ಭಾನುವಾರ, ಮೇ 9, 2021
26 °C

IPL 2021: ಮಗದೋರ್ವ ಡೆಲ್ಲಿ ಆಟಗಾರನಿಗೆ ಕೋವಿಡ್ ಸೋಂಕು ದೃಢ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗದ ಬೌಲರ್ ಎನ್ರಿಚ್ ನಾಕಿಯಾ ಅವರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಪ್ರಸಕ್ತ ಸಾಗುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿ ಮೇಲೆ ಮಗದೊಮ್ಮೆ ಕರಿನೆರಳು ಬಿದ್ದಿದೆ.

ಕ್ವಾರಂಟೈನ್ ವೇಳೆಯಲ್ಲಿ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ನಾಕಿಯಾ ಅವರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ ಎಂಬುದನ್ನು ಮೂಲಗಳು ತಿಳಿಸಿವೆ.

ಕೋವಿಡ್ ನೆಗೆಟಿವ್ ರಿಪೋರ್ಟ್‌ನೊಂದಿಗೆ ಎನ್ರಿಚ್ ಮುಂಬೈಗೆ ಬಂದಿಳಿದಿದ್ದರು. ಆದರೆ ದುರದೃಷ್ಟವಶಾತ್ ಕ್ವಾರಂಟೈನ್ ಅವಧಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದೆ.

ಬಿಸಿಸಿಐ ಮಾರ್ಗಸೂಚಿಯ ಪ್ರಕಾರ ಐಪಿಎಲ್‌ನಲ್ಲಿ ಭಾಗವಹಿಸುವ ಪ್ರತಿಯೊಬ್ಬ ಆಟಗಾರನೂ, ಸಹಾಯಕ ಸಿಬ್ಬಂದಿಗಳು ಕಡ್ಡಾಯವಾಗಿ ಏಳು ದಿನಗಳ ಕಾಲ ಪ್ರತ್ಯೇಕವಾಸದಲ್ಲಿರಬೇಕು. ಈ ಸಂದರ್ಭದಲ್ಲಿ ಕೋವಿಡ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕೋವಿಡ್ ಪರೀಕ್ಷೆಯಲ್ಲಿ ಫಲಿತಾಂಶ ನೆಗೆಟಿವ್ ಆದರೆ ಮಾತ್ರ ಬಯೋ ಬಬಲ್ ಒಳಗಡೆ ಪ್ರವೇಶಿಸಲು ಅವಕಾಶವಿರುತ್ತದೆ.

ದಕ್ಷಿಣ ಆಫ್ರಿಕಾದ ವೇಗಿ ನಾಕಿಯಾ ಕೊನೆಯದಾಗಿ ಪಾಕಿಸ್ತಾನ ವಿರುದ್ಧ ಏಕದಿನ ಸರಣಿಯಲ್ಲಿ ಭಾಗವಹಿಸಿದ್ದರು. ಮೊದಲೆರಡು ಪಂದ್ಯಗಳ ಬಳಿಕ ಐಪಿಎಲ್‌ನಲ್ಲಿ ಆಡುವುದಕ್ಕಾಗಿ ಭಾರತಕ್ಕೆ ಪ್ರಯಾಣ ಬೆಳೆಸಿದ್ದರು.

ಐಪಿಎಲ್ ಆರಂಭಕ್ಕೂ ಮೊದಲು ಡೆಲ್ಲಿ ತಂಡದ ಆಟಗಾರ ಅಕ್ಷರ್ ಪಟೇಲ್ ಅವರಿಗೂ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು.

ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆಲುವು ದಾಖಲಿಸಿರುವ ಡೆಲ್ಲಿ, ಗುರುವಾರ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸವಾಲನ್ನು ಎದುರಿಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು