ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್ ಬಳಗಕ್ಕೆ ಜಯದ ಕನಸು

ಭಾರತ–ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಕ್ರಿಕೆಟ್ ಪಂದ್ಯ ಇಂದಿನಿಂದ
Last Updated 29 ಆಗಸ್ಟ್ 2018, 19:50 IST
ಅಕ್ಷರ ಗಾತ್ರ

ಸೌಥಾಂಪ್ಟನ್. ಇಂಗ್ಲೆಂಡ್: ಟೆಸ್ಟ್‌ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸೋತಿದ್ದ ಭಾರತ ತಂಡವುಮೂರನೇ ಪಂದ್ಯದಲ್ಲಿ ಪುಟಿದೆದ್ದಿತ್ತು. ಗುರುವಾರದಿಂದ ಆರಂಭವಾಗಲಿರುವ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲೂ ಅದೇ ಜಯದ ಲಯವನ್ನು ಮುಂದುವರಿಸುವ ಛಲದಲ್ಲಿದೆ.

ಸರಣಿ ಗೆಲುವಿನ ಸಾಧನೆ ಮಾಡಬೇಕಾದರೆ ಭಾರತ ತಂಡವು ಈಗ ಉಳಿದಿರುವ ಎರಡೂ ಪಂದ್ಯಗಳಲ್ಲಿ ಗೆಲ್ಲಲೇಬೇಕು. ಆದರೆ ಇಂಗ್ಲೆಂಡ್ ತಂಡವು ಇನ್ನೊಂದು ಪಂದ್ಯ ಗೆದ್ದರೆ ಆಥವಾ ಎರಡರಲ್ಲೂ ಡ್ರಾ ಮಾಡಿ
ಕೊಂಡರೂ ಸರಣಿ ಜಯ ಸಾಧಿಸಬಹುದು. ಅದರಿಂದಾಗಿ ಭಾರತದ ಮೇಲೆಯೇ ಹೆಚ್ಚಿನ ಒತ್ತಡ ಇದೆ.

1936ರಲ್ಲಿ ಆ್ಯಷಸ್ ಸರಣಿಯಲ್ಲಿ ಡಾನ್ ಬ್ರಾಡ್ಮನ್ ನಾಯಕತ್ವದ ಆಸ್ಟ್ರೇಲಿಯಾ ತಂಡವು 0–2ರಿಂದ ಹಿನ್ನಡೆಯಲ್ಲಿತ್ತು. ನಂತರ ತಿರುಗೇಟು ನೀಡಿದ್ದ ಬ್ರಾಡ್ಮನ್ ಬಳಗವು ಸರಣಿಯನ್ನು ಗೆದ್ದಿತ್ತು. ಅದೇ ರೀತಿಯ ಸಾಧನೆಯನ್ನು ಭಾರತವೂ ಈ ಬಾರಿ ಮಾಡುವ ನಿರೀಕ್ಷೆ ಮೂಡಿದೆ.

ಆರಂಭಿಕ ಚಿಂತೆ: ಕಳೆದ ಮೂರು ಪಂದ್ಯಗಳಲ್ಲಿಯೂ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳು ನಿರೀಕ್ಷೆಗೆ ತಕ್ಕಂತೆ ಆಡಿಲ್ಲ. ಆದ್ದರಿಂದ ಮುರಳಿ ವಿಜಯ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಕರ್ನಾಟಕದ ಕೆ.ಎಲ್. ರಾಹುಲ್‌ ಮತ್ತು ಶಿಖರ್ ಧವನ್‌ಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆ ಇದೆ.

ಚೇತೇಶ್ವರ್ ಪೂಜಾರ. ಅಜಿಂಕ್ಯ ರಹಾನೆ ಕೂಡ ಹೋದ ಪಂದ್ಯದಲ್ಲಿ ಲಯಕ್ಕೆ ಮರಳಿದ್ದು ಬಲ ಹೆಚ್ಚಿದಂತಾಗಿದೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಅವರು ಎರಡು ಶತಕಗಳನ್ನು ದಾಖಲಿಸಿದ್ದಾರೆ. ಆದ್ದರಿಂದ ಅವರನ್ನು ಕಟ್ಟಿಹಾಕುವತ್ತಲೇ ಇಂಗ್ಲೆಂಡ್ ಬೌಲರ್‌ಗಳು ಗುರಿ ಇಡುವುದು ಖಚಿತ. ವೇಗಿಗಳಾದ ಜೇಮ್ಸ್‌ ಆ್ಯಂಡರ್ಸನ್, ಸ್ಯಾಮ್ ಕರನ್, ಸ್ಟುವರ್ಟ್‌ ಬ್ರಾಡ್ ಅವರುತಮ್ಮ ಬತ್ತಳಿಕೆಯಲ್ಲಿರುವ ಅಸ್ತ್ರಗಳನ್ನು ಪ್ರಯೋಗಿಸಲು ಸಿದ್ಧರಾಗಿದ್ದಾರೆ.

ಭಾರತದ ಜಸ್‌ಪ್ರೀತ್ ಬೂಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರು ಜೋ ರೂಟ್ ಪಡೆಗೆ ಕಠಿಣ ಸವಾಲು ಒಡ್ಡುವ ಸಮರ್ಥರು. ಬೂಮ್ರಾ ನೋಬಾಲ್‌ ಹಾಕುವುದನ್ನು ನಿಯಂತ್ರಿಸಿಕೊಂಡರೆ ಇನ್ನೂ ಹೆಚ್ಚಿನ ಪರಿಣಾಮ ಬೀರಬಲ್ಲರು.

ಪಿಚ್ ಸವಾಲು: ಇಲ್ಲಿಯ ಪಿಚ್‌ ಮೊದಲ ಇನಿಂಗ್ಸ್‌ ಆಡುವ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಕಠಿಣ ಸವಾಲೊಡ್ಡುವ ಸಾಧ್ಯತೆ ಇದೆ. ಆದರೆ ಮಧ್ಯಾಹ್ನದ ನಂತರ ಬ್ಯಾಟ್ಸ್‌ಮನ್‌ಗಳಿಗೆ ನೆರವಾಗಬಹುದು. ಆದರೆ ಮೂರನೇ ದಿನ ಸ್ಪಿನ್‌ ಬೌಲರ್‌ಗಳಿಗೆ ನೆರವಾಗುವ ನಿರೀಕ್ಷೆಯಿದೆ.

ಪಂದ್ಯ ಆರಂಭ: ಮಧ್ಯಾಹ್ನ 3.30 (ಭಾರತೀಯ ಕಾಲಮಾನ). ನೇರ ಪ್ರಸಾರ: ಸೋನಿ ಟೆನ್‌ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT