ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs BAN | ಗುರಿ ಸಣ್ಣದು; ಆತಂಕ ದೊಡ್ಡದು

Last Updated 24 ಡಿಸೆಂಬರ್ 2022, 21:45 IST
ಅಕ್ಷರ ಗಾತ್ರ

ಮೀರ್‌ಪುರ್: ಸಾಧಾರಣ ಗುರಿಯನ್ನು ಬೆನ್ನತ್ತಿರುವ ಭಾರತ ತಂಡವು ಬಾಂಗ್ಲಾದೇಶದ ಸ್ಪಿನ್ನರ್‌ಗಳ ಎದುರು ಆಘಾತ ಅನುಭವಿಸಿದೆ. ಇದರಿಂದಾಗಿ ಎರಡನೇ ಟೆಸ್ಟ್ ಪಂದ್ಯವು ರೋಚಕ ಘಟ್ಟ ತಲುಪಿದೆ.

ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ಮೊದಲ ದಿನದಿಂದಲೂ ಮೇಲುಗೈ ಸಾಧಿಸುತ್ತಲೇ ಬಂದ ಕೆ.ಎಲ್. ರಾಹುಲ್ ಬಳಗ ಶನಿವಾರ ಸಂಜೆಯ ಹೊತ್ತಿಗೆ ಸೋಲಿನ ಭೀತಿಯಲ್ಲಿದೆ.

145 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ್ದ ಭಾರತ ತಂಡವು ದಿನದಾಟದ ಮುಕ್ತಾಯಕ್ಕೆ 4 ವಿಕೆಟ್ ಕಳೆದುಕೊಂಡು 45 ರನ್‌ ಮಾತ್ರ ಗಳಿಸಿದೆ. ಪಂದ್ಯದಲ್ಲಿ ಇನ್ನೂ ಎರಡು ದಿನಗಳ ಆಟ ಬಾಕಿಯಿದೆ. ಆದರೆ, ಭಾರತ ತಂಡವು ಗೆಲ್ಲಲು 100 ರನ್‌ ಗಳಿಸಬೇಕು.

ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕಗಳನ್ನು ಗಳಿಸಿದ್ದ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಇನ್ನೂ ಕ್ರೀಸ್‌ಗೆ ಬಂದಿಲ್ಲ. ದಿನದಾಟದ ಕೊನೆಗೆ ಕ್ರೀಸ್‌ನಲ್ಲಿ ಉಳಿದಿರುವ ಅಕ್ಷರ್ ಪಟೇಲ್ (ಬ್ಯಾಟಿಂಗ್ 26; 54ಎಸೆತ) ಮತ್ತು ರಾತ್ರಿ ಕಾವಲುಗಾರ ಜೈದೇವ್ ಉನದ್ಕತ್ (ಬ್ಯಾಟಿಂಗ್ 3) ಎಚ್ಚರಿಕೆಯಿಂದ ಆಡಿ ವಿಕೆಟ್ ಪತನ ತಡೆದಿದ್ದಾರೆ.

ಆದರೆ ಅಗ್ರಕ್ರಮಾಂಕದ ಅನುಭವಿ ಬ್ಯಾಟರ್‌ಗಳು ಈ ಪಿಚ್‌ನಲ್ಲಿ ಎರಡಂಕಿ ರನ್ ಗಳಿಸಲೂ ಸಾಧ್ಯವಾಗಲಿಲ್ಲ.ಸರ್ಪಗಳು ಸಾಗುವ ಮಾದರಿಯಲ್ಲಿ ತಿರುವು ಪಡೆಯುತ್ತಿರುವ ಚೆಂಡಿನ ಲಯ ಗುರುತಿಸಿ ಆಡುವಲ್ಲಿ ಬ್ಯಾಟರ್‌ಗಳು ವಿಫಲರಾದರು.

ಮಿರಾಜ್ ಸ್ಪಿನ್:ಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡವನ್ನು ತಮ್ಮ ಭರ್ಜರಿ ಬ್ಯಾಟಿಂಗ್‌ನಿಂದ ಕಾಡಿದ್ದ ಆಫ್‌ಸ್ಪಿನ್‌ ಆಲ್‌ರೌಂಡರ್ ಮೆಹದಿ ಹಸನ್ ಮಿರಾಜ್ ಎರಡನೇ ಇನಿಂಗ್ಸ್‌ನಲ್ಲಿ ಮೂರು ವಿಕೆಟ್ ಗಳಿಸಿ ಬಾಂಗ್ಲಾ ಪಾಳೆಯದಲ್ಲಿ ಭರವಸೆ ಮೂಡಿಸಿದ್ದಾರೆ.

ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿಯೇ ನಾಯಕ ಕೆ.ಎಲ್. ರಾಹುಲ್ (2 ರನ್) ತಮ್ಮ ವಿಕೆಟ್ ಅನ್ನು ಶಕೀಬ್‌ಗೆ ಅರ್ಪಿಸಿದರು. ಇದರೊಂದಿಗೆ ಅವರ ಸತತ ವೈಫಲ್ಯ ಮುಂದುವರಿಯಿತು.

ಮೂರು ಓವರ್‌ಗಳ ನಂತರ ಟೆಸ್ಟ್ ಪರಿಣತ ಪೂಜಾರ ಮಿರಾಜ್ ಎಸೆತವನ್ನು ಆಡಲು ಕ್ರೀಸ್‌ನಿಂದ ಮುಂದಡಿ ಇಟ್ಟು ಬೀಟ್ ಆದರು. ವಿಕೆಟ್‌ಕೀಪರ್ ನೂರುಲ್ ಹಸನ್ ಸ್ಟಂಪ್ ಮಾಡಿ ಸಂಭ್ರಮಿಸಿದರು.‌

ಆರು ಓವರ್‌ಗಳ ನಂತರಯುವಪ್ರತಿಭೆ ಶುಭಮನ್ ಗಿಲ್ ಕೂಡ ಪೂಜಾರ ರೀತಿಯಲ್ಲಿಯೇ ಸ್ಟಂಪ್ಡ್ ಆದರು. ಮಿರಾಜ್ ಮತ್ತೊಂದು ವಿಕೆಟ್ ಪಡೆದು ಸಂಭ್ರಮಿಸಿದರು.ವಿರಾಟ್ ಕೊಹ್ಲಿ ಕೂಡ ಒಂದು ರನ್ ಮಾತ್ರ ಗಳಿಸಿದರು. 22 ಎಸೆತಗಳನ್ನು ಎದುರಿಸಿದ ಅವರೂ ಮಿರಾಜ್‌ಗೆ ಮೂರನೇ ವಿಕೆಟ್ ಆದರು.

ಲಿಟನ್–ಹಸನ್ ಅರ್ಧಶತಕ: ಭಾರತ ತಂಡವು ಶುಕ್ರವಾರ 87 ರನ್‌ಗಳ ಮುನ್ನಡೆ ಸಾಧಿಸಿತ್ತು. ದಿನದಾಟದ ಮುಕ್ತಾಯಕ್ಕೆ ಬಾಂಗ್ಲಾ ತಂಡವು ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೇ 7 ರನ್ ಗಳಿಸಿತ್ತು.

ಮೂರನೇ ದಿನ ಬೆಳಿಗ್ಗೆ ಆರಂಭಿಕ ಬ್ಯಾಟರ್ ಶಾಂತೊ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ಅಶ್ವಿನ್ ಮೊದಲ ಆಘಾತ ನೀಡಿದರು. ಇನ್ನೊಂದೆಡೆ ಸಿರಾಜ್, ಅಕ್ಷರ್ ಮತ್ತು ಉನದ್ಕತ್ ಕೂಡ ಬಿಗಿದಾಳಿ ನಡೆಸಿದರು. 70 ರನ್‌ಗಳಿಗೆ 4 ವಿಕೆಟ್‌ಗಳು ಪತನವಾದವು. ಆದರೆ, ಈ ಹಂತದಲ್ಲಿ ಆರಂಭಿಕ ಬ್ಯಾಟರ್ ಝಾಕೀರ್ ಹಸನ್ (51; 135ಎ) ಮತ್ತು ಲಿಟನ್ ದಾದ್ (73; 98ಎ) ಇನಿಂಗ್ಸ್‌ಗೆ ಬಲ ತುಂಬಿದರು. ಅದರಿಂ ದಾಗಿ ತಂಡವು 70.2 ಓವರ್‌ಗಳಲ್ಲಿ 231 ರನ್‌ ಗಳಿಸಲು ಸಾಧ್ಯವಾಯಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಬಾಂಗ್ಲಾದೇಶ: 227. ಭಾರತ: 314. ಎರಡನೇ ಇನಿಂಗ್ಸ್: ಬಾಂಗ್ಲಾದೇಶ:70.2 ಓವರ್‌ಗಳಲ್ಲಿ 231 (ಝಾಕೀರ್ ಹಸನ್ 51, ಲಿಟನ್ ದಾಸ್ 73, ನೂರುಲ್ ಹಸನ್ 31, ತಸ್ಕಿನ್ ಅಹಮದ್ ಔಟಾಗದೆ 31, ಅಶ್ವಿನ್ 66ಕ್ಕೆ2, ಮೊಹಮ್ಮದ್ ಸಿರಾಜ್ 41ಕ್ಕೆ2, ಅಕ್ಷರ್ ಪಟೇಲ್ 68ಕ್ಕೆ3) ಭಾರತ: 23 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 45 (ಅಕ್ಷರ್ ಪಟೇಲ್ ಬ್ಯಾಟಿಂಗ್ 26, ಮೆಹದಿ ಹಸನ್ ಮಿರಾಜ್ 12ಕ್ಕೆ3)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT