ಸೋಮವಾರ, ನವೆಂಬರ್ 18, 2019
25 °C
ಭಾರತ ‘ಎ’– ದಕ್ಷಿಣ ಆಫ್ರಿಕಾ ‘ಎ’ ನಡುವಿನ ‘ಟೆಸ್ಟ್‌’ ಇಂದಿನಿಂದ: ಮರ್ಕರಮ್ ಪಡೆಗೆ ಪುಟಿದೇಳುವ ವಿಶ್ವಾಸ

ಸರಣಿ ಗೆಲುವಿನ ತವಕದಲ್ಲಿ ವೃದ್ಧಿಮಾನ್‌ ಬಳಗ

Published:
Updated:
Prajavani

ಮೈಸೂರು: ದಸರಾ ಉತ್ಸವದ ಸಿದ್ಧತೆಯಲ್ಲಿ ತೊಡಗಿರುವ ಮೈಸೂರಿ ನಲ್ಲಿ ಮಂಗಳವಾರದಿಂದ ಕ್ರಿಕೆಟ್‌ ಕಲರವ ಕೇಳಿಬರಲಿದೆ.

ಭಾರತ ‘ಎ’ ಮತ್ತು ದಕ್ಷಿಣ ಆಫ್ರಿಕಾ ‘ಎ’ ತಂಡಗಳ ನಡುವಿನ ‘ಟೆಸ್ಟ್’ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯ ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಮಂಗಳವಾರದಿಂದ ನಡೆಯಲಿದೆ.

ತಿರುವನಂತಪುರದಲ್ಲಿ ನಡೆದಿದ್ದ ನಾಲ್ಕು ದಿನಗಳ ಮೊದಲ ಪಂದ್ಯವನ್ನು ಏಳು ವಿಕೆಟ್‌ಗಳಿಂದ ಜಯಿಸಿದ್ದ ಭಾರತ ಮುನ್ನಡೆ ಸಾಧಿಸಿದೆ.

ಗ್ಲೇಡ್ಸ್‌ನಲ್ಲೂ ಗೆದ್ದು ಸರಣಿ ತನ್ನದಾಗಿಸಿಕೊಳ್ಳುವ ಉದ್ದೇಶ ಹೊಂದಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡವನ್ನು ಶುಭಮನ್‌ ಗಿಲ್‌ ಮುನ್ನಡೆಸಿದ್ದರೆ, ಈ ಪಂದ್ಯದಲ್ಲಿ ನಾಯಕತ್ವ ಜವಾಬ್ದಾರಿ ವೃದ್ಧಿಮಾನ್‌ ಸಹಾ ಅವರಿಗೆ ಲಭಿಸಿದೆ.

ಕರ್ನಾಟಕದ ಕರುಣ್‌ ನಾಯರ್‌ ಮತ್ತು ಕೆ.ಗೌತಮ್‌ ತಂಡದಲ್ಲಿದ್ದು, ಮಿಂಚುವ ವಿಶ್ವಾಸದಲ್ಲಿ
ದ್ದಾರೆ. ಗ್ಲೇಡ್ಸ್‌ನಲ್ಲಿ ಈ ಹಿಂದೆ ಹಲವು ಪಂದ್ಯಗಳನ್ನು ಆಡಿರುವ ಅನುಭವ ಇವರ ನೆರವಿಗೆ ಬರಬಹುದು. ಗೌತಮ್‌ ಇತ್ತೀಚೆಗೆ ನಡೆದಿದ್ದ ಕೆಪಿಎಲ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಗಮನ ಸೆಳೆದಿದ್ದರು. ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್‌ ಗಳಿಸಿದ್ದರು.

ಗೌತಮ್‌ ಅಲ್ಲದೆ ಉಮೇಶ್ ಯಾದವ್, ಮೊಹಮ್ಮದ್‌ ಸಿರಾಜ್, ಕುಲದೀಪ್‌ ಯಾದವ್‌ ಮತ್ತು ಶಹಬಾಜ್‌ ನದೀಮ್‌ ಅವರನ್ನೊಳಗೊಂಡ ಭಾರತದ ಬೌಲಿಂಗ್‌ ವಿಭಾಗ ಬಲಿಷ್ಠವಾಗಿದ್ದು, ದಕ್ಷಿಣ ಆಫ್ರಿಕಾ ತಂಡಕ್ಕೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆಯಿದೆ.

‘ತಿರುವನಂತಪುರ ಮತ್ತು ಇಲ್ಲಿನ ಪರಿಸ್ಥಿತಿಗೆ ಸಾಕಷ್ಟು ವ್ಯತ್ಯಾಸವಿದೆ. ಎದುರಾಳಿಗಳು ತಿರುಗೇಟು ನೀಡುವ ಸಾಧ್ಯತೆಯಿದೆ. ನಮ್ಮ ಎಲ್ಲ ಆಟಗಾರರು ಉತ್ತಮ ಲಯದಲ್ಲಿದ್ದು, ಸಂಘಟಿತ ಪ್ರದರ್ಶನ ನೀಡುವೆವು’ ಎಂದು ಸಹಾ ಸೋಮವಾರ ಅಭ್ಯಾಸದ ಬಳಿಕ ಪ್ರತಿಕ್ರಿಯಿಸಿದರು.

ಪುಟಿದೇಳುವ ವಿಶ್ವಾಸ: ಏಡನ್‌ ಮರ್ಕರಮ್‌ ನಾಯಕತ್ವದ ಪ್ರವಾಸಿ ತಂಡ ಹಿಂದಿನ ಪಂದ್ಯದಲ್ಲಿ ಮಾಡಿದ್ದ ತಪ್ಪುಗಳನ್ನು ತಿದ್ದಿಕೊಂಡು ಪುಟಿದೇಳುವ ವಿಶ್ವಾಸದಲ್ಲಿದೆ.

ಪ್ರವಾಸಿ ತಂಡ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತ್ತು. ಎರಡು ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 164 ಮತ್ತು 186 ರನ್‌ಗಳಿಗೆ ಆಲೌಟಾಗಿತ್ತು.

ರಾಷ್ಟ್ರೀಯ ತಂಡದಲ್ಲಿ ಆಡಿದ ಅನುಭವ ಹೊಂದಿರುವ ಮರ್ಕರಮ್‌ ಅಲ್ಲದೆ ಜುಬೇರ್ ಹಮ್ಜಾ, ಖಾಯಾ ಜೊಂಡೊ, ವೇಗದ ಬೌಲರ್‌ ಲುಂಗಿ ಗಿಡಿ ಅವರನ್ನೊಳಗೊಂಡ ದಕ್ಷಿಣ ಆಫ್ರಿಕಾ ‘ಎ’ ತಂಡವು ಸಹಾ ಬಳಗಕ್ಕೆ ಪ್ರಬಲ ಪೈಪೋಟಿ ಒಡ್ಡುವ ನಿರೀಕ್ಷೆಯಲ್ಲಿದೆ.

ಪಂದ್ಯ ಆರಂಭ: ಬೆಳಿಗ್ಗೆ 9.30

***

ಮೊದಲ ಪಂದ್ಯದಲ್ಲಿ ದೊರೆತ ಗೆಲುವು ಆಟಗಾರರ ಆತ್ಮವಿಶ್ವಾಸ ಹೆಚ್ಚಿಸಿದೆ. ಇಲ್ಲೂ ಉತ್ತಮವಾಗಿ ಆಡಿ ಸರಣಿ ಗೆಲ್ಲುತ್ತೇವೆ

- ವೃದ್ಧಿಮಾನ್‌ ಸಹಾ, ಭಾರತ ‘ಎ’ ತಂಡದ ನಾಯಕ

***

ತಂಡಗಳು

ಭಾರತ ‘ಎ’: ವೃದ್ಧಿಮಾನ್‌ ಸಹಾ (ನಾಯಕ), ಪ್ರಿಯಾಂಕ್‌ ಪಾಂಚಾಲ್, ಅಭಿಮನ್ಯು ಈಶ್ವರನ್, ಶುಭಮನ್‌ ಗಿಲ್, ಜಲಜ್‌ ಸಕ್ಸೇನಾ, ಅನ್‌ಮೋಲ್‌ಪ್ರೀತ್‌ ಸಿಂಗ್, ಕರುಣ್‌ ನಾಯರ್, ಕೆ.ಗೌತಮ್, ಕುಲದೀಪ್‌ ಯಾದವ್, ಶಹಬಾಜ್‌ ನದೀಮ್, ವಿಜಯ್‌ ಶಂಕರ್, ಶಿವಂ ದುಬೆ, ಉಮೇಶ್ ಯಾದವ್, ಮೊಹಮ್ಮದ್‌ ಸಿರಾಜ್, ಆವೇಶ್‌ ಖಾನ್

ದಕ್ಷಿಣ ಆಫ್ರಿಕಾ ‘ಎ’: ಏಡನ್‌ ಮರ್ಕರಮ್‌ (ನಾಯಕ), ಜುಬೇರ್‌ ಹಮ್ಜಾ, ಸೆನುರನ್‌ ಮುತ್ತುಸಾಮಿ, ಖಾಯಾ ಜೊಂಡೊ, ಡೇನ್‌ ಪಿಯೆಟ್, ಥೆನಿಸ್‌ ಡಿ ಬ್ರುಯ್ನ್, ಮಾರ್ಕೊ ಜೆನ್ಸೆನ್, ಹೆನ್ರಿಕ್‌ ಕ್ಲಾಸೆನ್, ಜಾರ್ಜ್‌ ಲಿಂಡೆ, ಲೂಥೊ ಸಿಪಮ್ಲಾ, ಎಡ್ವರ್ಡ್ ಮೂರ್, ಕೀಗನ್‌ ಪೀಟರ್ಸನ್, ವಿಯಾನ್‌ ಮಲ್ಡೆರ್, ಲುಂಗಿ ಗಿಡಿ, ವೆರ್ನಾನ್‌ ಫಿಲಾಂಡರ್.

ಪ್ರತಿಕ್ರಿಯಿಸಿ (+)