ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG | ಇಂದು ಎರಡನೇ ಹಣಾಹಣಿ, ಮುಯ್ಯಿ ತೀರಿಸುವತ್ತ ವಿರಾಟ್ ಬಳಗದ ಚಿತ್ತ

Last Updated 13 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಅಹಮದಾಬಾದ್: ಏಯಾನ್ ಮಾರ್ಗನ್ ನಾಯಕತ್ವದ ಇಂಗ್ಲೆಂಡ್ ಬಳಗ ಈಗ ಆತ್ಮವಿಶ್ವಾಸದ ಆಗಸದಲ್ಲಿ ತೇಲಾಡುತ್ತಿದೆ.

ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ ಭಾರತ ತಂಡವನ್ನು ಟಿ20 ಸರಣಿಯ ಮೊದಲ ಪಂದ್ಯದಲ್ಲಿಯೇ ಮಣಿಸಿರುವ ಖುಷಿಯಲ್ಲಿ ಮಾರ್ಗನ್ ಪಡೆ ಇದೆ. ಅದೇ ಭರದಲ್ಲಿ ಭಾನುವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿಯೂ ಜಯದ ಕೇಕೆ ಹಾಕುವ ಉತ್ಸಾಹದಲ್ಲಿದೆ.

ಇತ್ತ ಆತಿಥೇಯರ ಬಳಗದಲ್ಲಿ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸುವ ಕುರಿತು ಚಿಂತನ–ಮಂಥನಗಳು ನಡೆದಿವೆ. ಮೊದಲ ಪಂದ್ಯದಲ್ಲಿ ಆಡಿದ ಬ್ಯಾಟ್ಸ್‌ಮನ್‌ಗಳಿಗೆ ಮತ್ತೊಂದು ಅವಕಾಶ ಕೊಡುವ ಸಾಧ್ಯತೆ ಇದೆ. ಕೆ.ಎಲ್.ರಾಹುಲ್ ಮತ್ತು ಶಿಖರ್ ಧವನ್ ಈ ಪಂದ್ಯದಲ್ಲಿಯೂ ಇನಿಂಗ್ಸ್‌ ಆರಂಭಿಸಬಹುದು. ಮೊದಲ ‍ಪಂದ್ಯದಲ್ಲಿ ಸೊನ್ನೆ ಸುತ್ತಿದ್ದ ವಿರಾಟ್ ತಮ್ಮ ಲಯಕ್ಕೆ ಮರಳಿದರೆ ತಂಡದ ಗೆಲುವಿನ ಸಾಧ್ಯತೆ ಹೆಚ್ಚಾಗುತ್ತದೆ. ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಮತ್ತು ಹಾರ್ದಿಕ್ ಪಾಂಡ್ಯ ಉತ್ತಮ ಲಯದಲ್ಲಿದ್ದಾರೆ.

ಜೋಫ್ರಾ ಬೌಲಿಂಗ್‌ನಲ್ಲಿ ರಿವರ್ಸ್‌ ಸ್ಕೂಪ್ ಶಾಟ್‌ನಲ್ಲಿ ಸಿಕ್ಸರ್ ಬಾರಿಸಿ ಗಮನ ಸೆಳೆದ ರಿಷಭ್ ಮತ್ತು ಅರ್ಧಶತಕ ಬಾರಿಸಿದ ಶ್ರೇಯಸ್ ಅವರಿಂದಾಗಿ ತಂಡವು ಸಾಧಾರಣ ಮೊತ್ತ ಗಳಿಸಿತ್ತು. ಹಾರ್ದಿಕ್ ಕೂಡ 19 ರನ್ ಗಳಿಸಿದರು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ’ಸ್ಪಿನ್‌ ಪಿಚ್‌‘ನಲ್ಲಿ ಇಂಗ್ಲೆಂಡ್‌ ಬೌಲರ್‌ಗಳನ್ನು ಎದುರಿಸುವಲ್ಲಿ ಎಡವಿದ್ದರು.

ಮೊದಲ ಪಂದ್ಯದಲ್ಲಿ ಈ ಅಂಗಳದಲ್ಲಿ ವೇಗಿ ಜೋಫ್ರಾ ಆರ್ಚರ್ ಮಿಂಚಿದ್ದರು. ತಮ್ಮ ಸ್ಲೋ ಎಸೆತಗಳ ಮೂಲಕವೇ ಮೂರು ವಿಕೆಟ್ ಕಿತ್ತು ಆತಿಥೇಯರಿಗೆ ಆಘಾತ ನೀಡಿದ್ದರು. ಮಾರ್ಕ್ ವುಡ್ ಮತ್ತು ಸ್ಪಿನ್ನರ್ ರಶೀದ್ ಕೂಡ ಅವರಿಗೆ ತಕ್ಕ ಜೊತೆ ನೀಡಿದ್ದರು. ಹೊಸ ಚೆಂಡಿನ ಹೊಳಪು ಮಾಸುವಂತೆ ಬ್ಯಾಟ್‌ ಬೀಸುವ ಲಯಕ್ಕೆ ಭಾರತದ ಆರಂಭಿಕ ಜೋಡಿ ಮರಳಿದರೆ ನಂತರದ ಬ್ಯಾಟಿಂಗ್ ಕ್ರಮಾಂಕದ ಆಟ ಕಳೆಗಟ್ಟಬಹುದು.

ಬೌಲಿಂಗ್ ಪಡೆಯಲ್ಲಿ ಬದಲಾವಣೆಯ ಸಾಧ್ಯತೆ ಕಡಿಮೆ ಇದೆ. ಅಕ್ಷರ್ ಪಟೇಲ್, ಶಾರ್ದೂಲ್, ಭುವನೇಶ್ವರ್ ಮತ್ತು ವಾಷಿಂಗ್ಟನ್ ಸುಂದರ್ ಅವರು ಬ್ಯಾಟಿಂಗ್‌ ಕೂಡ ಚೆನ್ನಾಗಿ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಯಜುವೇಂದ್ರ ಚಾಹಲ್ ಮಾತ್ರ ತಮ್ಮ ಎಂದಿನ ಲಯಕ್ಕೆ ಮರಳುವ ಅಗತ್ಯವಿದೆ.

ಟಾಸ್ ಗೆಲುವು ಕೂಡ ಪ್ರಮುಖ ಪಾತ್ರ ವಹಿಸಲಿದೆ. ರಾತ್ರಿ 8 ಗಂಟೆಯ ನಂತರ ಇಬ್ಬನಿ ಹನಿಗಳಿಂದಾಗಿ ಹಸಿಯಾಗುವ ಚೆಂಡಿನ ಮೇಲೆ ಹಿಡಿತ ಸಾಧಿಸುವ ಸವಾಲು ಬೌಲರ್‌ಗಳಿಗೆ ಇರುತ್ತದೆ. ಆದ್ದರಿಂದ ಟಾಸ್ ಗೆದ್ದವರು ಮೊದಲು ಫೀಲ್ಡಿಂಗ್ ಮಾಡುವ ಸಾಧ್ಯತೆಯೇ ಹೆಚ್ಚು. ಮಾರ್ಗನ್ ಬಳಗವು ಪ್ರಥಮ ಪಂದ್ಯದಲ್ಲಿ ಇದೇ ತಂತ್ರ ಅನುಸರಿಸಿ ಯಶಸ್ವಿಯಾಗಿತ್ತು.
*
ಈ ಪಿಚ್‌ನಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕು ಎಂಬುದನ್ನು ಶ್ರೇಯಸ್ ಅಯ್ಯರ್ ತೋರಿಸಿಕೊಟ್ಟಿದ್ದಾರೆ. ಫುಟ್‌ವರ್ಕ್‌ ಪ್ರಮುಖ ಪಾತ್ರ ವಹಿಸುತ್ತದೆ.
-ವಿರಾಟ್ ಕೊಹ್ಲಿ, ಭಾರತ ತಂಡದ ನಾಯಕ

**
ತಂಡಗಳು: ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆ.ಎಲ್‌. ರಾಹುಲ್, ರಿಷಭ್ ಪಂತ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಯಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ನವದೀಪ್ ಸೈನಿ.

ಇಂಗ್ಲೆಂಡ್: ಏಯಾನ್ ಮಾರ್ಗನ್ (ನಾಯಕ), ಜೇಸನ್ ರಾಯ್, ಜಾಸ್ ಬಟ್ಲರ್, ಬೆನ್ ಸ್ಟೋಕ್ಸ್‌, ಜಾನಿ ಬೆಸ್ಟೊ, ಡೇವಿಡ್ ಮಲಾನ್, ಮೋಯಿನ್ ಅಲಿ, ಸ್ಯಾಮ್ ಕರನ್, ಟಾಮ್ ಕರನ್, ಸ್ಯಾಮ್ ಬಿಲಿಂಗ್ಸ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್, ಜೋಫ್ರಾ ಆರಚರ್, ಮಾರ್ಕ್ ವುಡ್, ರೀಸ್ ಟಾಪ್ಲಿ.

ಪಂದ್ಯ ಆರಂಭ: ರಾತ್ರಿ 7

ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT