ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND v BAN 2nd Test | ಬಾಂಗ್ಲಾ ವಿರುದ್ಧ ಗೆದ್ದು ಬೀಗಿದ ಭಾರತ, ಸರಣಿ ಕೈವಶ

Last Updated 26 ಡಿಸೆಂಬರ್ 2022, 3:10 IST
ಅಕ್ಷರ ಗಾತ್ರ

ಮೀರ್‌ಪುರ್:ಆಲ್‌ರೌಂಡರ್ ಆರ್‌. ಅಶ್ವಿನ್ ಮತ್ತು ಬ್ಯಾಟರ್ ಶ್ರೇಯಸ್ ಅಯ್ಯರ್ ಭಾರತದ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ.

ಬಾಂಗ್ಲಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಸೋಲುವ ಭೀತಿಯಿಂದ ತಂಡವನ್ನು ಪಾರು ಮಾಡಿದರು.ಸ್ಪಿನ್ನರ್‌ಗಳು ವಿಜೃಂಭಿಸಿದ ಪಿಚ್‌ನಲ್ಲಿ ನೆಲಕಚ್ಚಿ ಆಡಿದ ಇಬ್ಬರೂ ಆಟಗಾರರುಮುರಿಯದ ಎಂಟನೇ ವಿಕೆಟ್‌ ಜೊತೆಯಾಟದಲ್ಲಿ 105 ಎಸೆತಗಳಲ್ಲಿ 71 ರನ್ ಸೇರಿಸಿದರು. ಇದರಿಂದಾಗಿ ಭಾರತವು 3 ವಿಕೆಟ್‌ಗಳಿಂದ ಗೆದ್ದಿತು. ಸರಣಿಯನ್ನು 2–0ಯಿಂದ ಕ್ಲೀನ್‌ಸ್ವೀಪ್ ಮಾಡಿತು.ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದು, ಫೈನಲ್ ತಲುಪುವ ಆಸೆ ಜೀವಂತವಾಗಿದೆ.

ಪಂದ್ಯದ ಮೂರನೇ ದಿನದಾಟವಾದ ಶನಿವಾರ 145 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತ ತಂಡವು 45 ರನ್‌ಗಳಿಗೇ ನಾಲ್ಕು ವಿಕೆಟ್‌ ಕಳೆದುಕೊಂಡಿತ್ತು. ತಿರುಗಣಿ ಮಡುವಿನಂತಿದ್ದ ಪಿಚ್‌ನಲ್ಲಿ ಅಗ್ರಕ್ರಮಾಂಕದ ಬ್ಯಾಟರ್‌ಗಳು ಒಂದಂಕಿ ಗಳಿಸಲು ಪರದಾಡಿ ಔಟಾಗಿದ್ದರು. ಆದರೆ, ದಿನದಾಟದ ಮುಕ್ತಾಯಕ್ಕೆ ಅಕ್ಷರ್ ಪಟೇಲ್ (ಬ್ಯಾಟಿಂಗ್ 26; 54ಎಸೆತ) ಮತ್ತು ರಾತ್ರಿ ಕಾವಲುಗಾರ ಜೈದೇವ್ ಉನದ್ಕತ್ (ಬ್ಯಾಟಿಂಗ್ 3) ಕ್ರೀಸ್‌ನಲ್ಲಿದ್ದರು.

ನಾಲ್ಕನೇ ದಿನದಾಟದ ಬೆಳಿಗ್ಗೆ ಜೈದೇವ್ ಮತ್ತು ಅಕ್ಷರ್ ಪಟೇಲ್ ತಾಳ್ಮೆಯ ಆಟ ಮುಂದುವರಿಸಿದರು. 13 ರನ್‌ ಗಳಿಸಿದ ಜೈದೇವ್ 25ನೇ ಓವರ್‌ನಲ್ಲಿ ಶಕೀಬ್‌ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಕ್ರೀಸ್‌ಗೆ ಬಂದ ರಿಷಭ್ ಪಂತ್ (9;13ಎ) ಅವರು ಅಕ್ಷರ್ ಜೊತೆಗೆ 15 ರನ್‌ಗಳನ್ನು ಸೇರಿದ್ದರು. ಮೆಲ್ಲಗೆ ಬೆಳೆಯುತ್ತಿದ್ದ ಜೊತೆಯಾಟಕ್ಕೆ ರಿಷಭ್ ವಿಕೆಟ್ ಪಡೆದ ಮೆಹದಿ ಹಸನ್ ಮಿರಾಜ್ ಕುಣಿದಾಡಿದರು. ಐದು ಓವರ್‌ಗಳ ನಂತರ ಮಿರಾಜ್ ಎಸೆತವನ್ನು ಆಡುವಲ್ಲಿ ಎಡವಿದ ಅಕ್ಷರ್ ಕ್ಲೀನ್‌ಬೌಲ್ಡ್ ಆದರು. ಐದು ವಿಕೆಟ್‌ಗಳ ಗೊಂಚಲು ಗಳಿಸಿದ ಸಂಭ್ರಮದಲ್ಲಿ ಮಿರಾಜ್ ತೇಲಾಡಿದರು.

ಆದರೆ ಅದರ ನಂತರ ಬಾಂಗ್ಲಾದ ಬೌಲರ್‌ಗಳಿಗೆ ಸಂಭ್ರಮಿಸುವ ಅವಕಾಶ ಸಿಗಲಿಲ್ಲ. 34ನೇ ಓವರ್‌ನಲ್ಲಿ ಶಾರ್ಟ್‌ ಲೆಗ್‌ ಫೀಲ್ಡರ್ ಮೊಮಿನುಲ್ ಹಕ್ ಅವರು ಕ್ಯಾಚ್‌ ಕೈಚೆಲ್ಲಿ ಅಶ್ವಿನ್‌ಗೆ ಜೀವದಾನ ನೀಡಿದರು. ಇದರಿಂದಾಗಿ ಮಿರಾಜ್‌ಗೆ ಆರನೇ ವಿಕೆಟ್ ಹಾಗೂ ಬಾಂಗ್ಲಾಗೆ ಜಯದ ಅವಕಾಶಗಳೂ ನೆಲಪಾಲಾದವು!

ಮೊದಲ ಇನಿಂಗ್ಸ್‌ನಲ್ಲಿ 87 ರನ್‌ ಗಳಿಸಿದ್ದ ಶ್ರೇಯಸ್ ಆತ್ಮವಿಶ್ವಾಸದ ಆಟವಾಡಿದರು. ಇನ್ನೊಂದು ಬದಿಯಲ್ಲಿ ಅಶ್ವಿನ್ ರನ್‌ ಗಳಿಕೆಗೆ ವೇಗ ನೀಡಿದರು. ಸಮಯ ಸರಿದಂತೆ ಪಿಚ್‌ ನಲ್ಲಿ ಚೆಂಡು ಪುಟಿದು ಬರುವುದು ನಿಧಾನವಾಗುತ್ತಿರುವುದನ್ನು ಗ್ರಹಿಸಿದ ಬ್ಯಾಟಿಂಗ್ ಜೋಡಿಯು ಎಚ್ಚರಿಕೆಯಿಂದ ಆಡಿತು.

ಇಬ್ಬರೂ ತಲಾ ನಾಲ್ಕು ಬೌಂಡರಿ ಹೊಡೆದರು. ಅಶ್ವಿನ್ ಒಂದು ಭರ್ಜರಿ ಸಿಕ್ಸರ್ ಕೂಡ ಸಿಡಿಸಿದರು. ಹೋದ ವರ್ಷ ಸಿಡ್ನಿ ಟೆಸ್ಟ್‌ನಲ್ಲಿ ಅಶ್ವಿನ್ ಭಾರತದ ಸೋಲು ತಪ್ಪಿಸುವ ಆಟವಾಡಿದ್ದರು. ಇಲ್ಲಿಯೂ ಅಂತಹದ್ದೇ ಆಟವಾಡಿದರು.

ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್‌

ಬಾಂಗ್ಲಾದೇಶ 227, ಭಾರತ: 314.

ಎರಡನೇ ಇನಿಂಗ್ಸ್
ಬಾಂಗ್ಲಾದೇಶ: 70.3 ಓವರ್‌ಗಳಲ್ಲಿ 231.
ಭಾರತ: 47 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 145 (ಅಕ್ಷರ್ ಪಟೇಲ್ 34, ಶ್ರೇಯಸ್ ಅಯ್ಯರ್ ಅಜೇಯ 29, ಆರ್. ಅಶ್ವಿನ್ ಅಜೇಯ 42, ಶಕೀಬ್ ಅಲ್ ಹಸನ್ 50ಕ್ಕೆ2, ಮೆಹದಿ ಹಸನ್ ಮಿರಾಜ್ 63ಕ್ಕೆ5)

ಫಲಿತಾಂಶ: ಭಾರತ ತಂಡಕ್ಕೆ 3 ವಿಕೆಟ್‌ಗಳ ಜಯ. ಸರಣಿಯಲ್ಲಿ 2–0ಯಿಂದ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT