ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದ ಗುಣಮುಖ: ಸ್ವದೇಶಕ್ಕೆ ತೆರಳಲು ಹಸ್ಸಿ ಸಜ್ಜು

ಪ್ರತ್ಯೇಕವಾಸದಲ್ಲಿ ಮುಂದುವರಿದ ವೃದ್ಧಿಮಾನ್ ಸಹಾ
Last Updated 14 ಮೇ 2021, 13:17 IST
ಅಕ್ಷರ ಗಾತ್ರ

ನವದೆಹಲಿ: ಐಪಿಎಲ್ ಫ್ರಾಂಚೈಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ ಅವರು ಕೋವಿಡ್‌ನಿಂದ ಚೇತರಿಸಿಕೊಂಡಿದ್ದು, ಭಾನುವಾರ ತವರು ದೇಶ ಆಸ್ಟ್ರೇಲಿಯಾಕ್ಕೆ ತೆರಳಲು ಸಜ್ಜಾಗಿದ್ದಾರೆ. ಆದರೆ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ವೃದ್ಧಿಮಾನ್ ಅವರ ಪರೀಕ್ಷಾ ವರದಿ ಮತ್ತೊಮ್ಮೆ ‘ಪಾಸಿಟಿವ್‘ ಬಂದಿದ್ದು, ಪ್ರತ್ಯೇಕವಾಸದಲ್ಲಿ ಮುಂದುವರಿಯಲಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ ಹಾಗೂ ಅದರ ಬಳಿಕ ನಡೆಯುವ ಇಂಗ್ಲೆಂಡ್‌ ಎದುರಿನ ಟೆಸ್ಟ್ ಸರಣಿಗೆ ಸಹಾ ಅವರು ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದೇ 25ರಂದುಅವರು, ಭಾರತ ತಂಡವು ತಂಗಿರುವ ಮುಂಬೈನ ಬಯೋಬಬಲ್ ಸೇರಿಕೊಳ್ಳುವ ಆಶಯ ಹೊಂದಿದ್ದಾರೆ. ಆದರೆ ಇದು ಅವರ ಫಿಟ್‌ನೆಸ್‌ ಮೇಲೆ ಅವಲಂಬಿತವಾಗಿದೆ.

ಐಪಿಎಲ್‌ ಟೂರ್ನಿಯನ್ನು ಅನಿರ್ದಿಷ್ಟ ಅವಧಿಗೆ ಸ್ಥಗಿತಗೊಳಿಸಲಾಗಿದೆ. ಟೂರ್ನಿಯ ವೇಳೆ ಹಸ್ಸಿ ಮತ್ತು ಸಹಾ ಅವರಿಗೆ ಕೋವಿಡ್ ಇರುವುದು ದೃಢಪಟ್ಟಿತ್ತು.

‘ಹಸ್ಸಿ ಅವರ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಅವರು ಚೇತರಿಸಿಕೊಂಡಿದ್ದಾರೆ. ಅವರು ಯಾವ ಮಾರ್ಗದಿಂದ (ಮಾಲ್ಡಿವ್ಸ್ ಅಥವಾ ಆಸ್ಟ್ರೇಲಿಯಾ) ಸ್ವದೇಶಕ್ಕೆ ತೆರಳಬೇಕು ಎಂಬುದನ್ನು ನಾವಿನ್ನೂ ನಿರ್ಧರಿಸಿಲ್ಲ‘ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಶಿ ವಿಶ್ವನಾಥನ್ ತಿಳಿಸಿದ್ದಾರೆ.

ಹಸ್ಸಿ ಅವರನ್ನು ಹೊರತುಪಡಿಸಿ, ಐಪಿಎಲ್ ಟೂರ್ನಿಯಲ್ಲಿದ್ದ ಆಸ್ಟ್ರೇಲಿಯಾದ ಆಟಗಾರರು, ವೀಕ್ಷಕ ವಿವರಣೆಕಾರರು, ತರಬೇತಿದಾರರು ಹಾಗೂ ನೆರವು ಸಿಬ್ಬಂದಿ ಸದ್ಯ ಮಾಲ್ಡಿವ್ಸ್‌ನಲ್ಲಿದ್ದು, ಅಲ್ಲಿಂದ ಆಸ್ಟ್ರೇಲಿಯಾಕ್ಕೆ ಭಾನುವಾರ ತೆರಳಲಿದ್ದಾರೆ.

ಆಸ್ಟ್ರೇಲಿಯಾ ಸರ್ಕಾರವು ಭಾರತದಿಂದ ತೆರಳುವ ಎಲ್ಲ ವಿಮಾನಗಳನ್ನು ಮೇ 15ರವರೆಗೆ ಸ್ಥಗಿತಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT