ಸೋಮವಾರ, ಮೇ 23, 2022
21 °C
ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಎದುರಿನ ಪಂದ್ಯ ಇಂದು; ವಾರ್ನರ್, ಜಾನಿ ಬೆಸ್ಟೊ ಅನುಪಸ್ಥಿತಿ

ಸನ್‌ರೈಸರ್ಸ್‌ಗೆ ‘ಪ್ಲೇ ಆಫ್‌’ ಕನಸು

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಶನಿವಾರ ರಾತ್ರಿ ನಗರದಲ್ಲಿ ಮಳೆ ಸುರಿಯದಿರಲಿ’ ಎಂದು  ಕೇನ್ ವಿಲಿಯಮ್ಸನ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಪ್ರಾರ್ಥನೆ ಮಾಡುತ್ತಿದೆ.

ಏಕೆಂದರೆ ಹೈದರಾಬಾದ್ ತಂಡಕ್ಕೆ ಇಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಎದುರಿನ ಪಂದ್ಯದಲ್ಲಿ ಗೆಲ್ಲುವುದು ಅತ್ಯಂತ ಮುಖ್ಯವಾಗಿದೆ. ಗುರುವಾರ ರಾತ್ರಿ ಮುಂಬೈ ಇಂಡಿಯನ್ಸ್‌ ವಿರುದ್ಧ ನಡೆದಿದ್ದ ರೋಚಕ ಪಂದ್ಯದ ಸೂಪರ್ ಓವರ್‌ನಲ್ಲಿ ಹೈದರಾಬಾದ್ ಸೋತಿತ್ತು. ಮುಂಬೈ  ತಂಡವು ಎರಡನೇ ಸ್ಥಾನಕ್ಕೆ ಜಿಗಿದಿತ್ತು.

ಸನ್‌ ರೈಸರ್ಸ್‌ ತಂಡವು 13 ಪಂದ್ಯಗಳಿಂದ 12 ಅಂಕಗಳಿಸಿದೆ. ಸದ್ಯ ನಾಲ್ಕನೇ ಸ್ಥಾನದಲ್ಲಿದೆ. ಆದರೆ ಈ ಸ್ಥಾನಕ್ಕಾಗಿ ಅಪಾರ ಪೈಪೋಟಿ ಇದೆ. ಈ ಸ್ಥಾನಕ್ಕೇರುವ ತಂಡ ಪ್ಲೇ ಆಫ್‌ ಪ್ರವೇಶಿಸಲಿದೆ. ಆದ್ದರಿಂದ ಆರ್‌ಸಿಬಿ ಎದುರಿನ ಕೊನೆಯ ಲೀಗ್ ಪಂದ್ಯದಲ್ಲಿ ಗೆಲ್ಲುವ ಒತ್ತಡದಲ್ಲಿ ಕೇನ್ ಬಳಗವಿದೆ.

ಹೋದ ಮಂಗಳವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧದ  ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಉಭಯ ತಂಡಗಳು ತಲಾ ಒಂದು ಅಂಕ ಪಡೆದಿದ್ದವು. ಅದರಿಂದಾಗಿ ರಾಜಸ್ಥಾನ್ ತಂಡವು 11 ಅಂಕಗಳೊಂದಿಗೆ ಐದನೇ ಸ್ಥಾನಕ್ಕೇರಿತು. ಆ ತಂಡಕ್ಕೂ ಇನ್ನೊಂದು ಪಂದ್ಯ ಬಾಕಿಯಿದೆ.

ಆದರೆ ಆರ್‌ಸಿಬಿ ಎದುರು ಗೆದ್ದರೆ ಸನ್‌ರೈಸರ್ಸ್‌ ತಂಡವು ತನ್ನ ಉತ್ತಮ ರನ್‌ ರೇಟ್ ಆಧಾರದಲ್ಲಿಯೂ ಉಳಿದ ತಂಡಗಳನ್ನು ಹಿಂದಿಕ್ಕುವ ವಿಚಾರ ದಲ್ಲಿದೆ.  ತಂಡದಲ್ಲಿರುವ ಕರ್ನಾಟಕದ ಮನೀಷ್ ಪಾಂಡೆ ಮುಂಬೈ ಎದುರಿನ ಪಂದ್ಯದಲ್ಲಿ ಅರ್ಧಶತಕ ಹೊಡೆಧಿದ್ದರು. ಕೊನೆಯ ಎಸೆತದಲ್ಲಿ ಏಳು ರನ್‌ಗಳ ಅಗ್ಯವಿದ್ದಾಗ ಸಿಕ್ಸರ್ ಸಿಡಿಸಿ ಸಮಬಲ ಸಾಧಿಸಿದ್ದರು. ಆದರೆ ಸೂಪರ್‌ ಓವರ್‌ನಲ್ಲಿ ತಂಡ ಮುಗ್ಗರಿಸಿತ್ತು.

ಈ ಟೂರ್ನಿಯಲ್ಲಿ ಮನೀಷ್  ಮೂರು ಅರ್ಧಶತಕಗಳನ್ನು ಹೊಡೆದಿದ್ದಾರೆ. ಉತ್ತಮ ಲಯ ದಲ್ಲಿರುವ ಅವರು ತಮ್ಮ ತವರಿನ ಅಂಗಳದಲ್ಲಿಯೂ ಮಿಂಚುವ ತವಕದಲ್ಲಿದ್ದಾರೆ. ಡೇವಿಡ್ ವಾರ್ನರ್ ಮತ್ತು ಜಾನಿ ಬೆಸ್ಟೊ ಅವರ ಕೊರತೆ ಯನ್ನು ಮನೀಷ್ ತುಂಬಿದ್ದಾರೆ. ಬೌಲಿಂಗ್‌ನಲ್ಲಿ ಖಲೀಲ್ ಅಹಮದ್ ಕೂಡ ಮಿಂಚುತ್ತಿದ್ದಾರೆ. ಭುವನೇಶ್ವರ್ ಕುಮಾರ್ ಮತ್ತು ರಶೀದ್ ಖಾನ್ ಕೂಡ ಉತ್ತಮ ಬೌಲಿಂಗ್ ಮಾಡುತ್ತಿದ್ದಾರೆ.

ಆದರೆ, ಆರ್‌ಸಿಬಿಗೆ ಈ ಯಾವುದೇ ಲೆಕ್ಕಾಚಾರಗಳ ತಲೆಬಿಸಿಯೂ ಇಲ್ಲ. ಏಕೆಂದರೆ ಈ ಪಂದ್ಯದಲ್ಲಿ ಸೋತರೆ ನಷ್ಟವಿಲ್ಲ. ಗೆದ್ದರೆ ಎರಡು ಪಾಯಿಂಟ್ ಸಿಗುತ್ತದೆ. ಟೂರ್ನಿಯಲ್ಲಿ ಆಡಿದ 14ರಲ್ಲಿ ಐದನೇ ಗೆಲುವು ಸಾಧಿಸಿದ ಸಮಾಧಾನ ಸಿಗುತ್ತದೆ. ಅದಲ್ಲದೇ ಸನ್‌ರೈಸರ್ಸ್‌  ತಂಡದ ಕನಸಿಗೆ ಅಡ್ಡಗಾಲು ಹಾಕಿದಂತೆಯೂ ಆಗುತ್ತದೆ!

ತಂಡಗಳು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ಪಾರ್ಥಿವ್ ಪಟೇಲ್ (ವಿಕೆಟ್‌ಕೀಪರ್), ಎಬಿ ಡಿವಿಲಿಯರ್ಸ್, ಮಾರ್ಕಸ್ ಸ್ಟೊಯಿನಿಸ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಉಮೇಶ್ ಯಾದವ್, ಯಜುವೇಂದ್ರ ಚಾಹಲ್, ಶಿಮ್ರೊನ್ ಹೆಟ್ಮೆಯರ್, ಶಿವಂ ದುಬೆ, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಹಿಮ್ಮತ್ ಸಿಂಗ್, ಮಿಲಿಂದ್ ಕುಮಾರ್, ಗುರುಕೀರತ್ ಸಿಂಗ್ ಮಾನ್, ಹೆನ್ರಿಚ್ ಕ್ಲಾಸೆನ್, ಪವನ್ ನೇಗಿ, ವಾಷಿಂಗ್ಟನ್ ಸುಂದರ್, ಅಕ್ಷದೀಪ್ ನಾಥ್, ಪ್ರಯಾಸ್ ರೇ ಬರ್ಮನ್, ಕುಲವಂತ್ ಖೆಜ್ರೊಲಿಯಾ, ಟಿಮ್ ಸೌಥಿ.

ಸನ್‌ರೈಸರ್ಸ್‌ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ಬಾಸಿಲ್ ಥಂಪಿ, ಭುವನೇಶ್ವರ್ ಕುಮಾರ್, ದೀಪಕ್ ಹೂಡಾ, ಮನೀಷ್ ಪಾಂಡೆ, ಟಿ. ನಟರಾಜನ್, ರಿಕಿ ಭುಯ್, ಸಂದೀಪ್ ಶರ್ಮಾ, ಸಿದ್ಧಾರ್ಥ್ ಕೌಲ್, ಶ್ರೀವತ್ಸ ಗೋಸ್ವಾಮಿ, ಖಲೀಲ್ ಅಹಮದ್, ಯೂಸುಫ್ ಪಠಾಣ್, ಬಿಲ್ಲಿ ಸ್ಟಾನ್‌ಲೇಕ್, ರಶೀದ್ ಖಾನ್, ಮೊಹಮ್ಮದ್ ನಬಿ, ಶಕೀಬ್ ಅಲ್ ಹಸನ್, ವೃದ್ಧಿಮಾನ್ ಸಹಾ, ಮಾರ್ಟಿನ್ ಗಪ್ಟಿಲ್, ವಿಜಯಶಂಕರ್, ಅಭಿಷೇಕ್ ಶರ್ಮಾ, ಶಹಬಾಜ್ ನದೀಂ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು