ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | ಹೆಡ್–ಶರ್ಮಾ ಅಬ್ಬರ; ಡೆಲ್ಲಿಗೆ 267 ರನ್ ಗುರಿ ನೀಡಿದ ರೈಸರ್ಸ್

Published 20 ಏಪ್ರಿಲ್ 2024, 14:06 IST
Last Updated 20 ಏಪ್ರಿಲ್ 2024, 14:06 IST
ಅಕ್ಷರ ಗಾತ್ರ

ನವದೆಹಲಿ: ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವಿರುದ್ಧದ ಐಪಿಎಲ್‌ ಟಿ20 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಸನ್‌ರೈಸರ್ಸ್‌ ಹೈದಾರಾಬಾದ್‌, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 266 ರನ್ ಕಲೆಹಾಕಿದೆ.

ಇಲ್ಲಿನ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಡೆಲ್ಲಿ ನಾಯಕ ರಿಷಭ್‌ ಪಂತ್‌, ಎದುರಾಳಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆದರೆ, ಅವರ ಲೆಕ್ಕಾಚಾರವನ್ನು ರೈಸರ್ಸ್‌ ತಂಡದ ಆರಂಭಿಕ ಜೋಡಿ ತಲೆಕೆಳಗಾಗಿಸಿತು.

ಮೊದಲ ಓವರ್‌ನಿಂದಲೇ ಅಬ್ಬರಿಸಿದ ಟ್ರಾವಿಸ್‌ ಹೆಡ್‌ ಹಾಗೂ ಅಭಿಷೇಕ್ ಶರ್ಮಾ, ಮೊದಲ ಐದು ಓವರ್‌ಗಳಲ್ಲೇ 'ಶತಕ' ಬಾರಿಸಿದರು. ಪವರ್‌ ಪ್ಲೇ ಅವಧಿಯಲ್ಲಿ ದಾಖಲೆಯ 125 ರನ್‌ ಚಚ್ಚಿದರು.

7ನೇ ಓವರ್‌ನಲ್ಲಿ ದಾಳಿಗಿಳಿದ ಕುಲದೀಪ್‌ ಯಾದವ್‌, 12 ಎಸೆತಗಳಲ್ಲೇ 46 ರನ್‌ ಗಳಿಸಿದ್ದ ಶರ್ಮಾ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ನಂತರ ಬಂದ ಏಡನ್‌ ಮಾರ್ಕ್ರಂ (1) ಸಹ ಅದೇ ಓವರ್‌ನ ಕೊನೇ ಎಸೆತದಲ್ಲಿ ಔಟಾದರು.

32 ಎಸೆತಗಳಲ್ಲಿ 89 ರನ್‌ ಗಳಿಸಿದ್ದ ಹೆಡ್‌ ಹಾಗೂ ಆಗಷ್ಟೇ ರಟ್ಟೆ ಆರಳಿಸುತ್ತಿದ್ದ ಹೆನ್ರಿಚ್‌ ಕ್ಲಾಸೆನ್‌ (8 ಎಸೆತಗಳಲ್ಲಿ 15 ರನ್‌) ರೈಸರ್ಸ್‌ ಮೊತ್ತ 9.1 ಓವರ್‌ಗಳಲ್ಲೇ 154 ರನ್ ಆಗಿದ್ದಾಗ ಬೆನ್ನು ಬೆನ್ನಿಗೆ ವಿಕೆಟ್ ಒಪ್ಪಿಸಿದರು.

ಬಳಿಕ ರನ್ ಗಳಿಕೆಯ ವೇಗಕ್ಕೆ ಕಡಿವಾಣ ಬಿದ್ದಿತು. ಕೊನೆಯಲ್ಲಿ ಅಬ್ಬರಿಸಿದ ಶಹಬಾಜ್‌ ಅಹಮದ್‌ (29 ಎಸೆತ, 59 ರನ್) ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಅರ್ಧಶತಕದ ಸಿಡಿಸಿದರು.

ಡೆಲ್ಲಿ ಪರ ಅಕ್ಷರ್‌ ಪಟೇಲ್‌ (4 ಓವರ್‌ 29 ರನ್‌) ಹೊರತುಪಡಿಸಿ ಉಳಿದೆಲ್ಲ ಬೌಲರ್‌ಗಳು ದುಬಾರಿಯಾದರು. 10ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್‌ ಬಿಟ್ಟುಕೊಟ್ಟರು.

ಕುಲದೀಪ್‌ ಯಾದವ್‌ 4 ಓವರ್‌ಗಳಲ್ಲಿ 4 ವಿಕೆಟ್‌ ಪಡೆದರೂ 55 ರನ್‌ ಬಿಟ್ಟುಕೊಟ್ಟರು. ಅಕ್ಷರ್‌ ಹಾಗೂ ಮುಕೇಶ್‌ ಕುಮಾರ್ ತಲಾ ಒಂದೊಂದು ವಿಕೆಟ್ ಪಡೆದರು.

ಲೀಗ್‌ ಹಂತದಲ್ಲಿ ಸಾಧನೆ
ಡೆಲ್ಲಿ ತಂಡವು ಇದುವರೆಗೆ ಒಟ್ಟು ಏಳು ಪಂದ್ಯಗಳನ್ನು ಆಡಿದೆ. ಇದರಲ್ಲಿ 3 ಜಯ ಹಾಗೂ 4 ಸೋಲು ಕಂಡಿದೆ.

ರೈಸರ್ಸ್‌ ಪಡೆಯ ಅಂಕಿ ಅಂಶ, ಕ್ಯಾಪಿಟಲ್ಸ್‌ಗಿಂತ ಉತ್ತವಾಗಿದೆ. ಈ ತಂಡ ಆಡಿರುವ 6 ಪಂದ್ಯಗಳಲ್ಲಿ 4ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT