ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್: ಡೀನ್ ದಾಳಿಗೆ ಕುಸಿದ ಮಿಥಾಲಿ ಬಳಗ

ಇಂಗ್ಲೆಂಡ್ ಎದುರು ಭಾರತಕ್ಕೆ ಸೋಲು
Last Updated 16 ಮಾರ್ಚ್ 2022, 22:54 IST
ಅಕ್ಷರ ಗಾತ್ರ

ಮೌಂಟ್ ಮಾಂಗನೂಯಿ: ಚಾರ್ಲೆಟ್ ಡೀನ್ ಮತ್ತು ಅನ್ಯಾ ಶ್ರುಬ್‌ಸೊಲ್ ಅವರ ಚುರುಕಿನ ದಾಳಿಯ ನೆರವಿನಿಂದ ಇಂಗ್ಲೆಂಡ್ ತಂಡವು ಇಲ್ಲಿ ನಡೆಯುತ್ತಿರುವ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಜಯದ ಸಂಭ್ರಮ ಆಚರಿಸಿತು.

ಬುಧವಾರ ಇಲ್ಲಿ ನಡೆದ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಭಾರತ ತಂಡವು ನಾಲ್ಕು ವಿಕೆಟ್‌ಗಳಿಂದ ಇಂಗ್ಲೆಂಡ್ ಎದುರು ಸೋತಿತು. 31.2 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 136 ರನ್ ಗಳಿಸಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡವು ಭಾರತ ತಂಡವನ್ನು 38.2 ಓವರ್‌ಗಳಲ್ಲಿ 134 ರನ್‌ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ಡೀನ್ (23ಕ್ಕೆ4) ಮತ್ತು ಶ್ರಭ್‌ಸೋಲ್ (20ಕ್ಕೆ2) ಬೌಲಿಂಗ್‌ ಎದುರು ಭಾರತ ತಂಡದ ಅಗ್ರ ಬ್ಯಾಟರ್‌ಗಳು ವಿಫಲರಾದರು. ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ, ಹರ್ಮನ್‌ಪ್ರೀತ್ ಕೌರ್ , ರಿಚಾ ಘೋಷ್ ಮತ್ತು ಜೂಲನ್ ಗೋಸ್ವಾಮಿ ಅವರು ಮಾತ್ರ ಎರಡಂಕಿ ಮೊತ್ತ ತಲುಪಿದರು.

ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು ಹೀಥರ್ ನೈಟ್ (ಅಜೇಯ 53) ಅರ್ಧಶತಕದ ಬಲದಿಂದ 31.2 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 136 ರನ್ ಗಳಿಸಿ ಗೆದ್ದಿತು.

ಇಂಗ್ಲೆಂಡ್ ತಂಡಕ್ಕೆ ಇದು ನಾಲ್ಕನೇ ಪಂದ್ಯ. ಮೂರರಲ್ಲಿ ಸೋತಿತ್ತು. ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಭಾರತತಂಡ ಕೂಡ ನಾಲ್ಕು ಪಂದ್ಯಗಳಲ್ಲಿ ಆಡಿದ್ದು, ಎರಡು ಗೆದ್ದು, ಉಳಿದಿದ್ದರಲ್ಲಿ ಸೋತು ಮೂರನೇ ಸ್ಥಾನದಲ್ಲಿದೆ.

ಭಾರತ ತಂಡವು ಲೀಗ್ ಹಂತದಲ್ಲಿ ಇನ್ನೂ ಮೂರು ಪಂದ್ಯಗಳನ್ನು ಆಡಬೇಕಿದೆ. ಆಸ್ಟ್ರೇಲಿಯಾ, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ತಂಡಗಳನ್ನು ಎದುರಿಸಲಿದೆ.

ಮೇಘನಾಗೆ ಮೂರು ವಿಕೆಟ್: ಬ್ಯಾಟಿಂಗ್ ಪಡೆಯು ಗಳಿಸಿದ ಸಣ್ಣ ಮೊತ್ತವನ್ನು ರಕ್ಷಿಸಿಕೊಳ್ಳಲು ಬೌಲರ್‌ಗಳು ಮಾಡಿದ ಪ್ರಯತ್ನ ಸಫಲವಾಗಲಿಲ್ಲ. ಮೇಘನಾ ಸಿಂಗ್ ಮೂರು ವಿಕೆಟ್ ಗಳಿಸಿದರು. ಅನುಭವಿ ಜೂಲನ್ ಗೋಸ್ವಾಮಿ ತಮ್ಮ ಮೊದಲ ಓವರ್‌ನಲ್ಲಿ ಟ್ಯಾಮಿ ಬೆಮೌಂಟ್ ವಿಕೆಟ್ ಪಡೆದು ಉತ್ತಮ ಆರಂಭ ಮಾಡಿದರು. ನಂತರದ ಓವರ್‌ನಲ್ಲಿ ಮೇಘನಾ ಸಿಂಗ್ ಬೌಲಿಂಗ್‌ನಲ್ಲಿ ಡೇನಿಯಲ್ ವೈಟ್ ಔಟಾದರು.

ಆದರೆ ಈ ಹಂತದಲ್ಲಿ ಜೊತೆಗೂಡಿದ ಹೀಥರ್ ಮತ್ತು ನಥಾಲಿಯಾ ಶಿವರ್ (45; 46ಎ) ಮೂರನೇ ವಿಕೆಟ್ ಜೊತೆಯಾಟದಲ್ಲಿ 65 ರನ್‌ ಸೇರಿಸಿದರು. ಇದರಿಂದಾಗಿ ಇಂಗ್ಲೆಂಡ್ ಗೆಲುವು ಸುಗಮವಾಯಿತು. ರಾಜೇಶ್ವರಿ ಗಾಯಕವಾಡ್ ಮತ್ತು ಪೂಜಾ ವಸ್ತ್ರಕರ್ ತಲಾ ಒಂದು ವಿಕೆಟ್ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT