ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್ ಕ್ರಿಕೆಟ್ | ಭಾರತಕ್ಕೆ ಜಯದ ಆಸೆ ಚಿಗುರಿಸಿದ ಹರ್ಮನ್

ಟೆಸ್ಟ್ ಕ್ರಿಕೆಟ್: ಆಸ್ಟ್ರೇಲಿಯಾಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ಅಲ್ಪ ಮುನ್ನಡೆ, ತಹಲಿಯಾ ಮೆಕ್‌ಗ್ರಾ ಅರ್ಧಶತಕ
Published 23 ಡಿಸೆಂಬರ್ 2023, 14:06 IST
Last Updated 23 ಡಿಸೆಂಬರ್ 2023, 14:06 IST
ಅಕ್ಷರ ಗಾತ್ರ

ಮುಂಬೈ: ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಆಸ್ಟ್ರೇಲಿಯಾ ಎದುರು ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದ ಮೂರನೇ ದಿನದಾಟವಾದ ಶನಿವಾರದ ಕೊನೆಯ ಹಂತದಲ್ಲಿ ತಮ್ಮ ಚುರುಕಾದ ಬೌಲಿಂಗ್ ಮೂಲಕ ಭಾರತ ತಂಡದಲ್ಲಿ ಗೆಲುವಿನ ಆಸೆ ಚಿಗುರಿಸಿದರು.

ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡವು 187 ರನ್‌  ಮುನ್ನಡೆ ಸಾಧಿಸಿತ್ತು.  ಎರಡನೇ ಇನಿಂಗ್ಸ್‌ನಲ್ಲಿ ದಿಟ್ಟ ಉತ್ತರ ನೀಡಿದ ಪ್ರವಾಸಿ ಬಳಗದ ತಹಲಿಯಾ ಮೆಕ್‌ಗ್ರಾ (73; 177ಎ, 4X10) ಮತ್ತು ಅಲೀಸಾ ಹೀಲಿ (32 ರನ್) ಆತಿಥೇಯರ ಇನಿಂಗ್ಸ್‌ ಜಯದ ಕನಸಿಗೆ ಅಡ್ಡಿಯಾದರು. ಸಾಂದರ್ಭಿಕ ಬೌಲರ್ ಹರ್ಮನ್‌ಪ್ರೀತ್ ಜೊತೆಯಾಟಕ್ಕೆ ತಡೆಯೊಡ್ಡಿದರು. ಶತಕದತ್ತ ಹೆಜ್ಜೆ ಹಾಕಿದ್ದ ಮೆಕ್‌ಗ್ರಾ ಅವರನ್ನು ಕ್ಲೀನ್ ಬೌಲ್ಡ್‌ ಮಾಡಿದರು. ಮೆಕ್‌ಗ್ರಾ ಅವರು ಈ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕ ಗಳಿಸಿದ ಸಾಧನೆ ಮಾಡಿದರು.

ಇದಾಗಿ ಆರು ಓವರ್‌ಗಳ ನಂತರ ನಾಯಕಿ ಅಲೀಸಾ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಇದರಿಂದಾಗಿ ಆತಿಥೇಯ ಬಳಗದಲ್ಲಿ ಉತ್ಸಾಹ ಪುಟಿದೆದ್ದಿತು. ಭಾನುವಾರ ಬೆಳಿಗ್ಗೆ ಇನ್ನುಳಿದಿರುವ ಐದು ವಿಕೆಟ್‌ಗಳನ್ನು ಬೇಗನೆ ಗಳಿಸಿ, ಸಣ್ಣ ಮೊತ್ತದ ಗುರಿ ಸಾಧಿಸಿ ಜಯಿಸುವ ಕನಸು ಕುಡಿಯೊಡೆಯಿತು. ದಿನದಾಟದ ಮುಕ್ತಾಯಕ್ಕೆ ಪ್ರವಾಸಿ ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್‌ನಲ್ಲಿ 46 ರನ್‌ ಮುನ್ನಡೆ ಗಳಿಸಿದೆ. 90 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 233 ರನ್ ಗಳಿಸಿತು. ಅನಾಬೆಲ್ ಸದರ್ಲ್ಯಾಂಡ್ (ಬ್ಯಾಟಿಂಗ್ 12) ಮತ್ತು ಆಷ್ಲೆ ಗಾರ್ಡನರ್ (ಬ್ಯಾಟಿಂಗ್ 7) ಕ್ರೀಸ್‌ನಲ್ಲಿದ್ದಾರೆ.

ಆಸ್ಟ್ರೇಲಿಯಾ ತಂಡದ ಅಗ್ರಕ್ರಮಾಂಕದ ಬ್ಯಾಟರ್‌ಗಳು ಎರಡನೇ ಇನಿಂಗ್ಸ್‌ನಲ್ಲಿ ಉತ್ತಮವಾಗಿ ಆಡಿದರು. ಮೊದಲ ಇನಿಂಗ್ಸ್‌ನಲ್ಲಿ ಮಾಡಿದ್ದ ಲೋಪಗಳನ್ನು ತಕ್ಕಮಟ್ಟಿಗೆ ಸುಧಾರಿಸಿಕೊಂಡರು. ಬೆತ್ ಮೂನಿ (33ರನ್) ಮತ್ತು ಲಿಚ್‌ಫೀಲ್ಡ್‌ (18 ರನ್) ಮೊದಲ ವಿಕೆಟ್‌ ಜೊತೆಯಾಟದಲ್ಲಿ 49 ರನ್‌ ಸೇರಿಸಿದರು. ರಿಚಾ ಘೋಷ್ ಅವರ ಚುರುಕಿನ ಫೀಲ್ಡಿಂಗ್‌ನಿಂದಾಗಿ ಮೂನಿ 12ನೇ ಓವರ್‌ನಲ್ಲಿ ರನ್‌ಔಟ್ ಆದರು.

ಎರಡು ಓವರ್‌ಗಳ ನಂತರ ಲಿಚ್‌ಫೀಲ್ಡ್ ಅವರಿಗೆ ಸ್ನೇಹಾ ಪೆವಿಲಿಯನ್‌ ದಾರಿ ತೋರಿಸಿದರು. ಈ ಹಂತದಲ್ಲಿ ಎಲಿಸಾ ಪೆರಿ (45; 91ಎ) ಮತ್ತು ಮೆಕ್‌ಗ್ರಾ ಅವರು ಜೊತೆಗೂಡಿ 84 ರನ್ ಸೇರಿಸಿದರು. ಪೆರಿ ವಿಕೆಟ್ ಗಳಿಸಿದ ಸ್ನೇಹಾ ಅವರು ಈ ಜೊತೆಯಾಟ  ಮುರಿದರು. ಆದರೆ ಹೀಲಿ ಮತ್ತು ಮೆಕ್‌ಗ್ರಾ ಜೋಡಿಯು ಸಂಜೆಯವರೆಗೂ ಕಾಡಿದರು.

ಪೂಜಾ–ದೀಪ್ತಿ ಜೊತೆಯಾಟ: ಶುಕ್ರವಾರ ದಿನದಾಟದ ಅಂತ್ಯಕ್ಕೆ ಶತಕದ ಜೊತೆಯಾಟವಾಡಿ ಕ್ರೀಸ್‌ನಲ್ಲಿ ಉಳಿದಿದ್ದ ಭಾರತದ ದೀಪ್ತಿ ಮತ್ತು ಪೂಜಾ ಅವರು ಮೂರನೇ ದಿನ ಬೆಳಿಗ್ಗೆ ಸುಮಾರು ಅರ್ಧಗಂಟೆಯಷ್ಟೇ ಕ್ರೀಸ್‌ನಲ್ಲಿದ್ದರು. ಪೂಜಾ ತಮ್ಮ ಅರ್ಧಶತಕ ಪೂರೈಸಲು ಇನ್ನೂ ಮೂರು ರನ್‌ಗಳ ಅಗತ್ಯವಿದ್ದಾಗ ಔಟಾದರು.  ತಂಡದ ಮೊತ್ತವನ್ನು 400ರ ಗಡಿ ದಾಟಿಸಿದ ದೀಪ್ತಿ (78; 171ಎ, 4X9) ಕೂಡ ಔಟಾದರು. ಇಬ್ಬರೂ ಎಂಟನೇ ವಿಕೆಟ್ ಜೊತೆಯಾಟದಲ್ಲಿ 122 ರನ್ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 77.4 ಓವರ್‌ಗಳಲ್ಲಿ 219. ಭಾರತ: 126.3 ಓವರ್‌ಗಳಲ್ಲಿ 406. ಎರಡನೇ ಇನಿಂಗ್ಸ್: ಆಸ್ಟ್ರೇಲಿಯಾ: 90 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 233 (ಎಲಿಸಾ ಪೆರಿ 45, ತಹಲಿಯಾ ಮೆಕ್‌ಗ್ರಾ 73, ಅಲಿಸಾ ಹೀಲಿ 32,  ಸ್ನೇಹಾ ರಾಣಾ 54ಕ್ಕೆ2, ಹರ್ಮನ್‌ಪ್ರೀತ್ ಕೌರ್ 23ಕ್ಕೆ2)

ಆಸ್ಟ್ರೇಲಿಯಾದ ಆಟಗಾರ್ತಿ ತಹಲಿಯಾ ಮೆಕ್‌ಗ್ರಾ ಬ್ಯಾಟಿಂಗ್‌  –ಪಿಟಿಐ ಚಿತ್ರ
ಆಸ್ಟ್ರೇಲಿಯಾದ ಆಟಗಾರ್ತಿ ತಹಲಿಯಾ ಮೆಕ್‌ಗ್ರಾ ಬ್ಯಾಟಿಂಗ್‌  –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT