರೇಟ್‌ನಲ್ಲಿ 833 ರನ್‌ ಗಳಿಸುವ ಜತೆಗೆ 11 ವಿಕೆಟ್‌ ಪಡೆದಿದ್ದಾರೆ.

‘ಎರಡು ವರ್ಷಗಳ ಅದ್ಭುತ ಪಯಣಕ್ಕಾಗಿ ಗುಜರಾತ್‌ ತಂಡದ ಆಡಳಿತ ಮಂಡಳಿಗೆ, ಅಭಿಮಾನಿಗಳಿಗೆ ವಿಶೇಷ ಧನ್ಯವಾದಗಳು. ತಂಡದಲ್ಲಿ ನನಗೆ ಉತ್ತಮ ಪ್ರೋತ್ಸಾಹ ಮತ್ತು ಶ್ರೇಷ್ಠ ಗೌರವ ದೊರಕಿದೆ. ಆ ನೆನಪುಗಳನ್ನು ಎಂದಿಗೂ ಮರೆಯಲಾಗದು’ ಎಂದು ‘ಎಕ್ಸ್‌’ ಖಾತೆಯಲ್ಲಿ ಬರೆದುಕೊಂಡಿರುವ ಆಲ್‌ರೌಂಡರ್, ‘ಮತ್ತೆ ತಮ್ಮ ತವರು ತಂಡಕ್ಕೆ ಮರಳಲು ಉತ್ಸುಕನಾಗಿದ್ದೇನೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕಳೆದ ಎರಡು ಆವೃತ್ತಿಗಳಲ್ಲಿ ನಾಯಕರಾಗಿ ಹಾರ್ದಿಕ್ ಪಾಂಡ್ಯ ನೀಡಿರುವ ಕೊಡುಗೆಯನ್ನು ಗುಜರಾತ್   ತಂಡದ ನಿರ್ದೇಶಕ ವಿಕ್ರಮ್ ಸೋಳಂಕಿ ಶ್ಲಾಘಿಸಿದ್ದಾರೆ.

‘ಗುಜರಾತ್ ತಂಡದ ಮೊದಲ ನಾಯಕರಾಗಿ ಪಾಂಡ್ಯ ಎರಡು ಆವೃತ್ತಿಗಳಲ್ಲಿ ಅದ್ಬುತವಾಗಿ ತಂಡವನ್ನು ಮುನ್ನಡೆಸಿದ್ದಾರೆ. ಒಮ್ಮೆ ತಂಡ ಟ್ರೋಫಿ ಜಯಿಸಿದರೆ, ಮತ್ತೊಮ್ಮೆ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಈಗ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಲು ಬಯಸಿದ್ದಾರೆ. ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಅವರಿಗೆ ಶುಭ ಕೋರುತ್ತೇವೆ’ ಎಂದು ಸೋಳಂಕಿ ಹೇಳಿದ್ದಾರೆ.

‘ಶುಭಮನ್ ಗಿಲ್ ಅವರ ಪ್ರಭುದ್ಧತೆಯನ್ನು ಮೈದಾನದಲ್ಲಿ ನಾವು ಕಂಡಿದ್ದೇವೆ. ಗಿಲ್‌ರಂತಹ ಯುವ ನಾಯಕನ ಜೊತೆ ಹೊಸ ಪ್ರಯಾಣ ಆರಂಭಿಸಲು ಅತ್ಯಂತ ಉತ್ಸುಕರಾಗಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಇತ್ತ, ಹಾರ್ದಿಕ್ ಪಾಂಡ್ಯ ಅವರನ್ನು ‘ಮುಂಬೈ ಇಂಡಿಯನ್ಸ್‌ ಕುಟುಂಬ’ಕ್ಕೆ ಸ್ವಾಗತಿಸುತ್ತಿರುವುದು ಅತ್ಯಂತ ರೋಮಾಂಚನಕಾರಿಯಾಗಿದೆ ಎಂದು  ಮಾಲೀಕರಾದ ನೀತಾ ಅಂಬಾನಿ ಮತ್ತು ಆಕಾಶ್ ಅಂಬಾನಿ ಹೇಳಿದ್ದಾರೆ.

ಆರ್‌ಸಿಬಿ ತೆಕ್ಕೆಗೆ ಕ್ಯಾಮರೂನ್ ಗ್ರೀನ್
ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ತನ್ನ ತೆಕ್ಕೆಗೆ ಹಾಕಿಕೊಂಡ ಬೆನ್ನಲ್ಲೇ ತಮ್ಮಲ್ಲಿದ್ದ ಆಸ್ಟ್ರೇಲಿಯಾದ ಆಲ್‌ರೌಂಡ್‌ ಆಟಗಾರ ಕ್ಯಾಮರೂನ್ ಗ್ರೀನ್ ಅವರನ್ನು ಬಿಟ್ಟುಕೊಟ್ಟಿದೆ. ಅವರು ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಬಿಡ್ಡಿಂಗ್‌ನಲ್ಲಿ ₹ 17.50 ಕೋಟಿ ಮೊತ್ತಕ್ಕೆ ಗ್ರೀನ್‌ ಅವರನ್ನು ಮುಂಬೈ ತಂಡ ತನ್ನತ್ತ ಸೆಳೆದಿತ್ತು. ಕಳೆದ ಆವೃತ್ತಿಯಲ್ಲಿ ಗ್ರೀನ್‌ ಎರಡನೇ ದುಬಾರಿ ಆಟಗಾರ ಎನಿಸಿದ್ದರು. 24 ವರ್ಷದ ಅವರು ಕಳೆದ ಆವೃತ್ತಿಯಲ್ಲಿ ಅಜೇಯ ಶತಕ ಮತ್ತು ಎರಡು ಅರ್ಧ ಶತಕಗಳನ್ನು ಬಾರಿಸುವುದರ ಜೊತೆಗೆ ಆರು ವಿಕೆಟ್‌ಗಳನ್ನು ಪಡೆದಿದ್ದರು. ಅವರನ್ನು ಅದೇ ಬೆಲೆಗೆ ಆರ್‌ಸಿಬಿ ತನ್ನತ್ತ ಆಕರ್ಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT