ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ತವ್ಯ ಮುಗಿಸಿದ ನ್ಯಾಯಮೂರ್ತಿ ಚೆಲಮೇಶ್ವರ್

Last Updated 18 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ : ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಚೆಲಮೆಶ್ವರ್ ಅವರು ತಮ್ಮ ಕೊನೆಯ ಕರ್ತವ್ಯದ ದಿನದಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರಾ ಜತೆ ಪೀಠ ಹಂಚಿಕೊಂಡರು.

ಚೆಲಮೇಶ್ವರ್ ಅವರು ಜೂನ್ 22ರಂದು ನಿವೃತ್ತರಾಗಲಿದ್ದಾರೆ. ಆದರೆ ಸುಪ್ರೀಂ ಕೋರ್ಟ್‌ನ ಬೇಸಿಗೆ ರಜೆ ಆರಂಭವಾಗಲಿರುವ ಕಾರಣ ಶುಕ್ರವಾರ ಅವರ ಕರ್ತವ್ಯದ ಕೊನೆಯ ದಿನವಾಗಿತ್ತು. ಸುಪ್ರೀಂ ಕೋರ್ಟ್‌ನ ಯಾವುದೇ ನ್ಯಾಯಮೂರ್ತಿಗಳು ತಮ್ಮ ಕೊನೆಯ ಕರ್ತವ್ಯದ ದಿನದಂದು ಸಿಜೆಐ ಜತೆ ಪೀಠ ಹಂಚಿಕೊಳ್ಳುವುದು ಸಂಪ್ರದಾಯ. ನಿವೃತ್ತರಾಗಲಿರುವ ನ್ಯಾಯಮೂರ್ತಿಗಳಿಗೆ ಗೌರವ ನೀಡುವ ಸಲುವಾಗಿ ಹೀಗೆ ಮಾಡಲಾಗುತ್ತದೆ.

ಸುಪ್ರೀಂ ಕೋರ್ಟ್‌ನ ವಕೀಲರ ಸಂಘವು ನಡೆಸಬೇಕೆಂದಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಚೆಲಮೇಶ್ವರ್ ನಿರಾಕರಿಸಿದ್ದರು. ಅಲ್ಲದೆ, ಪ್ರಕರಣಗಳ ಹಂಚಿಕೆ ಬಗ್ಗೆ ಸಿಜೆಐ ಜತೆ ತೀವ್ರ ಭಿನ್ನಾಭಿಪ್ರಾಯ ಹೊಂದಿದ್ದ ಕಾರಣ ಅವರು ಶುಕ್ರವಾರ ಸಿಜೆಐ ಜತೆ ಪೀಠ ಹಂಚಿಕೊಳ್ಳುವ ಬಗ್ಗೆ ಕುತೂಹಲ ಕೆರಳಿತ್ತು.

ಆದರೆ ಇಬ್ಬರು ನ್ಯಾಯಮೂರ್ತಿಗಳೂ ಬೆಳಿಗ್ಗೆ 11ರ ಹೊತ್ತಿಗೆ ಕೋರ್ಟ್‌ ಸಂಖ್ಯೆ 1ಕ್ಕೆ ಬಂದರು. ಆ ವೇಳೆಗಾಗಲೇ ಹಲವು ನ್ಯಾಯಮೂರ್ತಿಗಳು ಮತ್ತು ಭಾರಿ ಸಂಖ್ಯೆಯಲ್ಲಿ ವಕೀಲರು ನ್ಯಾಯಾಲಯದ ಕೊಠಡಿಯಲ್ಲಿ ಕಿಕ್ಕಿರಿದು ತುಂಬಿದ್ದರು. ಬೆಳಿಗ್ಗೆ 11.15ರ ಹೊತ್ತಿಗೆ ಪೀಠವು ಕಲಾಪ ಆರಂಭಿಸಿತು. 11 ಪ್ರಕರಣಗಳ ವಿಚಾರಣೆ ಕಲಾಪದ ಪಟ್ಟಿಯಲ್ಲಿತ್ತು.

ಹಿರಿಯ ವಕೀಲ ರಾಜೀವ್ ದತ್ತ, ವಕೀಲ ಪ್ರಶಾಂತ ಭೂಷಣ್ ಮತ್ತಿತರರು ಚೆಲಮೇಶ್ವರ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಕಲಾಪ ಮುಗಿದ ನಂತರ ಚೆಲಮೇಶ್ವರ್ ಅವರು ಕೈಕಟ್ಟಿಕೊಂಡು ನ್ಯಾಯಾಲಯದ ಕೊಠಡಿಯಿಂದ
ಹೊರನಡೆದರು. ಆಗ ಅಲ್ಲಿದ್ದವರೆಲ್ಲರೂ ಎದ್ದು ನಿಂತು ಅವರಿಗೆ ಗೌರವ ಸಲ್ಲಿಸಿದರು.
*
ಗಮನ ಸೆಳೆದಿದ್ದ ಮಾಧ್ಯಮಗೋಷ್ಠಿ
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಕೆಲವು ಪ್ರಮುಖ ಪ್ರಕರಣಗಳನ್ನು ಕೆಲವೇ ಆಯ್ದ ನ್ಯಾಯಮೂರ್ತಿಗಳಿಗೆ ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜನವರಿ 12ರಂದು ನ್ಯಾಯಮೂರ್ತಿ ಜೆ.ಚೆಲಮೇಶ್ವರ್ ಮತ್ತು ಇನ್ನೂ ಮೂವರು ನ್ಯಾಯಮೂರ್ತಿಗಳು ಮಾಧ್ಯಮಗೋಷ್ಠಿ ನಡೆಸಿದ್ದರು. ಭಾರತದ ಸುಪ್ರೀಂ ಕೋರ್ಟ್‌ನ ಇತಿಹಾಸದಲ್ಲಿ ನ್ಯಾಯಮೂರ್ತಿಗಳು ಮಾಧ್ಯಮಗಳ ಎದುರು ಬಂದದ್ದು ಅದೇ ಮೊದಲು. ಹೀಗಾಗಿ ನ್ಯಾಯಮೂರ್ತಿಗಳ ಆ ನಡೆ ದೇಶದಾದ್ಯಂತ ತೀವ್ರ ಚರ್ಚೆಯನ್ನು ಹುಟ್ಟುಹಾಕಿತ್ತು.
*
ಪ್ರಜಾಪ್ರಭುತ್ವದ ಆಶಯಗಳನ್ನು ನೀವು (ಚೆಲಮೇಶ್ವರ್‌) ಎತ್ತಿ ಹಿಡಿದಿದ್ದೀರಿ. ದೇಶಕ್ಕೆ ನಿಮ್ಮ ಕೊಡುಗೆಯನ್ನು ಮುಂದಿನ ತಲೆಮಾರು ನೆನಪಿಸಿಕೊಳ್ಳುತ್ತದೆ.
ಪ್ರಶಾಂತ್ ಭೂಷಣ್, ವಕೀಲ
*
ನೀವು ಸುಪ್ರೀಂ ಕೋರ್ಟ್‌ನ ಆಶಯಗಳನ್ನು ಎತ್ತಿಹಿಡಿದಿದ್ದೀರಿ. ಅದಕ್ಕಾಗಿ ನಾವು ನಿಮಗೆ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇವೆ. 
ರಾಜೀವ್ ದತ್ತ, ಹಿರಿಯ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT