ರಾರಾಜಿಸಿದ ಈಶ್ವರನ್‌, ರಾಹುಲ್‌

7
ಕ್ರಿಕೆಟ್‌: ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ಭಾರತ ‘ಎ’ ಉತ್ತಮ ಮೊತ್ತ

ರಾರಾಜಿಸಿದ ಈಶ್ವರನ್‌, ರಾಹುಲ್‌

Published:
Updated:
Prajavani

ಮೈಸೂರು: ಅಭಿಮನ್ಯು ಈಶ್ವರನ್‌ ಮತ್ತು ಕೆ.ಎಲ್‌.ರಾಹುಲ್‌ ಅವರು ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಬುಧವಾರ ಬೆಳಗಿದರೆ, ಎದುರಾಳಿ ತಂಡದ ಆಟಗಾರರು ಬಳಲಿ ಬೆಂಡಾದರು.

ಇವರಿಬ್ಬರು ಮೊದಲ ವಿಕೆಟ್‌ಗೆ ಸೇರಿಸಿದ 178 ರನ್‌ಗಳ ಜತೆಯಾಟದ ಬಲದಿಂದ ಭಾರತ ‘ಎ’ ತಂಡ, ಇಂಗ್ಲೆಂಡ್‌ ಲಯನ್ಸ್ ವಿರುದ್ಧದ ನಾಲ್ಕು ದಿನಗಳ ‘ಟೆಸ್ಟ್‌’ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಮೂರು ವಿಕೆಟ್‌ಗೆ 282 ರನ್‌ ಗಳಿಸಿತು.

ಈಶ್ವರನ್ ಶತಕದ (117, 222 ಎಸೆತ, 13 ಬೌಂ, 1 ಸಿ) ಮೂಲಕ ದಿನದಾಟದ ಗೌರವ ತಮ್ಮದಾಗಿಸಿಕೊಂಡರೆ, ಆಕರ್ಷಕ ಆಟವಾಡಿದ ರಾಹುಲ್‌ (81, 166 ಎಸೆತ, 11 ಬೌಂ.) ಮತ್ತೊಮ್ಮೆ ಶತಕದ ಗಡಿಯಲ್ಲಿ ಎಡವಿದರು. ವಯನಾಡಿನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಅವರು 89 ರನ್‌ ಗಳಿಸಿ ಔಟಾಗಿದ್ದರು.

ಭರ್ಜರಿ ಜತೆಯಾಟ: ಟಾಸ್‌ ಗೆದ್ದ ಭಾರತ ‘ಎ’ ತಂಡದ ನಾಯಕ ರಾಹುಲ್‌ ಬ್ಯಾಟಿಂಗ್‌ ಆಯ್ದುಕೊಂಡರು. ಲೆವಿಸ್‌ ಗ್ರೆಗೊರಿ ಮತ್ತು ಥಾಮಸ್‌ ಬೈಲಿ ಅವರು ಆರಂಭದಲ್ಲಿ ಬಿಗುವಿನ ಬೌಲಿಂಗ್‌ ನಡೆಸಿದರು. ಆದರೆ ರಾಹುಲ್‌ ಹಾಗೂ ಈಶ್ವರನ್‌ ಮೊದಲ ಏಳೆಂಟು ಓವರ್‌ಗಳನ್ನು ಎಚ್ಚರಿಕೆಯಿಂದ ಎದುರಿಸಿ, ಆ ಬಳಿಕ ಇಂಗ್ಲೆಂಡ್‌ ಬೌಲರ್‌ಗಳ ಮೇಲೆ ಪ್ರಭುತ್ವ ಸಾಧಿಸಿದರು.

ಗ್ರೆಗೊರಿ ಬೌಲ್‌ ಮಾಡಿದ 9ನೇ ಓವರ್‌ನಲ್ಲಿ ಮೂರು ಬೌಂಡರಿ ಗಳಿಸಿದ ರಾಹುಲ್‌ ಎದುರಾಳಿ ತಂಡಕ್ಕೆ ಅಪಾಯದ ಸೂಚನೆ ನೀಡಿದರು. ಬೌಲಿಂಗ್‌ನಲ್ಲಿ ಮೊದಲ ಬದಲಾವಣೆ ರೂಪದಲ್ಲಿ ದಾಳಿಗಿಳಿದ ಡ್ಯಾನಿ ಬ್ರಿಗ್ಸ್‌ ಅವರನ್ನು ರಾಹುಲ್‌ ಸತತ ಎರಡು ಬೌಂಡರಿಗಳ ಮೂಲಕ ಸ್ವಾಗತಿಸಿದರು.

ಭೋಜನ ವಿರಾಮದ ವೇಳೆಗೆ ಭಾರತ ‘ಎ’ 27 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 82 ರನ್‌ ಗಳಿಸಿತ್ತು. ದಿನದ ಎರಡನೇ ಅವಧಿಯಲ್ಲೂ ಇವರಿಬ್ಬರು ಸ್ಪರ್ಧೆಗೆ ಬಿದ್ದವರಂತೆ ರನ್‌ಗಳನ್ನು ಕಲೆಹಾಕಿ ಎದುರಾಳಿಗಳನ್ನು ಕಾಡಿದರು.

ಗ್ರೆಗೊರಿ ಬೌಲಿಂಗ್‌ನಲ್ಲಿ ಕವರ್‌ ಡ್ರೈವ್‌ ಮೂಲಕ ಬೌಂಡರಿ ಗಳಿಸಿ ರಾಹುಲ್ ಅರ್ಧಶತಕ ಪೂರೈಸಿದರು. ರಾಹುಲ್‌ ಬ್ಯಾಟಿಂಗ್‌ನಿಂದ ಉತ್ತೇಜಿತರಾದಂತೆ ಕಂಡುಬಂದ ಈಶ್ವರನ್‌ ಅವರು ಆಕ್ರಮಣಕಾರಿ ಹೊಡೆತಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಉತ್ತಮವಾಗಿ ಆಡುತ್ತಿದ್ದ ರಾಹುಲ್‌ಗೆ ಶತಕ ಗಳಿಸುವ ಅದೃಷ್ಟವಿರಲಿಲ್ಲ. ಚಹಾ ವಿರಾಮದ ಬಳಿಕದ ನಾಲ್ಕನೇ ಓವರ್‌ನಲ್ಲಿ ಜಾನ್‌ ಚಾಪೆಲ್‌ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್‌ಗೆ ಕ್ಯಾಚಿತ್ತು ಔಟಾದರು. ರಾಹುಲ್‌ ಆಟವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬಂದಿದ್ದರು.

ಈಶ್ವರನ್‌ ಶತಕ: ರಾಹುಲ್‌ ಔಟಾದ ಬಳಿಕವೂ ತನ್ನ ಕಲಾತ್ಮಕ ಆಟ ಮುಂದುವರಿಸಿದ ಈಶ್ವರನ್‌ ಶತಕ ಪೂರೈಸಿದರು. ಅವರು ಪ್ರಿಯಾಂಕ್‌ ಪಾಂಚಾಲ್‌ ಜತೆ ಎರಡನೇ ವಿಕೆಟ್‌ಗೆ 108 ಎಸೆತಗಳಲ್ಲಿ 74 ರನ್‌ ಸೇರಿಸಿದರು.

ಶತಕ ಪೂರೈಸಿದ ಬಳಿಕ ಈಶ್ವರನ್‌ ಹೆಚ್ಚುಹೊತ್ತು ನಿಲ್ಲಲಿಲ್ಲ. ಡೊಮಿನಿಕ್‌ ಬೆಸ್ಸ್ ಅವರಿಗೆ ವಿಕೆಟ್‌ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ದ್ವಿಶತಕ ಗಳಿಸಿದ್ದ ಪ್ರಿಯಾಂಕ್‌ ಪಾಂಚಾಲ್‌ (50, 88 ಎಸೆತ) ಅವರನ್ನು ದಿನದ ಕೊನೆಯ ಓವರ್‌ನಲ್ಲಿ ಔಟ್‌ ಮಾಡಿದ ಇಂಗ್ಲೆಂಡ್‌ ಅಲ್ಪ ಸಮಾಧಾನ ಪಟ್ಟುಕೊಂಡಿತು.

***

ದಿನದ ಮೊದಲ ಅವಧಿಯಲ್ಲಿ ಬ್ಯಾಟಿಂಗ್‌ ಕಷ್ಟಕರವಾಗಿತ್ತು. ಶತಕ ಸಾಧನೆ ಮಾಡಿದ್ದು ಸಂತಸ ಉಂಟುಮಾಡಿದೆ.
ಅಭಿಮನ್ಯು ಈಶ್ವರನ್‌

–ಭಾರತ ತಂಡದ ಆಟಗಾರ

ಸ್ಕೋರ್‌ ಕಾರ್ಡ್

ಭಾರತ ‘ಎ’ ಮೊದಲ ಇನಿಂಗ್ಸ್ 3 ವಿಕೆಟ್‌ಗೆ 282 (84.5 ಓವರ್‌ಗಳಲ್ಲಿ)

ಕೆ.ಎಲ್‌. ರಾಹುಲ್ ಸಿ ಅಲಿವರ್‌ ಪೋಪ್ ಬಿ ಜಾನ್‌ ಚಾಪೆಲ್ 81

ಅಭಿಮನ್ಯು ಈಶ್ವರನ್ ಸಿ ಅಲಿವರ್‌ ಪೋಪ್‌ ಬಿ ಡೊಮಿನಿಕ್‌ ಬೆಸ್ಸ್ 117

ಪ್ರಿಯಾಂಕ್‌ ಪಾಂಚಾಲ್ ಬಿ ಥಾಮಸ್‌ ಬೈಲಿ 50

ಕರುಣ್‌ ನಾಯರ್ ಬ್ಯಾಟಿಂಗ್ 14

ಇತರೆ: (ವೈಡ್ 2, ಬೈ 8, ಲೆಗ್‌ಬೈ 10 ) 20

ವಿಕೆಟ್‌ ಪತನ: 1–178 (ರಾಹುಲ್; 55.6), 2-252 (ಈಶ್ವರನ್; 73.6), 3–282 (ಪಾಂಚಾಲ್; 84.5)

ಬೌಲಿಂಗ್: ಲೆವಿಸ್‌ ಗ್ರೆಗೊರಿ 13–1–52–0, ಥಾಮಸ್‌ ಬೈಲಿ 18.5–5–46–1, ಡ್ಯಾನಿ ಬ್ರಿಗ್ಸ್ 9–1–43–0, ಜಾನ್ ಚಾಪೆಲ್ 14–4–32–1, ಸ್ಟೀವನ್ ಮ್ಯುಲೇನಿ 12–6–20–0, ಡೊಮಿನಿಕ್‌ ಬೆಸ್ಸ್ 18–3–71–1

 

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !