ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರನ್‌ ಸಾಗರದಲ್ಲಿ ಮುಳುಗಿದ ವಿಂಡೀಸ್

ಸ್ವದೇಶದಲ್ಲಿ ಚೊಚ್ಚಲ ಶತಕ ಗಳಿಸಿದ ರಾಹುಲ್; ರೋಹಿತ್ ಅಬ್ಬರ; ಕುಲದೀಪ್ ಹ್ಯಾಟ್ರಿಕ್; ಭಾರತಕ್ಕೆ ಭರ್ಜರಿ ಜಯ
Last Updated 18 ಡಿಸೆಂಬರ್ 2019, 19:48 IST
ಅಕ್ಷರ ಗಾತ್ರ

ವಿಶಾಖಪಟ್ಟಣ : ಸ್ವದೇಶದಲ್ಲಿ ಚೊಚ್ಚಲ ಶತಕ ಬಾರಿಸಿದ ಕೆ.ಎಲ್. ರಾಹುಲ್, ಏಕದಿನ ಕ್ರಿಕೆಟ್‌ನಲ್ಲಿ 28ನೇ ಶತಕ ಹೊಡೆದ ಮುಂಬೈಕರ್ ರೋಹಿತ್ ಶರ್ಮಾ ಮತ್ತು ಚೈನಾಮೆನ್ ಬೌಲರ್ ಕುಲದೀಪ್ ಯಾದವ್ ಹ್ಯಾಟ್ರಿಕ್..

ಈ ಅಬ್ಬರದ ಆಟದ ನಡುವೆ ವೆಸ್ಟ್ ಇಂಡೀಸ್‌ ಆಟ ನಡೆಯಲಿಲ್ಲ. ಕೀರನ್ ಪೊಲಾರ್ಡ್‌ ಬಳಗದ ಸರಣಿ ಜಯದ ಕನಸು ಈಡೇರಲಿಲ್ಲ. ಇಲ್ಲಿ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡವು 107 ರನ್‌ಗಳಿಂದ ಗೆದ್ದಿತು. ಅದರೊಂದಿಗೆ ಸರಣಿಯಲ್ಲಿ 1–1 ಸಮಬಲ ಸಾಧಿಸಿತು. ಮೊದಲ ಪಂದ್ಯದ ಸೋಲಿಗೆ ಮುಯ್ಯಿ ತೀರಿಸಿಕೊಂಡಿತು. ಸರಣಿಯ ಕೊನೆಯ ಪಂದ್ಯವು ಭಾನುವಾರ ಕಟಕ್‌ನಲ್ಲಿ ನಡೆಯಲಿದೆ.

ಟಾಸ್ ಗೆದ್ದ ವಿಂಡೀಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಫಲ ನೀಡಲಿಲ್ಲ. ರಾಹುಲ್ ಮತ್ತು ರೋಹಿತ್ ಮೊದಲ ವಿಕೆಟ್ ಜೊತೆಯಾಟದಲ್ಲಿ 227 ರನ್‌ ಸೇರಿಸಿ ವಿಂಡೀಸ್ ಬೌಲರ್‌ಗಳ ಬೆವರಿಳಿಸಿದರು. ಈ ಅಡಿಪಾಯದ ಮೇಲೆ ಭಾರತ ತಂಡವು 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 387 ರನ್ ಗಳಿಸಿತು. ಈ ಬೃಹತ್ ಗುರಿ ಬೆನ್ನಟ್ಟಿದ ವಿಂಡೀಸ್ 43.3 ಓವರ್‌ಗಳಲ್ಲಿ 280 ರನ್‌ ಗಳಿಸಲಷ್ಟೇ ಶಕ್ತವಾಯಿತು.

ರಾಹುಲ್ ಅವರಂತೂ ತಮ್ಮ ಫಾರ್ಮ್‌ ಬಗ್ಗೆ ಹಲವು ದಿನಗಳಿಂದ ಕೇಳಿದ್ದ ಟೀಕೆಗಳಿಗೆ ಪ್ರತ್ಯುತ್ತರ ನೀಡುವ ರೀತಿಯಲ್ಲಿ ಬ್ಯಾಟ್ ಬೀಸಿದರು. ಆರಂಭದಲ್ಲಿ ರೋಹಿತ್‌ಗಿಂತಲೂ ಅವರು ವೇಗವಾಗಿ ರನ್‌ ಗಳಿಸಿದರು. ಅವರು 46 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದಾಗ ರೋಹಿತ್ ಖಾತೆಯಲ್ಲಿ ಇನ್ನೂ 40 ರನ್‌ ಗಳಿದ್ದವು. 67 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರೋಹಿತ್ ಅವರ ಬೀಸಾಟ ಶುರುವಾಯಿತು. ಇವರಿಬ್ಬರ ಪೈಪೋಟಿಗೆ ಬೌಲರ್‌ಗಳು ಬಸವಳಿದರು. ರಾಸ್ಟನ್ ಚೇಸ್ ಹಾಕಿದ 28ನೇ ಓವರ್‌ನಲ್ಲಿ ರೋಹಿತ್ ಕೊಟ್ಟ ಕ್ಯಾಚ್ ಅನ್ನು ಶಿಮ್ರೊನ್ ಹೆಟ್ಮೆಯರ್ ಕೈಚೆಲ್ಲಿದರು. ಇದರ ನಂತರ ರೋಹಿತ್ ಅಬ್ಬರ ಮುಗಿಲುಮುಟ್ಟಿತು. ತಾವೆದುರಿಸಿದ 107ನೇ ಎಸೆತದಲ್ಲಿ ಶತಕ ಪೂರೈಸಿ ಸಂಭ್ರಮಿಸಿದರು. ಆಗ 92 ರನ್ ಗಳಿಸಿದ್ದ ರಾಹುಲ್ ಕೂಡ ಅಭಿನಂದಿಸಿದರು.

37ನೇ ಓವರ್‌ನಲ್ಲಿ ಅಲ್ಜರಿ ಜೋಸೆಫ್ ಎಸೆತವನ್ನು ಬೌಂಡರಿಗೆರೆ ದಾಟಿಸಿದ ರಾಹುಲ್ ಶತಕ ಪೂರೈಸಿದರು. ಹೆಲ್ಮೆಟ್ ತೆಗೆದು ಬ್ಯಾಟ್ ತಮ್ಮ ಕಾಲುಗಳಿಗೆ ಒರಗಿಸಿಟ್ಟು ಎರಡೂ ಕಿವಿಗಳನ್ನು ತಮ್ಮ ಕೈಗಳಿಂದ ಮುಚ್ಚಿಕೊಂಡು ಕಣ್ಮುಚ್ಚಿ ಕೆಲಕ್ಷಣಗಳವರೆಗೆ ಧ್ಯಾನಸ್ಥರಾಗಿ ನಿಂತರು. ನಂತರ ಬ್ಯಾಟ್ ಎತ್ತಿ ಬೀಸಿ ಸಂಭ್ರಮಿಸಿದರು. 2016ರಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ಎದುರಿನ ಪದಾರ್ಪಣೆ ಪಂದ್ಯದಲ್ಲಿ ಅವರು ಶತಕ ಬಾರಿಸಿದ್ದರು. ಹೋದ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಶತಕ ಗಳಿಸಿದ್ದರು. ವಿಂಡೀಸ್ ಎದುರಿನ ಟಿ20 ಸರಣಿಯಲ್ಲಿಯೂ ಅವರು ಚೆನ್ನಾಗಿ ಆಡಿದ್ದರು. ಶಿಖರ್ ಧವನ್ ಗಾಯಗೊಂಡಿದ್ದರಿಂದ ಸ್ಥಾನ ಪಡೆದಿದ್ದ ರಾಹುಲ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಅದೇ ಓವರ್‌ನಲ್ಲಿ ರಾಸ್ಟನ್ ಚೇಸ್‌ಗೆ ಕ್ಯಾಚಿತ್ತ ರಾಹುಲ್ (102;104ಎ,8ಬೌಂ,3ಸಿ) ಔಟಾದರು. ಜೊತೆಯಾಟ
ಮುರಿಯಿತು. ಆದರೆ ರೋಹಿತ್ ದ್ವಿಶತಕ ಗಳಿಸುವ ನಿರೀಕ್ಷೆ ಮೂಡಿಸಿದರು. ವಿರಾಟ್ ತಾವೆದುರಿಸಿದ ಮೊದಲ ಎಸೆತದಲ್ಲಿ ಕೆಟ್ಟ ಹೊಡೆತವಾಡಿ ಔಟಾದರು. ಶ್ರೇಯಸ್ ಅಯ್ಯರ್ ತಾಳ್ಮೆಯ ಆಟವಾಡಿದರು. 44ನೇ ಓವರ್‌ನಲ್ಲಿ ರೋಹಿತ್ (159;138ಎ,17ಬೌಂ,5ಸಿ)ವಿಕೆಟ್ ಪಡೆದ ಕಾಟ್ರೆಲ್ ಸೆಲ್ಯೂಟ್ ಹೊಡೆದರು!

ಕ್ರೀಸ್‌ಗೆ ಬಂದ ರಿಷಭ್ ಪಂತ್ ಹೊಡಿ ಬಡಿ ಆಟವಾಡಿದರು. ವೇಗಿ ಕಾಟ್ರೆಲ್‌ ಹಾಕಿದ 46ನೇ ಓವರ್‌ನಲ್ಲಿ ಮೂರು ಬೌಂಡರಿ, ಎರಡು ಸಿಕ್ಸರ್‌ಗಳಿದ್ದ 24 ರನ್‌ ಸೂರೆಮಾಡಿದರು. ಇನ್ನೊಂದೆಡೆ ತಮ್ಮ ಆಟಕ್ಕೆ ವೇಗ ನೀಡಿದ ಶ್ರೇಯಸ್ 47ನೇ ಓವರ್‌ನಲ್ಲಿ ಚೇಸ್‌ ಎಸೆತಗಳನ್ನು ದಂಡಿಸಿದರು. ಇದೊಂದೇ ಓವರ್‌ನಲ್ಲಿ 31 ರನ್‌ಗಳನ್ನು ಗಳಿಸಿದರು. ಅದರಲ್ಲಿ ಒಂದು ಬೌಂಡರಿ, ನಾಲ್ಕು ಸಿಕ್ಸರ್‌ಗಳೂ ಇದ್ದವು. ಕೇವಲ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ವಿಂಡೀಸ್ ಬ್ಯಾಟಿಂಗ್‌ನಲ್ಲಿ ಶಾಯ್ ಹೋಪ್ (78ರನ್) ಮತ್ತು ನಿಕೋಲಸ್ ಪೂರನ್ (75 ರನ್) ಅವರ ಹೋರಾಟಕ್ಕೆ ಭಾರತದ ಬೌಲರ್‌ಗಳು ಅಂಜಲಿಲ್ಲ.ಕುಲದೀಪ್ ಯಾದವ್ (52ಕ್ಕೆ3) 33ನೇ ಓವರ್‌ನಲ್ಲಿ ಹೋಪ್, ಹೋಲ್ಡರ್ ಮತ್ತು ಜೋಸೆಫ್ ವಿಕೆಟ್‌ಗಳನ್ನು ಕಬಳಿಸಿ ಹ್ಯಾಟ್ರಿಕ್ ಮಾಡಿದರು. ಇನ್ನೊಂದೆಡೆ ಮಧ್ಯಮವೇಗಿ ಮೊಹಮ್ಮದ್ ಶಮಿ (39ಕ್ಕೆ3) ವಿಂಡೀಸ್ ತಂಡಕ್ಕೆ ಅಡ್ಡಿಯಾದರು.

ಭಾರತ

5ಕ್ಕೆ387 (50 ಓವರ್‌ಗಳಲ್ಲಿ)

ರೋಹಿತ್ ಶರ್ಮಾ ಸಿ ಶಾಯ್ ಹೋಪ್ ಬಿ ಶೆಲ್ಡನ್ ಕಾಟ್ರೆಲ್ 159

ಕೆ.ಎಲ್. ರಾಹುಲ್ ಸಿ ರಾಸ್ಟನ್ ಚೇಸ್ ಬಿ ಅಲ್ಜರಿ ಜೋಸೆಫ್ 102

ವಿರಾಟ್ ಕೊಹ್ಲಿ ಸಿ ರಾಸ್ಟನ್ ಚೇಸ್ ಬಿ ಕೀರನ್ ಪೊಲಾರ್ಡ್ 00

ಶ್ರೇಯಸ್ ಅಯ್ಯರ್ ಸಿ ಶಾಯ್ ಹೋಪ್ ಬಿ ಶೆಲ್ಡನ್ ಕಾಟ್ರೆಲ್ 53

ರಿಷಭ್ ಪಂತ್ ಸಿ ನಿಕೊಲಸ್ ಪೂರನ್ ಬಿ ಕೀಮೊ ಪಾಲ್ 39

ಕೇದಾರ್ ಜಾಧವ್ ಔಟಾಗದೆ 16

ರವೀಂದ್ರ ಜಡೇಜ ಔಟಾಗದೆ 00

ಇತರೆ: 18 (ಬೈ 1, ಲೆಗ್‌ಬೈ 3, ವೈಡ್ 13, ನೋಬಾಲ್ 1)

ವಿಕೆಟ್ ಪತನ: 1–227 (ರಾಹುಲ್;36.3), 2–232 (ವಿರಾಟ್;37.3), 3–292 (ರೋಹಿತ್; 43.3), 4–365 (ರಿಷಭ್; 47.3), 5–373 (ಶ್ರೇಯಸ್;48.6).

ಬೌಲಿಂಗ್

ಶೆಲ್ಡನ್ ಕಾಟ್ರೆಲ್ 9–0–83–2 (ವೈಡ್ 2), ಜೇಸನ್ ಹೋಲ್ಡರ್ 9–0–45–0 (ವೈಡ್ 1), ಖಾರಿ ಪಿಯರ್ 9–0–62–0 (ವೈಡ್ 2), ಕೀಮೊ ಪಾಲ್ 7–0–57–1 (ವೈಡ್ 1), ಅಲ್ಜರಿ ಜೋಸೆಫ್ 9–1–68–1 (ವೈಡ್ 3), ರಾಸ್ಟನ್ ಚೇಸ್ 5–0–48–0 (ನೋಬಾಲ್ 1), ಕೀರನ್ ಪೊಲಾರ್ಡ್ 2–0–20–1 (ವೈಡ್ 1).

ವೆಸ್ಟ್ ಇಂಡೀಸ್

280 (43.3 ಓವರ್‌ಗಳಲ್ಲಿ)

ಎವಿನ್ ಲೂಯಿಸ್ ಸಿ ಶ್ರೇಯಸ್ ಅಯ್ಯರ್ ಬಿ ಶಾರ್ದೂಲ್ ಠಾಕೂರ್ 30

ಶಾಯ್ ಹೋಪ್ ಸಿ ವಿರಾಟ್ ಕೊಹ್ಲಿ ಬಿ ಕುಲದೀಪ್ ಯಾದವ್ 78

ಶಿಮ್ರೊನ್ ಹೆಟ್ಮೆಯರ್ ರನ್‌ಔಟ್ (ಶ್ರೇಯಸ್/ಜಡೇಜ) 04

ರಾಸ್ಟನ್ ಚೇಸ್ ಬಿ ರವೀಂದ್ರ ಜಡೇಜ 04

ನಿಕೊಲಸ್ ಪೂರನ್ ಸಿ ಕುಲದೀಪ್ ಯಾದವ್ ಬಿ ಮೊಹಮ್ಮದ್ ಶಮಿ 75

ಕೀರನ್ ಪೊಲಾರ್ಡ್ ಸಿ ರಿಷಭ್ ಪಂತ್ ಬಿ ಮೊಹಮ್ಮದ್ ಶಮಿ 00

ಜೇಸನ್ ಹೋಲ್ಡರ್ ಸ್ಟಂಪ್ಡ್ ರಿಷಭ್ ಪಂತ್ ಬಿ ಕುಲದೀಪ್ ಯಾದವ್ 11

ಕೀಮೊ ಪಾಲ್ ಸಿ ಕೇದಾರ್ ಜಾಧವ್ ಬಿ ಕುಲದೀಪ್ ಯಾದವ್ 00

ಖಾರಿ ಪಿಯರ್ ಸಿ ವಿರಾಟ್ ಕೊಹ್ಲಿ ಬಿ ರವೀಂದ್ರ ಜಡೇಜ 21

ಶೆಲ್ಡನ್ ಕಾಟ್ರೆಲ್ ಔಟಾಗದೆ 00

ಇತರೆ: 11 (ಬೈ 1, ಲೆಗ್‌ಬೈ 2, ವೈಡ್ 8)

ವಿಕೆಟ್ ಪತನ: 1–61 (ಲೂಯಿಸ್;10.6), 2–73 (ಹೆಟ್ಮೆಯರ್;13.1), 3–86 (ಚೇಸ್;15.6), 4–192 (ಪೂರನ್;29.2), 5–192 (ಪೊಲಾರ್ಡ್;29.3), 6–210 (ಹೋಪ್;32.4), 7–210(ಹೋಲ್ಡರ್;32.5), 8–210 (ಜೋಸೆಫ್;32.6), 9–260 (ಖಾರಿ;40.5), 10–280 (ಪಾಲ್;43.3)

ಬೌಲಿಂಗ್

ದೀಪಕ್ ಚಾಹರ್ 7–1–44–0 (ವೈಡ್2), ಶಾರ್ದೂಲ್ ಠಾಕೂರ್ 8–0–55–1 (ವೈಡ್ 2), ಮೊಹಮ್ಮದ್ ಶಮಿ 7.3–0–39–3 (ವೈಡ್ 1), ರವೀಂದ್ರ ಜಡೇಜ 10–0–74–2 (ವೈಡ್ 1), ಕುಲದೀಪ್ ಯಾದವ್ 10–0–52–3.

ಫಲಿತಾಂಶ: ಭಾರತ ತಂಡಕ್ಕೆ 107 ರನ್ ಜಯ

ಪಂದ್ಯಶ್ರೇಷ್ಠ: ರೋಹಿತ್ ಶರ್ಮಾ

ಮುಂದಿನ ಪಂದ್ಯ: ಡಿ 22 (ಸ್ಥಳ: ಕಟಕ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT