ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಕ್ರಿಕೆಟ್‌: ‘ಬಾಂಗ್ಲಾ ಹುಲಿಗಳ’ ಬೇಟೆಗೆ ಭಾರತ ಸಜ್ಜು?

ವಿರಾಟ್‌ ಪಡೆಗೆ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಚಿಂತೆ
Last Updated 27 ಮೇ 2019, 18:41 IST
ಅಕ್ಷರ ಗಾತ್ರ

ಕಾರ್ಡಿಫ್‌: ನ್ಯೂಜಿಲೆಂಡ್‌ ಎದುರಿನ ಮೊದಲ ಹೋರಾಟದಲ್ಲೇ ಮುಗ್ಗರಿಸಿರುವ ಭಾರತ ತಂಡ ಈಗ ಮತ್ತೊಂದು ಪೈಪೋಟಿಗೆ ಸಜ್ಜಾಗಿದೆ.

ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ತನ್ನ ಎರಡನೇ ಅಭ್ಯಾಸ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಬಳಗವು ಬಾಂಗ್ಲಾದೇಶದ ಸವಾಲು ಎದುರಿಸಲಿದೆ.

ಸೋಫಿಯಾ ಗಾರ್ಡನ್ಸ್‌ನಲ್ಲಿ ಮಂಗಳವಾರ ನಡೆಯುವ ಪಂದ್ಯದಲ್ಲಿ ‘ಬಾಂಗ್ಲಾ ಹುಲಿ’ಗಳ ಬೇಟೆಯಾಡಿ ವಿಶ್ವಾಸ ಮರಳಿ ಪಡೆಯಲು ಕೊಹ್ಲಿ ಪಡೆ ಕಾತರವಾಗಿದೆ.

ನ್ಯೂಜಿಲೆಂಡ್‌ ಎದುರಿನ ಪಂದ್ಯದಲ್ಲಿ ಭಾರತವು ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡಿತ್ತು. ಆರಂಭಿಕರಾದ ರೋಹಿತ್‌ ಶರ್ಮಾ ಮತ್ತು ಶಿಖರ್‌ ಧವನ್‌ ಒಂದಂಕಿ ಮೊತ್ತಕ್ಕೆ ಔಟಾಗಿದ್ದರು. ಕೆ.ಎಲ್‌.ರಾಹುಲ್‌ ಹಾಗೂ ದಿನೇಶ್‌ ಕಾರ್ತಿಕ್‌ ಕೂಡಾ ಬೇಗನೆ ವಿಕೆಟ್‌ ಒಪ್ಪಿಸಿದ್ದರು.

ನಾಯಕ ಕೊಹ್ಲಿ ಮತ್ತು ಅನುಭವಿ ವಿಕೆಟ್‌ ಕೀಪರ್‌ ಮಹೇಂದ್ರ ಸಿಂಗ್‌ ಧೋನಿ ಅವರೂ ಕಿವೀಸ್‌ ದಾಳಿಗೆ ತತ್ತರಿಸಿದ್ದರು. ಹೀಗಾಗಿ ಭಾರತವು 91ರನ್‌ಗಳಿಗೆ ಏಳು ವಿಕೆಟ್‌ ಕಳೆದುಕೊಂಡಿತ್ತು.

ಆಲ್‌ರೌಂಡರ್‌ಗಳಾದ ಹಾರ್ದಿಕ್‌ ಪಾಂಡ್ಯ (30) ಮತ್ತು ರವೀಂದ್ರ ಜಡೇಜ (54) ಕೆಚ್ಚೆದೆಯಿಂದ ಹೋರಾಡಿದ್ದರಿಂದ ತಂಡದ ಮೊತ್ತವು ಶತಕದ ಗಡಿ ದಾಟಿತ್ತು.

ಜೂನ್‌ 5ರಂದು ಭಾರತ ತಂಡವು ಬಲಿಷ್ಠ ದಕ್ಷಿಣ ಆಫ್ರಿಕಾ ಎದುರು ಸೆಣಸಲಿದೆ. ಈ ಹೋರಾಟಕ್ಕೂ ಮುನ್ನ ಲಯ ಕಂಡುಕೊಳ್ಳಲು ವಿರಾಟ್‌ ಬಳಗದ ಬ್ಯಾಟ್ಸ್‌ಮನ್‌ಗಳಿಗೆ ಬಾಂಗ್ಲಾ ಎದುರಿನ ಪಂದ್ಯ ವೇದಿಕೆಯಾಗಿದೆ. ಈ ಅವಕಾಶವನ್ನು ಆಟಗಾರರು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದು ಸದ್ಯದ ಕುತೂಹಲ.

ಜಸ್‌ಪ್ರೀತ್‌ ಬೂಮ್ರಾ, ವೇಗದ ಬೌಲಿಂಗ್‌ ವಿಭಾಗದ ಶಕ್ತಿಯಾಗಿದ್ದಾರೆ. ನ್ಯೂಜಿಲೆಂಡ್‌ ಎದುರು ನಾಲ್ಕು ಓವರ್‌ ಬೌಲ್‌ ಮಾಡಿದ್ದ ಅವರು ಕೇವಲ ಎರಡು ರನ್‌ ನೀಡಿ ಒಂದು ವಿಕೆಟ್‌ ಉರುಳಿಸಿದ್ದರು. ಹೀಗಾಗಿ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ ಮತ್ತು ಹಾರ್ದಿಕ್‌ ಪಾಂಡ್ಯ ಅವರಿಂದ ಬೂಮ್ರಾಗೆ ಸೂಕ್ತ ಬೆಂಬಲ ಸಿಗಬೇಕಿದೆ.

ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್‌, ಕುಲದೀಪ್‌ ಯಾದವ್‌ ಮತ್ತು ರವೀಂದ್ರ ಜಡೇಜ ಕೂಡಾ ಕೈಚಳಕ ತೋರಬೇಕಿದೆ.

ಮಷ್ರಫೆ ಮೊರ್ತಜಾ ಸಾರಥ್ಯದ ಬಾಂಗ್ಲಾ ಕೂಡಾ ಗೆಲುವಿನ ತವಕದಲ್ಲಿದೆ. ಈ ತಂಡ ಪಾಕಿಸ್ತಾನ ಎದುರು ಮೊದಲ ಅಭ್ಯಾಸ ‍ಪಂದ್ಯ ಆಡಬೇಕಿತ್ತು. ಭಾನುವಾರದ ಈ ಹೋರಾಟ ಮಳೆಯಿಂದಾಗಿ ರದ್ದಾಗಿತ್ತು.

ಶಕೀಬ್‌ ಅಲ್‌ ಹಸನ್‌, ಮುಷ್ಫಿಕರ್‌ ರಹೀಮ್‌, ಮಹಮದುಲ್ಲಾ, ಮೊಹಮ್ಮದ್‌ ಮಿಥುನ್‌ ಮತ್ತು ಲಿಟನ್‌ ದಾಸ್‌ ಈ ತಂಡದ ಆಧಾರಸ್ಥಂಭಗಳಾಗಿದ್ದಾರೆ.

ಅಬು ಜಾಯೆದ್‌ ಮತ್ತು ತಮೀಮ್‌ ಇಕ್ಬಾಲ್‌ ಕೂಡಾ ಭಾರತದ ಬೌಲರ್‌ಗಳನ್ನು ಕಾಡಬಲ್ಲರು.

ಮುಷ್ತಾಫಿಜುರ್‌ ರೆಹಮಾನ್‌, ಸೌಮ್ಯ ಸರ್ಕಾರ್‌, ರುಬೆಲ್‌ ಹೊಸೇನ್‌ ಅವರ ಬೌಲಿಂಗ್‌ ಬಲವೂ ಈ ತಂಡಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT