ಮಂಗಳವಾರ, ನವೆಂಬರ್ 19, 2019
28 °C
ನಾಲ್ಕನೇ ದಿನ 12 ಎಸೆತಗಳಲ್ಲೇ ದಕ್ಷಿಣ ಆಫ್ರಿಕಾದ ಇನಿಂಗ್ಸ್‌ಗೆ ತೆರೆಯೆಳೆದ ಕೊಹ್ಲಿ ಬಳಗ

ಟೆಸ್ಟ್‌ ಕ್ರಿಕೆಟ್‌: ಮುಂದುವರಿದ ಸರಣಿ ಗೆಲುವಿನ ಸರಪಳಿ

Published:
Updated:

ರಾಂಚಿ: ದಕ್ಷಿಣ ಆಫ್ರಿಕಾ ‘ವೈಟ್‌ ವಾಷ್‌’ಗೆ ಅಗತ್ಯವಿದ್ದ ಔಪಚಾರಿಕ ವಿಧಿಯನ್ನು ಭಾರತ ಕೇವಲ 12 ಎಸೆತಗಳಲ್ಲಿ ಪೂರೈಸಿತು. ಮೂರನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯವನ್ನು ವಿರಾಟ್‌ ಕೊಹ್ಲಿ ಬಳಗ ನಾಲ್ಕನೇ ದಿನವಾದ ಮಂಗಳವಾರ ಇನಿಂಗ್ಸ್‌ ಮತ್ತು 202 ರನ್‌ಗಳ ಭಾರಿ ಅಂತರದಿಂದ ಗೆದ್ದುಕೊಂಡು 3–0 ಸರಣಿ ಜಯ ಪೂರೈಸಿತು.

ಚೊಚ್ಚಲ ಟೆಸ್ಟ್‌ ಆಡಿದ ಸ್ಥಳೀಯ ಯುವಕ ಶಹಬಾಜ್‌ ನದೀಮ್‌ (18ಕ್ಕೆ2) ಕೊನೆಯ ಎರಡು ವಿಕೆಟ್‌ಗಳನ್ನು ಎರಡು ಎಸೆತಗಳ ಅಂತರದಲ್ಲಿ ಪಡೆದರು. ದಕ್ಷಿಣ ಆಫ್ರಿಕಾ (ಸೋಮವಾರ 8 ವಿಕೆಟ್‌ಗೆ 132) ಆಟ ಆರಂಭವಾಗಿ 15 ನಿಮಿಷಗಳಲ್ಲಿ 133 ರನ್‌ಗಳಿಗೆ ಆಲೌಟ್‌ ಆಯಿತು. ಆ ಮೂಲಕ ಸರಣಿಯಲ್ಲೇ ಅತಿ ಕಡಿಮೆ ಮೊತ್ತಕ್ಕೆ ಪ‍್ರವಾಸಿ ತಂಡ  ಕುಸಿಯಿತು. ಆತಿಥೇಯರು ಸತತ ಎರಡನೇ ಬಾರಿ ಇನಿಂಗ್ಸ್ ಅಂತರದಿಂದ ಜಯಗಳಿಸಿದರು.

‘ಕಂಕಷನ್‌’ ಸಬ್‌ಸ್ಟಿಟ್ಯೂಟ್‌ (ಗಾಯಾಳು ಬದಲಿಗೆ ಆಡುವ ಬದಲಿ ಆಟಗಾರ) ಆಗಿದ್ದ ಥಿಯುನಿಸ್‌ ಡಿ ಬ್ರುಯಿನ್‌, ನದೀಮ್‌ ಎಸೆತದಲ್ಲಿ ಮುನ್ನುಗ್ಗಲು ಯತ್ನಿಸಿ ಮನಸ್ಸು ಬದಲಿಸಿದರು. ಹಿಂದೆ ಸರಿದು ಕಟ್‌ ಮಾಡುವ ಯತ್ನದಲ್ಲಿದ್ದಾಗ ಬ್ಯಾಟಿನ ಕೆಳಅಂಚಿಗೆ ಸವರಿದ ಚೆಂಡನ್ನು ವಿಕೆಟ್‌ ಕೀಪರ್‌ ಸಹಾ ಗಬಕ್ಕನೇ ಹಿಡಿದರು. ಸಹಾ, ಹೆಬ್ಬೆರಳಿನ ಗಾಯದಿಂದ ಚೇತರಿಸಿ ಬೆಳಿಗ್ಗೆ ಆಟಕ್ಕೆ ಮರಳಿದ್ದರು. 

ಮುಂದಿನ ಎಸೆತದಲ್ಲಿ ಕೊನೆಯ ಆಟಗಾರ ಲುಂಗಿ ಗಿಡಿ ದುರದೃಷ್ಟಕರ ರೀತಿ ಔಟಾಗುವ ಮೂಲಕ ದಕ್ಷಿಣ ಆಫ್ರಿಕಾ ಪಾಲಿನ ನಿರಾಶಾದಾಯಕ ಸರಣಿ ಕೊನೆಗೊಂಡಿತು. ನದೀಮ್‌ ಎಸೆತದಲ್ಲಿ ಗಿಡಿ ಬಲವಾಗಿ ಹೊಡೆದ ಚೆಂಡು ನಾನ್‌ಸ್ಟ್ರೈಕರ್‌ ಕಡೆಯಿದ್ದ ನೋರ್ಟೆ ಅವರ ಎಡ ಮಣಿಕಟ್ಟಿಗೆ ಜೋರಾಗಿ ಬಡಿದು ಮೇಲೆ ಪುಟಿಯಿತು. ಇಂಥ ಸಾಧ್ಯತೆ ಊಹಿಸಿದಂತಿದ್ದ ನದೀಮ್‌ ಕ್ಯಾಚ್‌ ಹಿಡಿದರು.

ಫಾಫ್‌ ಡುಪ್ಲೆಸಿ ಸರಣಿಯಲ್ಲಿ ಮೂರೂ ಬಾರಿ ಟಾಸ್‌ ಸೋತಿದ್ದರು. ರಾಂಚಿಯಲ್ಲಿ ನಾಯಕನ ಜೊತೆ ತೆಂಬಾ ಬವುಮಾ ಕೂಡ ಟಾಸ್‌ಗೆ ಇಳಿದರೂ ಅದೃಷ್ಟ ಒಲಿಯಲಿಲ್ಲ. ಭಾರತದ ಬ್ಯಾಟ್ಸಮನ್ನರು ಮಿಂಚಿದರು. ಕೆಲವು ವರ್ಷಗಳ ಹಿಂದೆ ಉತ್ತಮ ವೇಗಿಗಳಿಗೆ ಹೆಸರಾಗಿದ್ದ ದಕ್ಷಿಣ ಆಫ್ರಿಕ ತಂಡದ ದಾಳಿ ನೀರಸವಾದಂತೆ ಕಂಡಿತು. ಸ್ಪಿನ್ನರ್‌ಗಳು ಪರಿಣಾಮ ಬೀರಲಿಲ್ಲ.  ಭಾರತದ ವೇಗ, ಆಕ್ರಮಣಕಾರಿ ಮನೋಭಾವ, ಸ್ಪಿನ್‌ ದಾಳಿ ಎದುರು ಪ್ರವಾಸಿ ತಂಡದ ಬ್ಯಾಟ್ಸ್‌ಮನ್ನರು ಕಂಗಾಲಾದರು.

ದಕ್ಷಿಣ ಆಫ್ರಿಕಾ, ಈ ಹಿಂದೆ ಕೊನೆಯ ಬಾರಿ ಸತತ ಮೂರು ಟೆಸ್ಟ್‌ಗಳನ್ನು ಸೋತಿದ್ದು 1935–36ರಲ್ಲಿ (ಆಸ್ಟ್ರೇಲಿಯಾ ವಿರುದ್ಧ). ಭಾರತ ತವರಿನಲ್ಲಿ ಸರಣಿ ಗೆಲುವಿನ ನಾಗಾಲೋಟವನ್ನು ಮುಂದುವರಿಸಿತು. 2012ರ ಡಿಸೆಂಬರ್‌ನಿಂದ ತವರಿನಲ್ಲಿ ಭಾರತ ಒಂದೂ ಸರಣಿ ಸೋತಿಲ್ಲ. 

ಆರಂಭ ಆಟಗಾರನ ಪಾತ್ರದಲ್ಲಿ ಮಿಂಚಿದ ರೋಹಿತ್‌ ಶರ್ಮಾ, ಒಟ್ಟು 529 ರನ್‌ ಕಲೆಹಾಕಿ ಸರಣಿಯ ಸರ್ವೋತ್ತಮನಾದರು.

ಪ್ರತಿಕ್ರಿಯಿಸಿ (+)