ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿ: ಕೌರ್‌ ಭಯದಲ್ಲಿ ಪಾಕ್‌ ಬಳಗ

7
ಗೆಲುವಿನ ವಿಶ್ವಾಸದಲ್ಲಿ ಭಾರತ ತಂಡ

ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿ: ಕೌರ್‌ ಭಯದಲ್ಲಿ ಪಾಕ್‌ ಬಳಗ

Published:
Updated:
Deccan Herald

ಪ್ರಾವಿಡೆನ್ಸ್, ಗಯಾನ: ನ್ಯೂಜಿಲೆಂಡ್‌ ಬೌಲರ್‌ಗಳನ್ನು ಬೌಂಡರಿ ಮತ್ತು ಸಿಕ್ಸರ್‌ಗೆ ಅಟ್ಟಿ ಆರ್ಭಟಿಸಿದ ಹರ್ಮನ್‌ಪ್ರೀತ್ ಕೌರ್‌ ಮತ್ತು ಯುವ ಆಟಗಾರ್ತಿ ಜೆಮಿಮಾ ರಾಡ್ರಿಗಸ್‌ ಮಿಂಚಿನ ಬ್ಯಾಟಿಂಗ್ ಮಾಡುವ ಹಂಬಲದೊಂದಿಗೆ ಭಾನುವಾರ ಮತ್ತೊಮ್ಮೆ ಅಂಗಣಕ್ಕೆ ಇಳಿಯಲಿದ್ದಾರೆ.

ಮಹಿಳೆಯರ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಶುಕ್ರವಾರ ಅಮೋಘ ಜಯ ಸಾಧಿಸಿದ ಭಾರತ ತಂಡ ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರನ್ನು ಎದುರಿಸುವುದು ಜವೇರಿಯಾ ಖಾನ್ ನಾಯಕತ್ವದ ಪಾಕಿಸ್ತಾನಕ್ಕೆ ಸವಾಲಾಗಲಿದೆ.

‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಭಾರತ 34 ರನ್‌ಗಳಿಂದ ಮಣಿಸಿತ್ತು. ಹರ್ಮನ್ ಪ್ರೀತ್ ಕೌರ್‌ 51 ಎಸೆತಗಳಲ್ಲಿ 103 ರನ್‌ ಗಳಿಸಿ ಚುಟುಕು ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 45 ಎಸೆತಗಳಲ್ಲಿ 59 ರನ್‌ ಗಳಿಸಿದ ಜೆಮಿಮಾ ರಾಡ್ರಿಗಸ್ ಅವರ ಜೊತೆಗೂಡಿ ಹರ್ಮನ್‌ಪ್ರೀತ್‌ ಕೌರ್‌ 134 ರನ್‌ ಸೇರಿಸಿದ್ದರು.

2016ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನಕ್ಕೆ ಮಣಿದಿತ್ತು. ನಂತರ ಏಷ್ಯಾಕಪ್‌ನಲ್ಲಿ ಉಭಯ ತಂಡಗಳು ಮೂರು ಬಾರಿ ಮುಖಾಮುಖಿಯಾಗಿದ್ದು ಎಲ್ಲ ಪಂದ್ಯಗಳನ್ನು ಭಾರತ ಗೆದ್ದಿದೆ. ವಿಶ್ವಕಪ್‌ನಲ್ಲಿ ಅನುಭವಿಸಿದ ಸೋಲಿನ ಹಕಿ ಮರೆಯಲು ಭಾರತ ಮತ್ತು ಏಷ್ಯಾಕಪ್‌ನಲ್ಲಿನ ಸೋಲಿಗೆ ಪ್ರತೀಕಾರ ತೀರಿಸಲು ಪಾಕಿಸ್ತಾನ ಭಾನುವಾರ ಪ್ರಯತ್ನಿಸಲಿದೆ. ಹೀಗಾಗಿ ರೋಚಕ ಹಣಾಹಣಿಯಲ್ಲಿ ನಿರೀಕ್ಷಿಸಲಾಗಿದೆ.

ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧ 52 ರನ್‌ಗಳಿಂದ ಸೋತಿತ್ತು. ಇದು ಭಾರತದ ವಿಶ್ವಾಸವನ್ನು ಹೆಚ್ಚಿಸಿದೆ.

ಯುವ ಪಡೆಯ ಮೇಲೆ ಭರವಸೆ: ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ  ಯುವ ಆಟಗಾರ್ತಿಯರೂ ಭರವಸೆಯ ಆಟವಾಡಿದ್ದಾರೆ. ಹರ್ಮನ್ ಪ್ರೀತ್ ಕೌರ್ ಸ್ಫೋಟಕ ಬ್ಯಾಟಿಂಗ್‌ ಮಾಡುತ್ತಿದ್ದರೆ, 18 ವರ್ಷದ ಜೆಮಿಮಾ ಒಂಟಿ ರನ್‌ಗಳನ್ನು ಹೆಕ್ಕಿ ನಾಯಕಿಗೆ ಹೆಚ್ಚು ಅವಕಾಶ ಒದಗಿಸುತ್ತಿದ್ದರು. ಸ್ಪಿನ್ನರ್‌ಗಳಾದ ದೀಪ್ತಿ ಶರ್ಮಾ, ಪೂನಮ್ ಯಾದವ್‌ ಮತ್ತು ರಾಧಾ ಯಾದವ್ ಅವರೊಂದಿಗೆ ದಯಾಳನ್‌ ಹೇಮಲತಾ ಪದಾರ್ಪಣೆ ಪಂದ್ಯದಲ್ಲಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಏಕೈಕ ವೇಗದ ಬೌಲರ್‌ಗೆ (ಅರುಂಧತಿ ರೆಡ್ಡಿ) ಅವಕಾಶ ನೀಡಲಾಗಿತ್ತು. ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಮಾನಸಿ ಜೋಶಿ ಅಥವಾ ಪೂಜಾ ವಸ್ತ್ರಕಾರ್‌ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಬಲಿಷ್ಠ ತಂಡ: ಪಾಕಿಸ್ತಾನ ತಂಡಕ್ಕೆ ನಾಯಕಿ ಜವೇರಿಯಾ ಖಾನ್‌ ಅವರೊಂದಿಗೆ ಅನುಭವಿ ಆಟಗಾರ್ತಿಯರಾದ ಸನಾ ಮಿರ್‌, ಬಿಸ್ಮಾ ಮರೂಫ್‌ ಮುಂತಾದವರ ಬಲವಿದೆ.

ತಂಡಗಳು: ಭಾರತ: ಹರ್ಮನ್‌ಪ್ರೀತ್‌ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್‌, ಸ್ಮೃತಿ ಮಂದಾನ, ತನಿಯಾ ಭಾಟಿಯಾ, ಏಕ್ತಾ ಬಿಷ್ಟ್‌, ದಯಾಳನ್ ಹೇಮಲತಾ, ಮಾನಸಿ ಜೋಶಿ, ವೇದಾ ಕೃಷ್ಣಮೂರ್ತಿ, ಅನುಜಾ ಪಾಟೀಲ್‌, ಪೂನಂ ಯಾದವ್‌, ಮಿಥಾಲಿ ರಾಜ್‌, ಅರುಂಧತಿ ರೆಡ್ಡಿ, ದೀಪ್ತಿ ಶರ್ಮಾ, ಪೂಜಾ ವಸ್ತ್ರಕಾರ್‌, ರಾಧಾ ಯಾದವ್‌.

ಪಾಕಿಸ್ತಾನ: ‌ಜವೇರಿಯಾ ಖಾನ್ (ನಾಯಕಿ), ಅಯ್ಮನ್ ಅನ್ವರ್‌, ಅಲಿಯಾ ರಿಯಾಜ್‌, ಅನಾಮ್‌ ಅಮೀನ್‌, ಆಯೆಷಾ ಜಫರ್‌, ಬಿಸ್ಮಾ ಮರೂಫ್‌, ಡಯಾನ ಬೇಗ್‌, ಮುನೀಬಾ ಅಲಿ, ನಹೀದ್‌ ಖಾನ್‌, ನಶ್ರಾ ಸಂಧು, ನತಾಲಿಯಾ ಪರ್ವೇಜ್‌, ನಿದಾ ದಾರ್‌, ಸನಾ ಮೀರ್‌, ಸಿದ್ರಾ ನವಾಜ್‌, ಉಮೈಮಾ ಸೊಹೈಲ್‌.

ಪಂದ್ಯ ಆರಂಭ: ರಾತ್ರಿ 6.30 (ಭಾರತೀಯ ಕಾಲಮಾನ)
ನೇರ ಪ್ರಸಾರ: ಸ್ಟಾರ್ ನೆಟ್‌ವರ್ಕ್‌

***
ಆತಿಥೇಯರ ಭರ್ಜರಿ ಅರಂಭ
ಆತಿಥೇಯ ವೆಸ್ಟ್ ಇಂಡೀಸ್‌ ತಂಡ ತನ್ನ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತು. ಶುಕ್ರವಾರ ರಾತ್ರಿ ನಡೆದ ‘ಎ’ ಗುಂಪಿನ ಹಣಾಹಣಿಯಲ್ಲಿ ವೆಸ್ಟ್ ಸ್ಟೆಫಾನಿ ಟೇಲರ್ ಬಳಗ ಬಾಂಗ್ಲಾದೇಶವನ್ನು 60 ರನ್‌ಗಳಿಂದ ಮಣಿಸಿತು.

ಸಂಕ್ಷಿಪ್ತ ಸ್ಕೋರು: ವೆಸ್ಟ್‌ ಇಂಡೀಸ್‌: 20 ಓವರ್‌ಗಳಲ್ಲಿ 8ಕ್ಕೆ 106 (ಕೈಸಿಯಾ ನೈಟ್‌ 32; ಜಹಾನಾರ ಆಲಂ 23ಕ್ಕೆ3, ರುಮಾನ ಅಹಮ್ಮದ್‌ 16ಕ್ಕೆ2); ಬಾಂಗ್ಲಾದೇಶ: 14.4 ಓವರ್‌ಗಳಲ್ಲಿ 46 (ಸೆಲ್ಹಂ 12ಕ್ಕೆ2, ಡಾಟಿನ್ 5ಕ್ಕೆ3).

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !