ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್: ಕೆಕೆಆರ್‌ಗೆ ಕನ್ನಡಿಗ ಕಾರ್ಯಪ್ಪ‍

ಐಪಿಎಲ್: ರಾಜಸ್ಥಾನದಲ್ಲಿ ಸ್ಟೀವನ್ ಸ್ಮಿತ್‌ಗೆ ಅದ್ದೂರಿ ಸ್ವಾಗತ
Last Updated 17 ಮಾರ್ಚ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಕೊಡಗಿನ ಹುಡುಗ ಕೆ.ಸಿ. ಕಾರ್ಯಪ್ಪ ಮತ್ತು ಕೇರಳದ ಸಂದೀಪ್ ವರಿಯರ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಕೋಲ್ಕತ್ತ ನೈಟ್ ರೈಡರ್ಸ್‌ ತಂಡಕ್ಕೆ ಸೇರ್ಪಡೆ ಮಾಡಲಾಗಿದೆ.

ಮಧ್ಯಮವೇಗಿಗಳಾದ ಕಮಲೇಶ್ ನಾಗರಕೋಟಿ ಮತ್ತು ಶಿವಂ ಮಾವಿ ಅವರು ಗಾಯಗೊಂಡು ತಂಡದಿಂದ ಹೊರನಡೆದಿದ್ದಾರೆ. ಅವರ ಸ್ಥಾನಕ್ಕೆ ಸ್ಪಿನ್ನರ್ ಕಾರ್ಯಪ್ಪ ಮತ್ತು ಮಧ್ಯಮವೇಗಿ ಸಂದೀಪ್ ಸ್ಥಾನ ಪಡೆದಿದ್ದಾರೆ.

ಈಚೆಗೆ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಗೆದ್ದಿದ್ದ ಕರ್ನಾಟಕ ತಂಡದಲ್ಲಿ ಕಾರ್ಯಪ್ಪ ಆಡಿದ್ದರು. ಆರು ವಿಕೆಟ್ ಕಬಳಿಸಿದ್ದರು. 24 ವರ್ಷದ ಕಾರ್ಯಪ್ಪ ಲೆಗ್‌ಸ್ಪಿನ್ನರ್ ಆಗಿದ್ದಾರೆ. ಈ ಮೊದಲು ಅವರು ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದಲ್ಲಿ ಆಡಿದ್ದರು. ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯಲ್ಲಿ ಅವರು ಬಿಜಾಪುರ ಬುಲ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

28 ವರ್ಷದ ಸಂದೀಪ್ ದೇಶಿ ಕ್ರಿಕೆಟ್‌ನಲ್ಲಿ ಕೇರಳ ತಂಡದಲ್ಲಿ ಆಡುತ್ತಿದ್ದಾರೆ. ಅವರು ಈಚೆಗೆ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಎಂಟು ವಿಕೆಟ್ ಗಳಿಸಿದ್ದರು. ಈ ಮೊದಲು ಅವರು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಆಡಿದ್ದರು.

ಮಾರ್ಚ್ 24ರಂದು ನೈಟ್‌ ರೈಡರ್ಸ್‌ ತಂಡವು ಈ ಬಾರಿಯ ತನ್ನ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ವಿರುದ್ಧ ಆಡಲಿದೆ.

‌ಜೈಪುರಕ್ಕೆ ಬಂದಿಳಿದ ಸ್ಟೀವ್ ಸ್ಮಿತ್

ಆಸ್ಟ್ರೇಲಿಯಾದ ಕ್ರಿಕೆಟಿಗ ಸ್ಟೀವ್ ಸ್ಮಿತ್ ಅವರು ರಾಜಸ್ಥಾನ ರಾಯಲ್ಸ್‌ ತಂಡದಲ್ಲಿ ಆಡಲು ಭಾನುವಾರ ಜೈಪುರಕ್ಕೆ ಬಂದಿಳಿದರು.

ಹೋದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಚೆಂಡು ವಿರೂಪಗೊಳಿಸಿದ್ದ ಪ್ರಕರಣದಲ್ಲಿ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರ ಮೇಲೆ ಐಸಿಸಿಯು ಒಂದು ವರ್ಷ ನಿಷೇಧ ಹೇರಿತ್ತು. ಇನ್ನು ಕೆಲವೇ ದಿನಗಳಲ್ಲಿ ಅವರ ಶಿಕ್ಷೆ ಪೂರ್ಣಗೊಳ್ಳಲಿದೆ. ಅವರು ಮೇ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಬಳಗದಲ್ಲಿ ಆಡಲು ಉತ್ಸುಕರಾಗಿದ್ದಾರೆ. ಅದಕ್ಕೂ ಮುನ್ನ ಐಪಿಎಲ್‌ನಲ್ಲಿ ಮಿಂಚುವ ಇರಾದೆಯಲ್ಲಿದ್ದಾರೆ.

‘ಸ್ಮಿತ್‌ಗೆ ಉತ್ತಮ ಆಡಬೇಕು ಎನ್ನುವ ಹಸಿವು ಇದೆ. ತಮ್ಮ ಆಟದ ವೈಭವವನ್ನು ಮತ್ತೊಮ್ಮೆ ತೋರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದರಿಂದ ತಂಡಕ್ಕೆ ಉತ್ತಮವಾಗಲಿದೆ’ ಎಂದು ರಾಯಲ್ಸ್ ತಂಡದ ಪ್ರಚಾರ ರಾಯಭಾರಿ ಡೇವಿಡ್ ವಾರ್ನರ್ ಹೇಳಿದ್ದಾರೆ.

ಸ್ಮಿತ್ ಅವರು ಭಾರತಕ್ಕೆ ಬರುವ ಮುನ್ನ ದುಬೈಗೆ ತೆರಳಿದ್ದರು. ಅವರೊಂದಿಗೆ ಡೇವಿಡ್ ವಾರ್ನರ್ ಕೂಡ ಇದ್ದರು. ಅಲ್ಲಿ ಪಾಕ್ ವಿರುದ್ಧ ಸರಣಿ ಆಡಲಿರುವ ಆಸ್ಟ್ರೇಲಿಯಾ ತಂಡದೊಂದಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದರು.

‘ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಅವರ ಆಹ್ವಾನದ ಮೇರೆಗೆ ಅಲ್ಲಿಗೆ ತೆರಳಿದ್ದೆವು. ಬಹಳ ವರ್ಷಗಳ ನಂತರ ತವರುಮನೆಯ ಪ್ರೀತಿಯಲ್ಲಿ ಮಿಂದೆದ್ದ ಅನುಭವ ಸಿಕ್ಕಿತು’ ಎಂದು ಸ್ಮಿತ್ ತಿಳಿಸಿದ್ದಾರೆ.

ಐಪಿಎಲ್‌ ನ ಮೊದಲ ಮೂರು ಪಂದ್ಯಗಳಲ್ಲಿ ರಾಯಲ್ಸ್‌ ತಂಡಕ್ಕೆ ಆ್ಯಷ್ಟನ್ ಟರ್ನರ್ ಅಲಭ್ಯರಾಗಿದ್ದಾರೆ. ಈಚೆಗೆ ಭಾರತದ ವಿರುದ್ಧದ ಏಕದಿನ ಪಂದ್ಯದಲ್ಲಿ ಟರ್ನರ್ ಮಿಂಚಿನ ಬ್ಯಾಟಿಂಗ್ ಮಾಡಿ ಆಸ್ಟ್ರೇಲಿಯಾದ ಗೆಲುವಿಗೆ ಕಾರಣರಾಗಿದ್ದರು.

ಡೇವಿಡ್ ವಾರ್ನರ್ ಕೂಡ ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ಮರಳಿದ್ದಾರೆ. ಹೋದ ವರ್ಷದ ಆವೃತ್ತಿಯಲ್ಲಿ ಅವರು ಆಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT