ಗುರುವಾರ , ಏಪ್ರಿಲ್ 15, 2021
21 °C
ಜಾಹೀರಾತಿನ ವಿಷಯ

ಭಾರತ ತಂಡವಿಲ್ಲದ ವಿಶ್ವಕಪ್‌ ಫೈನಲ್‌; ಸ್ಟಾರ್‌ ಸ್ಫೋರ್ಟ್ಸ್‌ಗೆ ₹15 ಕೋಟಿ ನಷ್ಟ?!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಐಸಿಸಿ ವಿಶ್ವಕಪ್‌ ಟೂರ್ನಿಯಿಂದ ಭಾರತವು ಹೊರಗುಳಿದ ಪರಿಣಾಮ ಸ್ಟಾರ್‌ ಸ್ಪೋರ್ಟ್ಸ್ ತನ್ನ ಆದಾಯದಲ್ಲಿ ₹10 ಕೋಟಿಯಿಂದ ₹15 ಕೋಟಿಯಷ್ಟು ಕಳೆದುಕೊಳ್ಳುವ ಸಾಧ್ಯತೆಯಿದೆ. 

ಭಾರತವು ಜುಲೈ10 ರಂದು ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 18 ರನ್‌ಗಳಿಂದ ಸೋತು ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ನಿರಾಶೆಗೊಳಿಸಿತು. ಭಾರತ ವಿಶ್ವಕಪ್‌ ಫೈನಲ್‌ನಲ್ಲಿ ಆಡಿದ್ದರೆ ಸ್ಟಾರ್ ಸ್ಪೋರ್ಟ್ಸ್, ಪ್ರತಿ 10 ಸೆಕೆಂಡ್‌ ಜಾಹೀರಾತಿಗೆ ₹25 ಲಕ್ಷದಿಂದ ₹30 ಲಕ್ಷದವರೆಗೂ ಗಳಿಸುತ್ತಿತ್ತು. ಆದರೆ, ಸದ್ಯದ ಸ್ಥಿತಿಯಲ್ಲಿ ಕೊನೇ ಕ್ಷಣದ ಜಾಹೀರಾತುಗಳಿಗೆ ₹15 ರಿಂದ ₹17 ಲಕ್ಷದವರೆಗೆ ಪಡೆಯಬಹುದು ಎಂಬ ನಿರೀಕ್ಷೆಯಲ್ಲಿದೆ. 

2019ರ ಐಸಿಸಿ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ ಪಂದ್ಯಗಳ ಅಧಿಕೃತ ಪ್ರಸಾರದ ಹಕ್ಕು ಹೊಂದಿರುವ ಸ್ಟಾರ್‌ ಸ್ಫೋರ್ಟ್ಸ್‌ ವಾಹಿನಿ, ಟಿವಿ ಜಾಹೀರಾತಿನ ಮೂಲಕ ₹1,200 ಕೋಟಿಯಿಂದ ₹1,500 ಕೋಟಿಯವರೆಗೆ ಆದಾಯ ಗಳಿಸುವುದು ಹಾಗೂ ಹಾಟ್‌ಸ್ಟಾರ್‌ನಲ್ಲಿ ಪ್ರಸಾರದ ಮೂಲಕ ₹300 ಕೋಟಿ ಹೆಚ್ಚುವರಿ ಗಳಿಕೆ ನಿರೀಕ್ಷಿಸಿತ್ತು. ಈ ಬಗ್ಗೆ ಮಾಧ್ಯಮ ಸಂಸ್ಥೆಯೊಂದರ ಮುಖ್ಯಸ್ಥರ ಹೇಳಿಕೆಯೊಂದಿಗೆ ಲೈವ್‌ಮಿಂಟ್‌ ವರದಿ ಮಾಡಿದೆ. 

ಭಾರತ ಟೂರ್ನಿಯಿಂದ ಹೊರ ಬಂದಿದ್ದರೂ ಐಪಿಎಲ್‌ ಮತ್ತು ವಿಶ್ವಕಪ್‌ ನಿರಂತರ ಕ್ರಿಕೆಟ್‌ ಪಂದ್ಯಗಳ ಅವಧಿಯು ಬ್ರ್ಯಾಂಡ್‌ಗಳು ತಮ್ಮನ್ನು ಪ್ರಚುರಪಡಿಸಿಕೊಳ್ಳಲು ಉತ್ತಮ ಸಮಯ. ಇದರಿಂದಾಗಿ ಜಾಹೀರಾತಿನ ಪ್ರಮಾಣವೂ ಹೆಚ್ಚಿದೆ ಎಂದು ಮುಂಬೈ ಮೂಲದ ಮಾರ್ಕೆಟಿಂಗ್‌ ಮತ್ತು ಕಮ್ಯುನಿಕೇಷನ್‌ ಏಜೆನ್ಸಿ ಮುಖ್ಯಸ್ಥರು ಅಭಿಪ್ರಾಯ ಪಟ್ಟಿದ್ದಾರೆ. 

ಇದನ್ನೂ ಓದಿ: ಕಿವೀಸ್ ಪಡೆಯ ಬೆನ್ನೆಲುಬು ಕೇನ್‌ ವಿಲಿಯಮ್ಸನ್‌

ಭಾರತವು ಫೈನಲ್‌ ಪಂದ್ಯದಲ್ಲಿ ಆಡಿದ್ದರೆ, 10 ಸೆಕೆಂಡಿನ ಜಾಹೀರಾತುಗಳನ್ನು ₹30 ಲಕ್ಷ ನಿಗದಿ ಪಡಿಸುವ ಮೂಲಕ ಸ್ಟಾರ್ ಸ್ಫೋರ್ಟ್ಸ್‌ ಹೆಚ್ಚುವರಿಯಾಗಿ ₹8 ಕೋಟಿಯಿಂದ ₹10 ಕೋಟಿ ಗಳಿಸಬಹುದಿತ್ತು. 

ವಿಶ್ವಕಪ್ ಕ್ರಿಕೆಟ್‌ನ ಪಂದ್ಯದಲ್ಲಿ ಜಾಹೀರಾತಿಗಾಗಿ ಒಟ್ಟು 5,500 ಸೆಕೆಂಡ್‌ಗಳ ಅವಕಾಶವಿದೆ. ಫೈನಲ್‌ ಪಂದ್ಯದಲ್ಲಿ ಅಂತಿಮ ಜಾಹೀರಾತು ಬೇಡಿಕೆ ಆಧರಿಸಿ 7,000 ಸೆಕೆಂಡ್‌ಗಳ ಅವಕಾಶ ಸೃಷ್ಟಿಸಬಹುದಾಗಿದೆ. ಫೋನ್‌ ಪೇ, ಒನ್‌ಫ್ಲಸ್‌,  ಹ್ಯಾವೆಲ್ಸ್, ಅಮೆಜಾನ್, ಡ್ರೀಮ್ 11, ಎಂಆರ್‌ಎಫ್ ಟಯರ್‌ಗಳು, ಊಬರ್, ಒಪೊ, ಫಿಲಿಪ್ಸ್, ಸಿಯೆಟ್‌  ಟಯರ್, ಸ್ವಿಗ್ಗಿ, ಏರ್‌ಟೆಲ್, ವೊಡಾಫೋನ್, ನೆಟ್‌ಫ್ಲಿಕ್ಸ್, ಪೈಸಾಬಜಾರ್ ಮತ್ತು ಐಸಿಐಸಿಐ ಲೊಂಬಾರ್ಡ್ ಒಳಗೊಂಡಂತೆ 40 ಕಂಪನಿಗಳೊಂದಿಗೆ ಸ್ಟಾರ್‌ ಜಾಹೀರಾತು ಒಪ್ಪಂದ ಮಾಡಿಕೊಂಡಿದೆ.

ಇದನ್ನೂ ಓದಿ: ‘ಕ್ರಿಕೆಟ್‌ ಜಾಗರಣೆ’ಗೆ ಕಿವೀಸ್‌ ಸಜ್ಜು

ಭಾರತೀಯ ದೂರದರ್ಶನ ವೀಕ್ಷಣೆಯ ಸಮಯಕ್ಕೆ ಅನುಗುಣವಾಗಿ ಇಂಗ್ಲೆಂಡ್‌ನಲ್ಲಿ ಪಂದ್ಯವು ನಡೆದಿದೆ ಹಾಗೂ ಭಾರತ ತಂಡದ ಪಂದ್ಯಗಳು ಬಹುತೇಕ ವಾರಾಂತ್ಯದಲ್ಲಿಯೇ ನಿಗದಿಯಾಗಿದ್ದವು. ಈ ಮೂಲಕ ವೀಕ್ಷಕರ ಸಂಖ್ಯೆ ಹೆಚ್ಚಿದ್ದು, ಜಾಹಿರಾತು ಆದಾಯದಲ್ಲಿಯೂ ಹೆಚ್ಚಳಕ್ಕೆ ಅವಕಾಶವಾಗಿದೆ.  

2015ರ ವಿಶ್ವಕಪ್‌ ಪಂದ್ಯಗಳನ್ನು ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರ ಮಾಡಿದ್ದರೂ, ಜಾಹೀರಾತಿನ ಮೂಲಕ ಹಣಗಳಿಸಿರಲಿಲ್ಲ.

ಇದನ್ನೂ ಓದಿ: 7ನೇ ಕ್ರಮಾಂಕದಲ್ಲಿ ಧೋನಿ ಆಡಿದ್ದೇಕೆ? ಉತ್ತರಿಸಿದ್ದಾರೆ ಕೋಚ್ ರವಿಶಾಸ್ತ್ರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು