ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL: ಶುಭಮನ್ ಬಳಗದ ಶುಭಾರಂಭ; ಮುಂಬೈ ಇಂಡಿಯನ್ಸ್‌ಗೆ ನಿರಾಶೆ

ಕೊನೆಯ ಓವರ್‌ನಲ್ಲಿ ಮಿಂಚಿದ ಉಮೇಶ್
Published 24 ಮಾರ್ಚ್ 2024, 22:25 IST
Last Updated 24 ಮಾರ್ಚ್ 2024, 22:25 IST
ಅಕ್ಷರ ಗಾತ್ರ

ಅಹಮದಾಬಾದ್: ಅನುಭವಿ ವೇಗಿ ಉಮೇಶ್ ಯಾದವ್ ಅವರು ಭಾನುವಾರ ರಾತ್ರಿ ಕೊನೆಯ ಓವರ್‌ನಲ್ಲಿ ಗಳಿಸಿದ ಎರಡು ವಿಕೆಟ್‌ಗಳಿಂದಾಗಿ ಗುಜರಾತ್ ಟೈಟನ್ಸ್ ತಂಡವು ಮುಂಬೈ ಇಂಡಿಯನ್ಸ್ ಎದುರು ರೋಚಕ ಜಯ ಸಾಧಿಸಿತು.

ಇದರಿಂದಾಗಿ ಹೊಸ ನಾಯಕ ಶುಭಮನ್ ಗಿಲ್ ಅವರು ಶುಭಾರಂಭ ಮಾಡಿದರು.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 169 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಮುಂಬೈ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 162 ರನ್‌ ಗಳಿಸಿತು. ಗಿಲ್ ಬಳಗವು 6 ರನ್‌ಗಳಿಂದ ಜಯಿಸಿತು.

ಮುಂಬೈ ತಂಡಕ್ಕೆ ಕೊನೆಯ ಓವರ್‌ನಲ್ಲಿ 19 ರನ್‌ಗಳ ಅಗತ್ಯವಿತ್ತು. ತಂಡದ ನವನಾಯಕ ಹಾರ್ದಿಕ್ ಪಾಂಡ್ಯ ಅವರು, ಉಮೇಶ್ ಹಾಕಿದ ಓವರ್‌ನ ಮೊದಲ ಎಸೆತವನ್ನು ಸಿಕ್ಸರ್‌ಗೆತ್ತಿದರು. ಎರಡನೇ ಎಸೆತವನ್ನು ಬೌಂಡರಿಗೆರೆ ದಾಟಿಸಿದರು. ಇನ್ನೇನು ನಾಲ್ಕು ಎಸೆತಗಳಲ್ಲಿ ಉಳಿದಿರುವ ಒಂಬತ್ತು ರನ್‌ ಹೊಡೆದುಬಿಡುವ ಹುಮ್ಮಸ್ಸಿನಲ್ಲಿದ್ದ ಹಾರ್ದಿಕ್ ಶಾರ್ಟ್ ಎಸೆತದಲ್ಲಿ ದೊಡ್ಡ ಹೊಡೆತ ಪ್ರಯೋಗಿಸಿ, ರಾಹುಲ್ ತೆವಾಟಿಯಾಗೆ ಕ್ಯಾಚ್ ಕೊಟ್ಟರು. ನಂತರದ ಎಸೆತದಲ್ಲಿ ಪಿಯೂಷ್ ಚಾವ್ಲಾ ಅವರೂ ಔಟಾದರು. ಕೊನೆ ಎರಡು ಎಸೆತಗಳಲ್ಲಿ ಮೂರು ರನ್ ಕೊಟ್ಟ ಉಮೇಶ್ ಸಂತೃಪ್ತಿಯಿಂದ ನಕ್ಕರು. ಈ ಪಂದ್ಯದಲ್ಲಿ ಅವರು 4 ಓವರ್‌ಗಳಲ್ಲಿ 31 ರನ್ ಬಿಟ್ಟುಕೊಟ್ಟು ದುಬಾರಿಯೂ ಆದರು! ರೋಹಿತ್ ಶರ್ಮಾ (43 ರನ್) ಮತ್ತು ಡಿವಾಲ್ಡ್ ಬ್ರೆವಿಸ್ (46 ರನ್) ಅವರ ಉತ್ತಮ ಬ್ಯಾಟಿಂಗ್‌ನಿಂದ ತಂಡವು ಸುಲಭವಾಗಿ ಗೆಲ್ಲುವ ಭರವಸೆ ಮೂಡಿತ್ತು. ಕೊನೆಯ ಐದು ಓವರ್‌ಗಳಲ್ಲಿ ತಂಡಕ್ಕೆ 43 ರನ್‌ಗಳ ಅಗತ್ಯವಿತ್ತು. ಏಳು ವಿಕೆಟ್‌ಗಳೂ ಬಾಕಿ ಇದ್ದವು. ಆದರೆ ಗುಜರಾತ್ ಬೌಲರ್ ಮೋಹಿತ್ ಶರ್ಮಾ (32ಕ್ಕೆ2), ಸ್ಪೆನ್ಸರ್ ಜಾನ್ಸನ್ (25ಕ್ಕೆ2) ಅವರ ದಾಳಿಯ ಮುಂದೆ ಮುಂಬೈ ಮಂಕಾಯಿತು.

ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಜಸ್‌ಪ್ರೀತ್ ಬೂಮ್ರಾ (14ಕ್ಕೆ3) ಶಿಸ್ತಿನ ದಾಳಿ ನಡೆಸಿದರು. ತಮ್ಮ ‘ಟ್ರೇಡ್‌ಮಾರ್ಕ್’ ಯಾರ್ಕರ್ ಎಸೆತದಲ್ಲಿ ವೃದ್ಧಿಮಾನ್ ಸಹಾ ವಿಕೆಟ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದರು. ಸ್ಪೋಟಕ ಶೈಲಿಯ ಬ್ಯಾಟರ್ ಡೇವಿಡ್ ಮಿಲ್ಲರ್ ಅವರು ಬೂಮ್ರಾ ಹಾಕಿದ ನಿಧಾನಗತಿಯ ಎಸೆತವನ್ನು ಮಿಡ್‌ ಆನ್ ದಾಟಿಸುವ ಯತ್ನದಲ್ಲಿ ವಿಫಲರಾದರು. ಅಲ್ಲಿ ಫೀಲ್ಡಿಂಗ್‌ನಲ್ಲಿದ್ದ ನಾಯಕ ಹಾರ್ದಿಕ್ ಕ್ಯಾಚ್ ಪಡೆದು ಸಂಭ್ರಮಿಸಿದರು. ಅದೇ ಓವರ್‌ನಲ್ಲಿ ಸಾಯಿ ಸುದರ್ಶನ್ (45 ರನ್) ವಿಕೆಟ್ ಗಳಿಸಿದ ಬೂಮ್ರಾ ಸಂಭ್ರಮಿಸಿದರು.

ಸಂಕ್ಷಿಪ್ತ ಸ್ಕೋರು: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 168 (ಶುಭಮನ್ ಗಿಲ್ 31, ಸಾಯಿ ಸುದರ್ಶನ್ 45, ಅಜ್ಮತ್‌ವುಲ್ಲಾ ಒಮರ್‌ಝೈ 17, ರಾಹುಲ್ ತೆವಾಟಿಯಾ 22, ಜಸ್‌ಪ್ರೀತ್ ಬೂಮ್ರಾ 14ಕ್ಕೆ3, ಗೆರಾಲ್ಡ್ ಕೊಯಿಜಿ 27ಕ್ಕೆ2) ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 162 (ರೋಹಿತ್ ಶರ್ಮಾ 43, ನಮನ್ ಧೀರ್ 20, ಡೆವಾಲ್ಡ್ ಬ್ರೆವಿಸ್ 46, ತಿಲಕ್ ವರ್ಮಾ 25, ಅಜ್ಮತ್‌ವುಲ್ಲಾ ಒಮರ್‌ಝೈ 27ಕ್ಕೆ2, ಉಮೇಶ್ ಯಾದವ್ 31ಕ್ಕೆ2, ಸ್ಪೆನ್ಸರ್ ಜಾನ್ಸನ್ 25ಕ್ಕೆ2, ಮೋಹಿತ್ ಶರ್ಮಾ 32ಕ್ಕೆ2) ಫಲಿತಾಂಶ: ಗುಜರಾತ್ ಟೈಟನ್ಸ್‌ಗೆ 6 ರನ್‌ಗಳ ಜಯ. ಪಂದ್ಯಶ್ರೇಷ್ಠ: ಸಾಯಿ ಸುದರ್ಶನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT