ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND VS AUS Test| ಆಸ್ಟ್ರೇಲಿಯಾ ಬಳಗದಲ್ಲಿ ಚಿಗುರಿದ ಗೆಲುವಿನ ಆಸೆ

ಟೆಸ್ಟ್: ಪೂಜಾರ ಅರ್ಧಶತಕ; ನೇಥನ್ ಲಯನ್‌ಗೆ ಎಂಟು ವಿಕೆಟ್
Last Updated 2 ಮಾರ್ಚ್ 2023, 16:33 IST
ಅಕ್ಷರ ಗಾತ್ರ

ಇಂದೋರ್: ಆತಿಥೇಯ ಭಾರತ ತಂಡವು ಆಸ್ಟ್ರೇಲಿಯಾ ಬಳಗಕ್ಕೆ ತೋಡಿದ್ದ ಸ್ಪಿನ್ ಖೆಡ್ಡಾದಲ್ಲಿ ತಾನೇ ಬಿದ್ದಿತು. ಅನುಭವಿ ಸ್ಪಿನ್ನರ್ ನೇಥನ್ ಲಯನ್ ಎಂಟು ವಿಕೆಟ್ ಗಳಿಸಿ ರೋಹಿತ್ ಬಳಗಕ್ಕೆ ಸೋಲಿನ ಆತಂಕ ಮೂಡಿಸಿದರು.

ಹೋಳ್ಕರ್ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್‌ ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಗೆಲುವಿಗೆ 75 ರನ್‌ಗಳ ಸಾಧಾರಣ ಗುರಿ ನೀಡಲಷ್ಟೇ ರೋಹಿತ್ ಬಳಗಕ್ಕೆ ಸಾಧ್ಯವಾಗಿದೆ. ಇದರಿಂದಾಗಿ ಈ ಸರಣಿಯಲ್ಲಿ ಮೊದಲ ಬಾರಿ ಜಯದ ಕೇಕೆ ಹಾಕುವ ಕನಸು ಸ್ಮಿತ್ ಬಳಗದಲ್ಲಿ ಮೂಡಿದೆ. ನೇಥನ್‌ಗೆ (64ಕ್ಕೆ8) ವೃತ್ತಿಜೀವನದ ಎರಡನೇ ವೈಯಕ್ತಿಕ ಶ್ರೇಷ್ಠ ಸಾಧನೆ ಇದಾಗಿದೆ. ಈ ಮೊದಲು ಅವರು ಭಾರತದ ಎದುರೇ 50ಕ್ಕೆ8 ವಿಕೆಟ್ ಪಡೆದಿದ್ದರು.

ಆದರೆ, ಗುರಿ ಸಣ್ಣದಿದ್ದರೂ ಆಸ್ಟ್ರೇಲಿಯಾ ಬ್ಯಾಟರ್‌ಗಳು ಎಚ್ಚರಿಕೆಯಿಂದ ಆಡುವುದು ಅನಿವಾರ್ಯವಾಗಿದೆ. ಏಕೆಂದರೆ ಚೆಂಡು ಎತ್ತರಕ್ಕೆ ಪುಟಿಯದೇ ತಿರುವು ಪಡೆದು ಬರುತ್ತಿರುವ ಪಿಚ್‌ನಲ್ಲಿ ಸ್ವಲ್ಪ ಏಕಾಗ್ರತೆ ಕಳೆದುಕೊಂಡರೂ ವಿಕೆಟ್‌ ಪತನ ಖಚಿತ.

ಗುರುವಾರದ ಆಟವೇ ಇದಕ್ಕೆ ಸಾಕ್ಷಿ. ಬುಧವಾರ ದಿನದಾಟದ ಕೊನೆಗೆ ಆಸ್ಟ್ರೇಲಿಯಾ 4 ವಿಕೆಟ್‌ಗಳಿಗೆ 156 ರನ್‌ ಗಳಿಸಿತ್ತು. ಆದರೆ, ಎರಡನೇ ದಿನದಾಟದಲ್ಲಿ 41 ರನ್‌ಗಳ ಅಂತರದಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಅವಧಿಯ ಮೊದಲ ಒಂದು ಗಂಟೆಯಲ್ಲಿ ಬ್ಯಾಟರ್ ಹ್ಯಾಂಡ್ಸ್‌ಕಂಬ್ ಹಾಗೂ ಕ್ಯಾಮರಾನ್ ಗ್ರೀನ್ ಅವರು ಒಂದಿಷ್ಟು ಪ್ರತಿರೋಧ ತೋರಿದರು. ಜಡೇಜ ಹಾಗೂ ಅಕ್ಷರ್ ಅವರು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರಲಿಲ್ಲ. ಆದರೆ ಅಶ್ವಿನ್ ಮತ್ತು ಇನ್ನೊಂದು ಬದಿಯಿಂದ ವೇಗಿ ಉಮೇಶ್ ಯಾದವ್ ತಲಾ ಮೂರು ವಿಕೆಟ್ ಗಳಿಸಿ ಆಸ್ಟ್ರೇಲಿಯಾ ತಂಡದ ಇನಿಂಗ್ಸ್‌ಗೆ ಅಂತ್ಯ ಹಾಡಿದರು.

ಪೂಜಾರಾ ಅರ್ಧಶತಕ: ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ತಂಡವು ಆಸ್ಟ್ರೇಲಿಯಾ ಗಳಿಸಿದ್ದ 88 ರನ್‌ಗಳ ಮುನ್ನಡೆಯ ಮೊತ್ತವನ್ನು ಚುಕ್ತಾ ಮಾಡುವಷ್ಟರಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ರೋಹಿತ್, ಗಿಲ್, ವಿರಾಟ್ ಹಾಗೂ ಜಡೇಜ ಪೆವಿಲಿಯನ್‌ಗೆ ಮರಳಿದರು. ಆದರೆ ‘ಗೋಡೆ’ಯಂತೆ ನಿಂತಿದ್ದ ಚೇತೇಶ್ವರ್ ಪೂಜಾರ ಎದುರಾಳಿ ಬಳಗಕ್ಕೆ ಆತಂಕ ಮೂಡಿಸಿದರು.

ಭಾರತದ ಪೂಜಾರ ಬಿಟ್ಟರೆ ಉಳಿದೆಲ್ಲ ಬ್ಯಾಟರ್‌ಗಳೂ ಮುಗ್ಗರಿಸಿದರು. ಇದರಿಂದಾಗಿ ಆತಿಥೇಯರಿಗೆ ಎರಡನೇ ಇನಿಂಗ್ಸ್‌ನಲ್ಲಿ 60.3 ಓವರ್‌ಗಳಲ್ಲಿ 163 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

ಫ್ಲಿಕ್ ಮತ್ತು ಸ್ವೀಪ್‌ಗಳ ಮೂಲಕ ಐದು ಬೌಂಡರಿ ಗಳಿಸಿದರು. ಒಂದು ಸಿಕ್ಸರ್ ಕೂಡ ಎತ್ತಿದರು. 101ನೇ ಟೆಸ್ಟ್ ಆಡುತ್ತಿರುವ ಪೂಜಾರ ಅವರ 16ನೇ ಸಿಕ್ಸರ್ ಅದು. ಐದನೇ ವಿಕೆಟ್ ಜೊತೆಯಾಟದಲ್ಲಿ ಶ್ರೇಯಸ್‌ ಅವರೊಂದಿಗೆ 35 ರನ್‌ಗಳಿಸಿ ಇನಿಂಗ್ಸ್‌ಗೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಅವರ ಆಟಕ್ಕೂ ಲಯನ್ ತಡೆಯೊಡ್ಡಿದರು. ಸ್ಟೀವ್ ಸ್ಮಿತ್ ಪಡೆದ ಕ್ಯಾಚ್‌ಗೆ ಪೂಜಾರ ಆಟಕ್ಕೆ ತೆರೆಬಿದ್ದಿತು. ಆಸ್ಟ್ರೇಲಿಯಾ ಆಟಗಾರರ ಸಂಭ್ರಮ ಮುಗಿಲುಮುಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT