ಶುಕ್ರವಾರ, ಡಿಸೆಂಬರ್ 4, 2020
20 °C
ಮುಂದಿನ ವರ್ಷದ ಕ್ರಿಕೆಟ್ ಸರಣಿಗಳ ವೇಳಾಪಟ್ಟಿ ಬಿಡುಗಡೆ ಮಾಡಿದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ

ಭಾರತ–ಇಂಗ್ಲೆಂಡ್ ಸರಣಿಯಲ್ಲಿ ಪ್ರೇಕ್ಷಕರ ಕಲರವ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಇಂಗ್ಲೆಂಡ್‌ನ ಕ್ರಿಕೆಟ್‌ ಪ್ರೇಮಿಗಳಿಗೆ ಅಲ್ಲಿನ ಕ್ರಿಕೆಟ್ ಮಂಡಳಿ ಬುಧವಾರ ಸಿಹಿ ಸುದ್ದಿ ನೀಡಿದೆ. ಮುಂದಿನ ವರ್ಷ ನಡೆಯಲಿರುವ ವಿವಿಧ ಸರಣಿಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು ಭಾರತದ ಎದುರಿನ ಟೆಸ್ಟ್ ಸರಣಿಯ ಪಂದ್ಯಗಳನ್ನು ಕ್ರೀಡಾಂಗಣದಲ್ಲೇ ವೀಕ್ಷಿಸಲು ಅನುವು ಮಾಡಿಕೊಡುವುದಾಗಿ ಘೋಷಿಸಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಐದು ಪಂದ್ಯಗಳ ಸರಣಿ ನಡೆಯಲಿದೆ.

ಕೋವಿಡ್–19ರ ಆತಂಕದ ನಡುವೆಯೂ ಈ ವರ್ಷ ಇಂಗ್ಲೆಂಡ್‌ನಲ್ಲಿ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ಎದುರು ಟೆಸ್ಟ್ ಸರಣಿಗಳು ನಡೆದ್ದಿದ್ದವು. ಜೀವ ಸುರಕ್ಷಾ ವಿಧಾನದಲ್ಲಿ ನಡೆದ ಪಂದ್ಯಗಳಿಗೆ ಪ್ರೇಕ್ಷಕರಿಗೆ ಅವಕಾಶ ಇರಲಿಲ್ಲ.

‘ಈ ವರ್ಷದ ಬೇಸಿಗೆಯಲ್ಲಿ ಅತ್ಯುತ್ತಮ ಪಂದ್ಯಗಳಿಗೆ ಸಾಕ್ಷಿಯಾದ ಸರಣಿಗಳಿಗೆ ನಾವು ಆತಿಥ್ಯ ವಹಿಸಿದ್ದೇವೆ. ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಗಳನ್ನು ಮನೆಯಲ್ಲೇ ಇದ್ದು ಆಸ್ವಾದಿಸಿದ್ದಾರೆ. ಮುಂದಿನ ವರ್ಷ ಭಾರತದ ಎದುರಿನ ಟೆಸ್ಟ್‌ ಸರಣಿ ಸೇರಿದಂತೆ ಅನೇಕ ಕ್ರಿಕೆಟ್ ಚಟುವಟಿಕೆ ದೇಶದಲ್ಲಿ ನಡೆಯಲಿದೆ. ಪುರುಷ ಮತ್ತು ಮಹಿಳಾ ತಂಡಗಳಿಗೆ ಏಕದಿನ ಸರಣಿ, ಅಂಧರ ಸರಣಿ ಮುಂತಾದವುಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಈ ಪೈಕಿ ಭಾರತದ ಎದುರಿನ ಸರಣಿ ಮಹತ್ವದ್ದು‘ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ಟಾಮ್ ಹ್ಯಾರಿಸನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತದ ಎದುರಿನ ಸರಣಿಯೊಂದಿಗೆ ಬೇಸಿಗೆ ಕಾಲದ ಕ್ರಿಕೆಟ್‌ಗೆ ಇಂಗ್ಲೆಂಡ್‌ನಲ್ಲಿ ತೆರೆ ಬೀಳಲಿದೆ. ಆ ಸರಣಿಗೂ ಮೊದಲು ಜೂನ್ 29ರಿಂದ ಜುಲೈ ನಾಲ್ಕರ ವರೆಗೆ ಶ್ರೀಲಂಕಾ ಎದುರು ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಜುಲೈ ಎಂಟರಿಂದ 20ರ ವರೆಗೆ ಪಾಕಿಸ್ತಾನ ಎದುರು ತಲಾ ಮೂರು ಏಕದಿನ ಮತ್ತು ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಏಕದಿನ ಸರಣಿಯು ವಿಶ್ವಕಪ್‌ ಸೂಪರ್ ಲೀಗ್‌ ಅಂಗವಾಗಿ ನಡೆಯಲಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್‌ ಮಹಿಳಾ ತಂಡಗಳ ನಡುವಿನ ಸರಣಿಗಳಿಗೂ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ.

2018ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ 1–4ರಲ್ಲಿ ಟೆಸ್ಟ್‌ ಸರಣಿಯನ್ನು ಸೋತಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು