ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೆಂಟಿ–20 ಕ್ರಿಕೆಟ್‌: ಶತಕದ ಪಂದ್ಯಕ್ಕೆ ಜಯದ ಮೆರಗು ತುಂಬುವ ತವಕ

ಐರ್ಲೆಂಡ್– ಭಾರತ ಪಂದ್ಯ ಇಂದು
Last Updated 26 ಜೂನ್ 2018, 20:21 IST
ಅಕ್ಷರ ಗಾತ್ರ

ಡಬ್ಲಿನ್ : ಭಾರತ ಕ್ರಿಕೆಟ್‌ ತಂಡವು ಬುಧವಾರ ರಾತ್ರಿ ಡಬ್ಲಿನ್ ಅಂಗಳದಲ್ಲಿ ಐತಿಹಾಸಿಕ ಹೆಜ್ಜೆಗುರುತು ಮೂಡಿಸಲು ಸನ್ನದ್ಧವಾಗಿದೆ. ಟ್ವೆಂಟಿ–20 ಕ್ರಿಕೆಟ್‌ ಭಾರತವು ’ಶತಕ’ ಬಾರಿಸಲಿದೆ.

ಇಲ್ಲಿಯ ವಿಲೇಜ್ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ತಂಡವು ಐರ್ಲೆಂಡ್ ಬಳಗವನ್ನು ಎದುರಿಸಲಿದೆ. ಈ ಪಂದ್ಯವು ಭಾರತಕ್ಕೆ ನೂರನೇಯದ್ದು. 2006ರ ಡಿಸೆಂಬರ್‌ 1ರಂದು ಭಾರತ ತಂಡವು ಮೊದಲ ಅಂತರರಾಷ್ಟ್ರೀಯ ಚುಟುಕು ಪಂದ್ಯ ಆಡಿತ್ತು. ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಭಾರವು ದಕ್ಷಿಣ ಅಫ್ರಿಕಾ ವಿರುದ್ಧ ಗೆದ್ದಿತ್ತು. 2007ರಲ್ಲಿ ಮಹೇಂದ್ರಸಿಂಗ್ ದೋನಿ ನಾಯಕತ್ವದ ತಂಡವು ಚೊಚ್ಚಲ ಟ್ವೆಂಟಿ–20 ವಿಶ್ವಕಪ್ ಗೆದ್ದ ಸಾಧನೆಯನ್ನೂ ಮಾಡಿತ್ತು. ಇಲ್ಲಿಯವರೆಗೆ 61 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. 35ರಲ್ಲಿ ಸೋತಿದೆ. ಐಸಿಸಿ ಶ್ರೇಯಾಂಕ ಪಟ್ಟಿಯ ಮೂರನೇ ಸ್ಥಾನದಲ್ಲಿ ತಂಡವಿದೆ.

12 ವರ್ಷಗಳಿಂದ ಚುಟುಕು ಕ್ರಿಕೆಟ್‌ ಆಡಿದ ಅನುಭವ ಭಾರತ ತಂಡದ್ದು. ಇದೀಗ ಐರ್ಲೆಂಡ್ ಎದುರಿನ ಎರಡು ಟ್ವಿಂಟಿ–20 ಪಂದ್ಯಗಳ ಸರಣಿ ಆಡಲಿದೆ. 65 ಚುಟುಕು ಪಂದ್ಯಗಳನ್ನು ಆಡಿರುವ ಆತಿಥೇಯ ತಂಡವು ವಿರಾಟ್ ಬಳಗಕ್ಕೆ ಸಮಬಲದ ಪೈಪೋಟಿ ನೀಡುವುದು ಕಷ್ಟಸಾಧ್ಯ. ಕ್ರಿಕೆಟ್‌ ಮೂರು ಮಾದರಿಗಳಲ್ಲಿ ಶತಕ ಗಳಿಸಿದ ಶ್ರೇಯ ಹೊಂದಿರುವ ಸುರೇಶ್ ರೈನಾ, ಕೆ.ಎಲ್. ರಾಹುಲ್, 89 ಟಿ20 ಪಂದ್ಯಗಳನ್ನು ಆಡಿರುವ ಮಹೇಂದ್ರಸಿಂಗ್ ದೋನಿ, ರೋಹಿತ್ ಶರ್ಮಾ, ವಿರಾಟ್, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಶಿಖರ್ ಧವನ್ ಅವರ ಬಲ ಭಾರತ ತಂಡಕ್ಕೆ ಇದೆ. ‘ಡೆತ್ ಓವರ್’ ಪರಿಣತ ಜಸ್‌ಪ್ರೀತ್ ಬೂಮ್ರಾ, ‘ಸ್ವಿಂಗ್’ ಪರಿಣತ ಭುವನೇಶ್ವರ ಕುಮಾರ್, ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಅವರನ್ನು ಎದುರಿಸುವುದು ಐರ್ಲೆಂಡ್ ತಂಡದ ಬ್ಯಾಟಿಂಗ್ ಪಡೆಗೆ ಕಠಿಣ ಸವಾಲಾಗಬಹುದು.

ಐಪಿಎಲ್‌ನಲ್ಲಿ ಗಾಯಗೊಂಡಿದ್ದ ವಿರಾಟ್ ಕೊಹ್ಲಿ ಅವರು ಇಂಗ್ಲಿಷ್ ಕೌಂಟಿ ಮತ್ತು ಅಫ್ಗಾನಿಸ್ತಾನ ಎದುರಿನ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಆಡಿರಲಿಲ್ಲ. ಸುಮಾರು 35 ದಿನಗಳ ನಂತರ ಅವರು ಕಣಕ್ಕೆ ಇಳಿಯುತ್ತಿದ್ದಾರೆ. ಟ್ವಿಂಟಿ–20 ಮಾದರಿಯಲ್ಲಿ ಎರಡು ಸಾವಿರ ರನ್ ಗಡಿ ಮುಟ್ಟಲು ಅವರಿಗೆ ಕೇವಲ 17 ರನ್‌ಗಳ ಅವಶ್ಯಕತೆ ಇದೆ.

ಗ್ಯಾರಿ ವಿಲ್ಸನ್ ನಾಯಕತ್ವದ ಆತಿಥೇಯ ಬಳಗದಲ್ಲಿ ಆಲ್‌ರೌಂಡರ್ ಕೆವಿನ್ ಒಬ್ರೇನ್, ಪಾಲ್‌ ಸ್ಟರ್ಲಿಂಗ್, ಪೋರ್ಟರ್‌ಫೀಲ್ಡ್ ಅವರ ಮೇಲೆಯ ಹೆಚ್ಚು ಅವಲಂಬಿತವಾಗಿದೆ. ಪಂಜಾಬ್ ಮೂಲದ ಆಟಗಾರ ಸಿಮಿ ಸಿಂಗ್ ತಂಡದಲ್ಲಿದ್ದಾರೆ. ವೇಗಿಗಳಿಗೆ ನೆರವು ನೀಡುವ ಪಿಚ್‌ನಲ್ಲಿ ಐರ್ಲೆಂಡ್ ತಂಡವು ಪ್ರವಾಸಿಗರಿಗೆ ದಿಟ್ಟ ಸವಾಲು ಒಡ್ಡಲು ಸಿದ್ಧವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT