ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SL 2nd T20: ಅಕ್ಷರ್, ಸೂರ್ಯಕುಮಾರ್ ಹೋರಾಟ ವ್ಯರ್ಥ, ಲಂಕಾಗೆ 16 ರನ್ ಜಯ

Last Updated 5 ಜನವರಿ 2023, 23:11 IST
ಅಕ್ಷರ ಗಾತ್ರ

ಪುಣೆ: ದಸುನ್ ಶನಕಾ ಮತ್ತು ಕುಶಾಲ ಮೆಂಡಿಸ್ ಅವರ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ ಶ್ರೀಲಂಕಾ ತಂಡವು ಗುರುವಾರ ಇಲ್ಲಿ ನಡೆದ ಎರಡನೇ ಟಿ20 ‍ಪಂದ್ಯದಲ್ಲಿ ಭಾರತವನ್ನು 16 ರನ್‌ಗಳಿಂದ ಮಣಿಸಿತು.

ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ ತಂಡ, ದಸುನ್ (ಅಜೇಯ 56) ಅವರ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 206 ರನ್‌ ಗಳಿಸಿತು. ಭಾರತ ತಂಡ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 190 ರನ್‌ ಕಲೆಹಾಕಿತು. ಮೂರು ಪಂದ್ಯಗಳ ಸರಣಿ 1–1 ರಲ್ಲಿ ಸಮಬಲದಲ್ಲಿದ್ದು, ರಾಜ್‌ಕೋಟ್‌ನಲ್ಲಿ ಶನಿವಾರ ನಡೆಯಲಿರುವ ಅಂತಿಮ ಪಂದ್ಯ ನಿರ್ಣಾಯಕ ಎನಿಸಿದೆ.

ಸವಾಲಿನ ಗುರಿ ಬೆನ್ನಟ್ಟಿದ ಆತಿಥೇಯ ತಂಡ ಆರಂಭಿಕ ಆಘಾತಕ್ಕೆ ಒಳಗಾಯಿತು. ಇಶಾನ್‌ ಕಿಶನ್‌ (2), ಶುಭಮನ್‌ ಗಿಲ್‌ (5) ಮತ್ತು ರಾಹುಲ್‌ ತ್ರಿಪಾಠಿ (5) ಬೇಗನೇ ಪೆವಿಲಿಯನ್‌ ಸೇರಿದರು. ನಾಯಕ ಹಾರ್ದಿಕ್‌ ಪಾಂಡ್ಯ ಮತ್ತು ದೀಪಕ್‌ ಹೂಡಾ ಕೂಡಾ ವಿಫಲರಾದರು. ಸ್ಕೋರ್‌ 57 ಆಗುವಷ್ಟರಲ್ಲಿ ಐದು ವಿಕೆಟ್‌ಗಳು ಬಿದ್ದವು.

ಸೂರ್ಯಕುಮಾರ್‌ ಯಾದವ್‌ (51 ರನ್, 36 ಎ., 4X3, 6X3) ಮತ್ತು ಅಕ್ಷರ್‌ ಪಟೇಲ್ (65ರನ್, 31 ಎ., 4X3, 6X6) ಅವರು ಮರುಹೋರಾಟ ನಡೆಸಿ ಪಂದ್ಯಕ್ಕೆ ರೋಚಕತೆ ತುಂಬಿದರು. ಆರನೇ ವಿಕೆಟ್‌ಗೆ 91 ರನ್‌ ಸೇರಿಸಿದರು. ಸೂರ್ಯಕುಮಾರ್‌ ಔಟಾದ ಬಳಿಕ ಬಂದ ಶಿವಂ ಮಾವಿ (26 ರನ್‌, 15 ಎ.) ಅಕ್ಷರ್‌ಗೆ ತಕ್ಕ ಸಾಥ್‌ ನೀಡಿದರೂ ಭಾರತಕ್ಕೆ ಗೆಲುವು ದಕ್ಕಲಿಲ್ಲ.

ಉತ್ತಮ ಆರಂಭ: ಇದಕ್ಕೂ ಮುನ್ನ ಆರಂಭಿಕ ಜೋಡಿ ಫಥುಮ್ ನಿಸಾಂಕ (33; 35ಎ) ಮತ್ತು ಕುಶಾಲ ಮೆಂಡಿಸ್ (52; 31ಎ) ಅವರು ಮೊದಲ ವಿಕೆಟ್‌ ಜೊತೆಯಾಟದಲ್ಲಿ 80 ರನ್ ಸೇರಿಸಿ ಲಂಕಾ ತಂಡಕ್ಕೆ ಉತ್ತಮ ಆರಂಭ ನೀಡಿದರು. ನಂತರದ 58 ರನ್‌ಗಳು ತಂಡದ ಖಾತೆ ಸೇರುವಷ್ಟರಲ್ಲಿ ಆರು ವಿಕೆಟ್‌ಗಳು ಪತನವಾದವು. ಸ್ಪಿನ್ನರ್ ಅಕ್ಷರ್ ಪಟೇಲ್ (24ಕ್ಕೆ2) ಮತ್ತು ಉಮ್ರಾನ್ ಮಲೀಕ್ (48ಕ್ಕೆ3) ಅವರು ಲಂಕಾ ತಂಡದ ರನ್‌ ಗಳಿಕೆಯನ್ನು ನಿಯಂತ್ರಿಸಿದರು.

ಆದರೆ, ಕೊನೆಯ 4 ಓವರ್‌ಗಳಲ್ಲಿ ಪಂದ್ಯದ ಚಿತ್ರಣವೇ ಬದಲಾಗಿ ಹೋಯಿತು. ದಸುನ್ ಅಬ್ಬರಕ್ಕೆ 27 ಎಸೆತಗಳಲ್ಲಿ 68 ರನ್‌ಗಳು ಸೇರಿದವು. ದಸುನ್ ಅರ್ಧ ಡಜನ್ ಸಿಕ್ಸರ್‌ ಸಿಡಿಸಿದರು. ಎರಡು ಬೌಂಡರಿಗಳನ್ನೂ ಬಾರಿಸಿದರು. 254.55ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದರು.

ಭಾರತ ತಂಡದ ನಾಯಕ ಹಾರ್ದಿಕ್ ಯೋಜನೆಗಳು ತಲೆಕೆಳಗಾದವು. ಅವರೂ ಸೇರಿದಂತೆ ಆರು ಬೌಲರ್‌ಗಳ ಆಟ ನಡೆಯಲಿಲ್ಲ. ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್ ಗಳಿಸಿದ್ದ ಶಿವಂ ಮಾವಿ ಇಲ್ಲಿ ವಿಫಲರಾದರು. ಅಲ್ಲದೇ ನಾಲ್ಕು ಓವರ್‌ಗಳಲ್ಲಿ 53 ರನ್‌ ಬಿಟ್ಟುಕೊಟ್ಟು ದುಬಾರಿಯಾದರು. ಆರ್ಷದೀಪ್ ಕೇವಲ ಎರಡು ಓವರ್‌ಗಳಲ್ಲಿ 37 ರನ್‌ ನೀಡಿದರು. ಅಲ್ಲದೇ ಐದು ಬಾರಿ ನೋಬಾಲ್ ಮಾಡಿದರು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 206 (ಪಥುಮ್ ನಿಸಾಂಕ 33, ಕುಶಾಲ ಮೆಂಡಿಸ್ 52, ಅಸಲಂಕಾ 37, ದಸುನ್ ಶನಕಾ ಅಜೇಯ 56, ಕರುಣಾರತ್ನೆ ಔಟಾಗದೆ 11, ಉಮ್ರಾನ್ ಮಲಿಕ್ 48ಕ್ಕೆ3, ಅಕ್ಷರ್ ಪಟೇಲ್ 24ಕ್ಕೆ2)

ಭಾರತ: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 190 (ಸೂರ್ಯಕುಮಾರ್ ಯಾದವ್ 51, ಹಾರ್ದಿಕ್‌ ಪಾಂಡ್ಯ 12, ದೀಪಕ್‌ ಹೂಡಾ 9, ಅಕ್ಷರ್‌ ಪಟೇಲ್ 65, ಶಿವಂ ಮಾವಿ 26, ದಿಲ್ಶನ್‌ ಮದುಶಂಕಾ 45ಕ್ಕೆ 2, ಕಸುನ್‌ ರಜಿತ 22ಕ್ಕೆ 2, ದಸುನ್‌ ಶನಕಾ 4ಕ್ಕೆ 2) ಫಲಿತಾಂಶ: ಶ್ರೀಲಂಕಾಕ್ಕೆ 16 ರನ್‌ ಗೆಲುವು

ಉಮ್ರಾನ್ ಮಲಿಕ್ 48ಕ್ಕೆ3, ಅಕ್ಷರ್ ಪಟೇಲ್ 24ಕ್ಕೆ2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT