ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

DC vs RCB: ಡೆಲ್ಲಿ ಕ್ಯಾಪಿಟಲ್ಸ್‌–ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿ ಇಂದು

ವಿರಾಟ್‌–ಅಯ್ಯರ್‌ಗೆ ಸತ್ವಪರೀಕ್ಷೆ
Last Updated 5 ಅಕ್ಟೋಬರ್ 2020, 2:44 IST
ಅಕ್ಷರ ಗಾತ್ರ

ದುಬೈ: ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರ ಸಂಜೆಯಿಂದ ವಿರಾಟ್ ಕೊಹ್ಲಿ ಆಟದ ಕುರಿತ ಗುಣಗಾನ ಮುಗಿಲುಮುಟ್ಟಿದೆ. ಈ ಸಲದ ಐಪಿಎಲ್ ಟೂರ್ನಿಯ ಪಂದ್ಯಗಳಲ್ಲಿ ಅಧಿಕಾರಯುತ ಜಯ ಸಾಧಿಸುತ್ತಿರುವ ಕೊಹ್ಲಿ ಬಳಗವೇ ‘ಕಪ್’ ಗೆಲ್ಲುತ್ತದೆ ಎಂಬ ಭಾವನೆ ಗಟ್ಟಿಯಾಗುತ್ತಿದೆ.

ತಂಡವು ಇದುವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿರುವುದೇ ಅದಕ್ಕೆ ಕಾರಣ. ಅದರಲ್ಲೂ ರಾಜಸ್ಥಾನ ರಾಯಲ್ಸ್ ಎದುರು ಅರ್ಧಶತಕ ಗಳಿಸಿದ ಕೊಹ್ಲಿಯು ಫಾರ್ಮ್‌ಗೆ ಮರಳಿರುವುದು ತಂಡದ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಆದರೆ ಇದೀಗ ತಂಡದ ಮುಂದೆ ಕಠಿಣ ಸವಾಲು ಇದೆ.

ಸೋಮವಾರ ಸಂಜೆ ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಎದುರು ವಿರಾಟ್ ಬಳಗದ ಸತ್ವಪರೀಕ್ಷೆ ನಡೆಯುವುದು ಖಚಿತ. ಈ ಟೂರ್ನಿಯಲ್ಲಿ ಡೆಲ್ಲಿ ಮತ್ತು ಬೆಂಗಳೂರು ತಂಡದ ಸಾಧನೆ ಸಮಬಲವಾಗಿದೆ. ಉಭಯ ತಂಡಗಳು ತಲಾ ಆರು ಪಾಯಿಂಟ್ ಗಳಿಸಿವೆ. ರನ್‌ರೇಟ್‌ನಲ್ಲಿ ಆರ್‌ಸಿಬಿಗಿಂತ ಡೆಲ್ಲಿ ಮುಂದಿದೆ. ಈ ಪಂದ್ಯದಲ್ಲಿ ಗೆದ್ದರೆ ಆರ್‌ಸಿಬಿಗೆ ಅಗ್ರಸ್ಥಾನಕ್ಕೇರುವ ಅವಕಾಶ ಇದೆ.

ಡೆಲ್ಲಿ ತಂಡದ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ಶಿಖರ್ ಧವನ್, ರಿಷಭ್ ಪಂತ್ ಅವರ ಆಟದಿಂದಾಗಿ ಕಳೆದ ಪಂದ್ಯದಲ್ಲಿ ತಂಡವು 228 ರನ್ ಗಳಿಸಿತ್ತು. ಮಾರ್ಕಸ್ ಸ್ಟೋಯಿನಿಸ್ ಮತ್ತು ಶಿಮ್ರೊನ್ ಹೆಟ್ಮೆಯರ್ ರನ್‌ಗಳ ಕಾಣಿಕೆ ನೀಡಬಲ್ಲವರು. ಬೌಲಿಂಗ್ ವಿಭಾಗದಲ್ಲಿ ಕಗಿಸೊ ರಬಾಡ, ಎನ್ರಿಚ್ ನೋರ್ಟಿಯೆ ಮತ್ತು ಸ್ಪಿನ್ನರ್‌ ಆರ್. ಅಶ್ವಿನ್ ರನ್‌ಗಳನ್ನು ನಿಯಂತ್ರಿಸುವಲ್ಲಿ ಯಶಸ್ಸು ಸಾಧಿಸಿದರೆ ಎದುರಾಳಿಗಳ ಮೇಲೆ ಒತ್ತಡ ಹೆಚ್ಚುತ್ತದೆ. ಏಕೆಂದರೆ ಆರ್‌ಸಿಬಿಯ ಆರಂಭಿಕ ಬ್ಯಾಟ್ಸ್‌ಮನ್, ಕರ್ನಾಟಕದ ದೇವದತ್ತ ಪಡಿಕ್ಕಲ್ ಈಗಾಗಲೇ ಮೂರು ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಪದಾರ್ಪಣೆಯ ಐಪಿಎಲ್‌ನಲ್ಲಿ 20 ವರ್ಷದ ದೇವದತ್ತ ತಮ್ಮ ನಾಯಕನ ಮನಗೆದ್ದಿದ್ದಾರೆ. ಆ್ಯರನ್ ಫಿಂಚ್, ಎಬಿ ಡಿವಿಲಿಯರ್ಸ್ ಕೂಡ ಉತ್ತಮ ಲಯದಲ್ಲಿದ್ದಾರೆ. ಈ ಪಂದ್ಯದಲ್ಲಿಯೂ ಪಾರ್ಥಿವ್ ಪಟೇಲ್‌ಗೆ ಅವಕಾಶ ಕೊಡುವ ಸಾಧ್ಯತೆ ಕಡಿಮೆ ಇದೆ.

ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ ಗಳಿಸಿರುವ ಸ್ಪಿನ್ನರ್ ಯಜುವೇಂದ್ರ ಚಾಹಲ್, ನವದೀಪ್ ಸೈನಿ, ಶ್ರೀಲಂಕಾದ ಇಸುರು ಉಡಾನ, ವಾಷಿಂಗ್ಟನ್ ಸುಂದರ್ ಮತ್ತು ಶಿವಂ ದುಬೆ ಅವರ ಮೇಲೆ ಬೌಲಿಂಗ್ ಪಡೆ ಅವಲಂಬಿತವಾಗಿದೆ. ಡೆಲ್ಲಿ ತಂಡದ ವಿಕೆಟ್‌ಗಳನ್ನು ಎಷ್ಟು ಬೇಗ ಕಬಳಿಸುತ್ತಾರೋ ಅಷ್ಟು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT