ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟೂರ್ನಿಗೆ ಹಾರ್ದಿಕ್ ಪಾಂಡ್ಯ ಅಲಭ್ಯ

ರಾಷ್ಟ್ರೀಯ ತಂಡದಲ್ಲಿ ನಿಗದಿತ ಓವರ್‌ಗಳ ಪಂದ್ಯಗಳತ್ತ ಆಲ್‌ರೌಂಡರ್‌ ಚಿತ್ತ
Last Updated 7 ಫೆಬ್ರುವರಿ 2022, 12:23 IST
ಅಕ್ಷರ ಗಾತ್ರ

ನವದೆಹಲಿ: ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಈ ಬಾರಿಯ ರಣಜಿ ಟೂರ್ನಿಯಲ್ಲಿ ಆಡದೇ ಇರಲು ನಿರ್ಧರಿಸಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ನಿಗದಿತ ಓವರ್‌ಗಳ ಪಂದ್ಯಗಳಲ್ಲಿ ಆಡಲು ಸಿದ್ಧರಾಗುತ್ತಿರುವ ಅವರು ಅದರ ಕಡೆಗೆ ಗಮನ ಕೊಡುವುದಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ರಣಜಿ ಟೂರ್ನಿ ಇದೇ 10ರಂದು ಆರಂಭಗೊಳ್ಳಲಿದ್ದು ಬರೋಡ ತಂಡವನ್ನು ಕೇದಾರ್‌ ದೇವಧರ್ ಮುನ್ನಡೆಸಲಿದ್ದಾರೆ. ಉಪನಾಯಕನನ್ನಾಗಿ ವಿಷ್ಣು ಸೋಲಂಕಿ ಅವರನ್ನು ನೇಮಕ ಮಾಡಲಾಗಿದೆ. ಟೂರ್ನಿಯ ಮೊದಲ ಹಂತದ ಪಂದ್ಯಗಳಿಗಾಗಿ ಬರೋಡ ಕ್ರಿಕೆಟ್ ಸಂಸ್ಥೆ 20 ಮಂದಿಯ ತಂಡವನ್ನು ಸೋಮವಾರ ಆಯ್ಕೆ ಮಾಡಿದೆ. ಪಟ್ಟಿಯಲ್ಲಿ ಹಾರ್ದಿಕ್ ಹೆಸರು ಇಲ್ಲ.

ಬೆನ್ನುನೋವಿನಿಂದ ಬಳಲುತ್ತಿರುವ ಹಾರ್ದಿಕ್ ಪಾಂಡ್ಯ ಅವರು ಟ್ವೆಂಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಬೌಲಿಂಗ್ ಮಾಡದೇ ಇದ್ದುದರ ಬಗ್ಗೆ ಬಹಳಷ್ಟು ಚರ್ಚೆ ನಡೆದಿತ್ತು. 28 ವರ್ಷ ವಯಸ್ಸಿನ ಅವರು 2018ರಿಂದ ಟೆಸ್ಟ್ ಪಂದ್ಯಗಳಲ್ಲಿ ಆಡಲಿಲ್ಲ. ದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಆಡಲು ಗಾಯದ ಸಮಸ್ಯೆಗಳು ಅನುವು ಮಾಡುತ್ತಿಲ್ಲ ಎಂದು ಅವರು ಕೆಲವು ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ.

ಇಂಡಿಯನ್ ‌ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅವರು ಆಡುವುದು ಬಹುತೇಕ ಖಚಿತವಾಗಿದೆ. ಅಹಮದಾಬಾದ್‌ ತಂಡವು ಅವರನ್ನು ಪಡೆದುಕೊಂಡಿದ್ದು ಪೂರ್ಣಪ‍್ರಮಾಣದ ನಾಯಕನಾಗಿ ಚೊಚ್ಚಲ ಪಂದ್ಯ ಆಡಲು ಉತ್ಸುಕರಾಗಿದ್ದಾರೆ.

ಹಾರ್ದಿಕ್ ಅವರ ಸಹೋದರ ಕೃಣಾಲ್ ಪಾಂಡ್ಯ ಅವರನ್ನು ರಣಜಿ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಕೋವಿಡ್‌–19ರಿಂದಾಗಿ ಕಳೆದ ಬಾರಿ ರಣಜಿ ಟೂರ್ನಿಯನ್ನು ರದ್ದುಗೊಳಿಸಲಾಗಿತ್ತು. ಈ ವರ್ಷ ಜನವರಿ 13ರಂದು ಆರಂಭಿಸಲು ನಿರ್ಧರಿಸಲಾಗಿತ್ತು. ನಂತರ ಮುಂದೂಡಲಾಗಿದ್ದು ಎರಡು ಹಂತಗಳಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಮೊದಲ ಹಂತದ ಪಂದ್ಯಗಳು ಈ ತಿಂಗಳ 10ರಿಂದ ಮಾರ್ಚ್ 15ರ ವರೆಗೆ ನಡೆಯಲಿವೆ. ನಂತರ ಐಪಿಎಲ್‌ ನಡೆಯಲಿದ್ದು ರಣಜಿ ಪಂದ್ಯಗಳು ಮೇ 30ರಿಂದ ಮುಂದುವರಿಯಲಿವೆ. ಎರಡನೇ ಹಂತದ ಹಣಾಹಣಿ ಜೂನ್ 26ರ ವರೆಗೆ ನಡೆಯಲಿದೆ.

ರಣಜಿ ಟೂರ್ನಿಗಾಗಿ ಬರೋಡ ತಂಡ: ಕೇದಾರ್ ದೇವಧರ್‌ (ನಾಯಕ), ವಿಷ್ಣು ಸೋಳಂಕಿ (ಉಪನಾಯಕ), ಪ್ರತ್ಯೂಷ್ ಕುಮಾರ್‌, ಶಿವಾಲಿಕ್ ಶರ್ಮಾ, ಕೃಣಾಲ್ ಪಾಂಡ್ಯ, ಅಭಿಮನ್ಯು ಸಿಂಗ್ ರಜಪೂತ್‌, ಧ್ರುವ ಪಟೇಲ್‌, ಮಿತೇಶ್ ಪಟೇಲ್, ಲುಕ್ಮನ್ ಮೆರಿವಾಲ, ಬಾಬಾ ಸಫೀಖಾನ್ ಪಠಾಣ್‌ (ವಿಕೆಟ್ ಕೀಪರ್‌), ಅತೀತ್ ಶೇಠ್‌, ಭಾರ್ಗವ್ ಭಟ್‌, ಪಾರ್ಥ್ ಕೊಹ್ಲಿ, ಶಾಶ್ವತ್ ರಾವತ್‌, ಸೊಯೇಬ್ ಸೊಪಾರಿಯ, ಕಾರ್ತಿಕ್ ಕಾಕಡೆ, ಗುರ್ಜಿಂದರ್ ಸಿಂಗ್ ಮನ್‌, ಜ್ಯೋತ್ಸ್ನಿನ್ ಸಿಂಗ್, ನಿನಾದ್ ರಾತ್ವ, ಅಕ್ಷಯ್ ಮೋರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT