ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG 5th Test | ಶೀತಹವೆಯ ಅಂಕಣದಲ್ಲಿ ಕೊನೆಯ ಟೆಸ್ಟ್‌ ಕಾವು

ಅಶ್ವಿನ್, ಬೇರ್‌ಸ್ಟೊಗೆ ನೂರನೇ ಟೆಸ್ಟ್‌* ವೇಗಿಗಳಿಗೆ ನೆರವು ನೀಡುವ ಪಿಚ್‌ನಲ್ಲಿ ಬೂಮ್ರಾ ಮರುಪ್ರವೇಶ
Published 7 ಮಾರ್ಚ್ 2024, 0:30 IST
Last Updated 7 ಮಾರ್ಚ್ 2024, 0:30 IST
ಅಕ್ಷರ ಗಾತ್ರ

ಧರ್ಮಶಾಲ: ಭಾರತದ ಪ್ರಮುಖ ಆಫ್‌ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್ ಅವರಿಗೆ ತಮ್ಮ ನೂರನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವ ಗುರಿ. ಫಾರ್ಮ್‌ ಕಂಡುಕೊಳ್ಳಲು ತಡಕಾಡಿರುವ, ಇಂಗ್ಲೆಂಡ್‌ನ ಅನುಭವಿ ಬ್ಯಾಟ್ಸ್‌ಮನ್‌ ಜಾನಿ ಬೇಸ್ಟೊ ಅವರಿಗೆ ತಮ್ಮ ಬದುಕಿನ ನೂರನೇ ಟೆಸ್ಟ್‌ನಲ್ಲಾದರೂ ಲಯಕ್ಕೆ ಮರಳುವ ತುಡಿತ.

ಭಾರತ ಹಾಗೂ ಇಂಗ್ಲೆಂಡ್‌ ನಡುವೆ ಗುರುವಾರ ಇಲ್ಲಿ ಆರಂಭವಾಗಲಿರುವ ಟೆಸ್ಟ್‌ ಸರಣಿಯ ಐದನೇ ಹಾಗೂ ಕೊನೆಯ ಪಂದ್ಯದಲ್ಲಿ ಕುತೂಹಲಿಗಳ ಕಣ್ಣು ಈ ಇಬ್ಬರೂ ಆಟಗಾರರ ಮೇಲೆ ನೆಟ್ಟಿದೆ. ಸರಣಿಯಲ್ಲಿ ಭಾರತ ಈಗಾಗಲೇ 3–1 ಮುನ್ನಡೆ ಸಾಧಿಸಿದ್ದು, ಇನ್ನೂ ಒಂದು ಗೆಲುವಿನ ನಿರೀಕ್ಷೆಯಲ್ಲಿದೆ. ಈ ಪಂದ್ಯದಲ್ಲಿ ಗೆದ್ದರೆ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ದೃಷ್ಟಿಯಿಂದ ಆತಿಥೇಯ ತಂಡ ಪಟ್ಟಿಯಲ್ಲಿ ಇನ್ನೂ ಮೇಲೇರಬಹುದು.

ಧರ್ಮಶಾಲಾದ ಪಿಚ್‌ ಹಾಗೂ ಶೀತ ಹವೆ ಇಂಗ್ಲೆಂಡ್‌ ಆಟಗಾರರಿಗೆ ತಮ್ಮ ತವರಿನಲ್ಲಿ ಇರುವಂತಹುದೇ ವಾತಾವರಣ ಕಲ್ಪಿಸಿಕೊಟ್ಟಿದೆ. ಇಲ್ಲಿ ಪಂದ್ಯದ ಮೊದಲ ಎರಡು ದಿನ ಗರಿಷ್ಠ ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್ ಇರಲಿದೆ. ವಾರಾಂತ್ಯದ ಹೊತ್ತಿಗೆ ಉಷ್ಣಾಂಶ ತುಸು ಹೆಚ್ಚಾಗಬಹುದು.

ಸಮತಟ್ಟಾಗಿ ಕಾಣುವ ಪಿಚ್‌ನಲ್ಲಿ ತೇವಾಂಶವಿದೆ. ಪ್ರತಿ ದಿನದಾಟದ ಮೊದಲ ಅವಧಿಯಲ್ಲಿ ವೇಗದ ಬೌಲರ್‌ಗಳಿಗೆ ಅದರಿಂದ ಅನುಕೂಲವಾಗುವ ಸಾಧ್ಯತೆ ಇದೆ.

ಸಾಂಪ್ರದಾಯಿಕವಾಗಿ ವೇಗದ ಬೌಲರ್‌ಗಳಿಗೆ ಈ ಪಿಚ್‌ ನೆರವು ನೀಡುತ್ತದೆಯಾದರೂ, ಸ್ಪಿನ್ನರ್‌ಗಳಿಗೆ ಫಲ ದೊರೆತ ಉದಾಹರಣೆಯೂ  ಇದೆ. 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಭಾರತದ ಗೆಲುವಿನಲ್ಲಿ ಸ್ಪಿನ್ನರ್‌ಗಳ ಪಾತ್ರ ಮಹತ್ವದ್ದಾಗಿತ್ತು. ಈ ಕ್ರೀಡಾಂಗಣದಲ್ಲಿ ನಡೆದಿರುವ ಏಕೈಕ ಟೆಸ್ಟ್‌ ಪಂದ್ಯ ಅದು.

ಇತ್ತೀಚೆಗೆ ಇಲ್ಲಿ ನಾಲ್ಕು ರಣಜಿ ಟ್ರೋಫಿ ಪಂದ್ಯಗಳು ನಡೆದಿವೆ. ಬಹುತೇಕ ಇನಿಂಗ್ಸ್‌ಗಳಲ್ಲಿ ತಂಡಗಳು 300ಕ್ಕೂ ಹೆಚ್ಚು ರನ್‌ ದಾಖಲಿಸಿದ್ದವು. ಬರೋಡಾ ತಂಡವು 482 ರನ್‌ಗಳನ್ನು ಒಂದೇ ಇನಿಂಗ್ಸ್‌ನಲ್ಲಿ ಕಲೆಹಾಕಿದ್ದು ಈ ಬಾರಿಯ ರಣಜಿ ಋತುವಿನಲ್ಲಿ ಇಲ್ಲಿ ದಾಖಲಾದ ಅತಿ ಗರಿಷ್ಠ ಸ್ಕೋರ್.

ಅಶ್ವಿನ್ ಹಾಗೂ ಜಾನಿ ಬೇಸ್ಟೊ ಇಬ್ಬರಿಗೂ ಇದು ನೂರನೇ ಟೆಸ್ಟ್‌. ಪಿಚ್‌ ಕುರಿತು ಇಬ್ಬರ ಅಭಿಪ್ರಾಯಗಳೂ ಭಿನ್ನವಾಗಿವೆ. ಬೇಸ್ಟೊ ಪ್ರಕಾರ ಇದು ಒಳ್ಳೆಯ ಪಿಚ್. ಅಶ್ವಿನ್‌ ಗಮನಿಸಿರುವಂತೆ, ಶೀತ ವಾತಾವರಣದ ಕಾರಣದಿಂದಾಗಿ ಇದು ಮರ್ಮ ಅರಿಯಲಾಗದ ಪಿಚ್.

ಇಬ್ಬರು ವೇಗದ ಬೌಲರ್‌ಗಳು ಹಾಗೂ ಮೂವರು ಸ್ಪಿನ್ನರ್‌ಗಳನ್ನು ಆಡಿಸುವ ತಂತ್ರವನ್ನೇ ಭಾರತ ಇಲ್ಲಿಯೂ ಮುಂದುವರಿಸುವ ಸಾಧ್ಯತೆ ಇದೆ. ಸ್ಪಿನ್ ವಿಭಾಗದಲ್ಲಿ ಅಶ್ವಿನ್‌, ರವೀಂದ್ರ ಜಡೇಜಾ ಇಬ್ಬರ ಅನುಭವ ಒಂದು ಕಡೆ. 2017ರಲ್ಲಿ ಪದಾರ್ಪಣೆ ಮಾಡಿದಾಗಿನಿಂದ ಇಲ್ಲಿಯವರೆಗೆ ಕೇವಲ 11 ಟೆಸ್ಟ್‌ಗಳಲ್ಲಿ ಆಡಿರುವ ಕುಲದೀಪ್ ಯಾದವ್ ಇನ್ನೊಂದು ಕಡೆ. ಅವರಿಗೆ ಇದು ಸಾಮರ್ಥ್ಯ ರುಜುವಾತುಪಡಿಸಲು ಒಳ್ಳೆಯ ಅವಕಾಶ.

ಕೆ.ಎಲ್. ರಾಹುಲ್ ಅವರು ದೈಹಿಕವಾಗಿ ಇನ್ನೂ ಫಿಟ್‌ ಆಗಿಲ್ಲ. ಹೀಗಾಗಿ ರಜತ್ ಪಾಟಿದಾರ್ ಅವರಿಗೆ ಮಗದೊಂದು ಅವಕಾಶ ಸಿಗಬಹುದು. ಈ ಸರಣಿಯಲ್ಲಿ ಇದುವರೆಗೆ ಆರು ಇನಿಂಗ್ಸ್‌ಗಳಲ್ಲಿ ಅವರು ಕೇವಲ 63 ರನ್‌ ಗಳಿಸಿದ್ದಾರೆ. ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವರಿಗಿದು ಕೊನೆಯ ಅವಕಾಶ ಎನ್ನಬಹುದು.

ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ, ಕರ್ನಾಟಕದವರೇ ಆದ ದೇವದತ್ತ ಪಡಿಕ್ಕಲ್ ಅವರೂ ಆಡುವ ಹನ್ನೊಂದರ ತಂಡದಲ್ಲಿ ಒಬ್ಬರಾಗುವ ಸಾಧ್ಯತೆ ಇದೆ. ಒಂದು ವೇಳೆ ಆಯ್ಕೆಯಾದರೆ ಮಧ್ಯಮ ಕ್ರಮಾಂಕದಲ್ಲಿ ಆಡಿಸಬಹುದು.

ಎರಡು ಟೆಸ್ಟ್‌ ಪಂದ್ಯಗಳ ಚಿಕ್ಕ ಅನುಭವ ಪಡೆದುಕೊಂಡಿರುವ ಸರ್ಫರಾಜ್ ಖಾನ್, ರಾಜ್‌ಕೋಟ್‌ನಲ್ಲಿ ಚೆನ್ನಾಗಿ ಆಡಿದ್ದರು. ರಾಂಚಿಯಲ್ಲಿ ಮಂಕಾಗಿದ್ದರು. ಅವರಿಗೂ ತಂಡದಲ್ಲಿ ಸ್ಥಾನ ಗಟ್ಟಿಗೊಳಿಸಲು ಇದು ಅವಕಾಶವಾಗಿದೆ.

ಸುನಿಲ್ ಗಾವಸ್ಕರ್‌ ಅವರಷ್ಟೆ ಇದುವರೆಗೆ ಟೆಸ್ಟ್‌ ಸರಣಿಯೊಂದರಲ್ಲಿ 700ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ ಸಾಧನೆ ಮಾಡಿದ್ದರು. ಯಶಸ್ವಿ ಜೈಸ್ವಾಲ್ ಈ ಸರಣಿಯಲ್ಲಿ ಆ ಸಾಲಿಗೆ ಸೇರಿ ಗಮನ ಸೆಳೆದಿದ್ದಾರೆ.

ತಂಡಕ್ಕೆ ವುಡ್‌:

ಇಂಗ್ಲೆಂಡ್‌ನ ಹೊಸ ಸ್ಪಿನ್ನರ್‌ ಶೋಯಬ್ ಬಶೀರ್ ಕಳೆದ ಟೆಸ್ಟ್‌ನಲ್ಲಿ ಭಾರತವನ್ನು ಕಾಡಿದ್ದರು. ಅವರು ಬೆರಳಿನ ಊತಕ್ಕೆ ಚಿಕಿತ್ಸೆ ಪಡೆದ ನಂತರ ಕಣಕ್ಕೆ ಮರಳಲಿದ್ದು, ಹೇಗೆ ಆಡುವರು ಎನ್ನುವ ಕುತೂಹಲವಿದೆ. ಕಳೆದ ಪಂದ್ಯದಲ್ಲಿ ಆಡಿದ್ದ ರಾಬಿನ್‌ಸನ್‌ ಬದಲಿಗೆ ಮಾರ್ಕ್‌ ವುಡ್‌ ಆಡಲಿದ್ದಾರೆ.

ಜಸ್‌ಪ್ರೀತ್‌ ಬೂಮ್ರಾ ಕಣಕ್ಕೆ ಇಳಿಯಲಿದ್ದು, ಭಾರತದ ವೇಗದ ಬೌಲಿಂಗ್‌ಗೆ ಹಳೆಯ ಕಸುವು ದೊರೆಯಲಿದೆ.

ಕಡಿಮೆ ಅನುಭವಿಗಳು, ಹೆಚ್ಚು ಉತ್ಸಾಹಿ ಯುವಕರನ್ನು ಒಳಗೊಂಡ ಭಾರತ ತಂಡ ಕೊನೆಯ ಟೆಸ್ಟ್‌ ಅನ್ನು ಗೆಲ್ಲುವ ಉತ್ಸಾಹದಲ್ಲಿದೆ. ಇನ್ನೊಂದೆಡೆ, ‘ಬಾಝ್‌ಬಾಲ್’ ತಂತ್ರ ಅನುಸರಿಸಲು ಶುರುಮಾಡಿದಾಗಿನಿಂದ ಇದೇ ಮೊದಲ ಬಾರಿಗೆ ಸರಣಿ ಸೋತಿರುವ ಇಂಗ್ಲೆಂಡ್‌ ತಂಡವು ಸೋಲಿನ ಅಂತರ ಕಡಿಮೆ ಮಾಡಿಕೊಳ್ಳುವ ಇರಾದೆ ಇಟ್ಟುಕೊಂಡು ಕಣಕ್ಕೆ ಇಳಿಯಲಿದೆ.

ತಂಡಗಳು:

ಭಾರತ: ರೋಹಿತ್ ಶರ್ಮ (ನಾಯಕ), ಜಸ್‌ಪ್ರೀತ್‌ ಬೂಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೇಲ್ (ವಿಕೆಟ್‌ ಕೀಪರ್), ಕೆ.ಎಸ್. ಭರತ್ (ವಿಕೆಟ್‌ ಕೀಪರ್), ದೇವದತ್ತ ಪಡಿಕ್ಕಲ್, ಆರ್. ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಆಕಾಶ್ ದೀಪ್.

ಇಂಗ್ಲೆಂಡ್‌: ಬೆನ್‌ ಸ್ಟೋಕ್ಸ್‌ (ನಾಯಕ), ಜಾಕ್ ಕ್ರಾಲಿ, ಬೆನ್‌ ಡಕೆಟ್, ಓಲಿ ಪೋಪ್, ಜೋ ರೂಟ್, ಜಾನಿ ಬೇಸ್ಟೊ, ಬೆನ್‌ ಫೋಕ್ಸ್‌, ಟಾಮ್‌ ಹಾರ್ಟ್ಲಿ, ಮಾರ್ಕ್‌ ವುಡ್‌, ಜೇಮ್ಸ್‌ ಆ್ಯಂಡರ್ಸನ್‌, ಶೋಯಬ್ ಬಶೀರ್

ಪಂದ್ಯ ಆರಂಭ: ಬೆಳಿಗ್ಗೆ 9.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT