ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬಿಕೆ ಇರಿಸಿದ ಮ್ಯಾಕ್ಸ್‌ವೆಲ್; ಕೊನೆಯ ಓವರ್‌ ಗೇಮ್‌ ಪ್ಲ್ಯಾನ್ ವಿವರಿಸಿದ ಭರತ್

Last Updated 9 ಅಕ್ಟೋಬರ್ 2021, 7:51 IST
ಅಕ್ಷರ ಗಾತ್ರ

ದುಬೈ: ಕೊನೆಯ ಎಸೆತದಲ್ಲಿ ಯುವ ವಿಕೆಟ್ ಕೀಪರ್ ಆರಂಭಿಕ ಬ್ಯಾಟ್ಸ್‌ಮನ್ ಶ್ರೀಕರ್ ಭರತ್ ಬಾರಿಸಿದ ಸಿಕ್ಸರ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಕೊನೆಯ ಓವರ್‌ನಲ್ಲಿ ಆರ್‌ಸಿಬಿ ಗೆಲುವಿಗೆ 15 ರನ್‌ಗಳ ಅವಶ್ಯಕತೆಯಿತ್ತು. ಈ ಅತಿ ಒತ್ತಡದ ಪರಿಸ್ಥಿತಿಯಲ್ಲೂ ಸಹ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಮೇಲೆ ನಂಬಿಕೆ ಇರಿಸಿರುವುದನ್ನು ಶ್ರೀಕರ್ ಭರತ್ ವಿವರಿಸಿದ್ದಾರೆ.

'ಕೊನೆಯ ಓವರ್‌ನಲ್ಲಿ ನಾನು ಹಾಗೂ ಮ್ಯಾಕ್ಸಿ (ಮ್ಯಾಕ್ಸ್‌ವೆಲ್) ಈ ಕುರಿತು ಮಾತನಾಡುತ್ತಿದ್ದೆವು. ಚೆಂಡನ್ನು ನೋಡಿ ಬ್ಯಾಟ್ ಸರಿಯಾಗಿ ಸಂಪರ್ಕಿಸುವಂತೆ ಅವರು ನನಗೆ ಸೂಚಿಸಿದರು. ಕೊನೆಯ ಮೂರು ಎಸೆತಗಳು ಇರುವಾಗ ನಾನು ಓಡಬೇಕೇ ಬೇಡವೋ ಎಂದು ಕೇಳಿದ್ದೆ!. ಅವರು ಇಲ್ಲ, ನೀವೇ ಪಂದ್ಯವನ್ನು ಗೆಲ್ಲಿಸಬಹುದು ಎಂದು ಹೇಳಿದರು. ಇದು ನನ್ನಲ್ಲಿ ಅತೀವ ಆತ್ಮವಿಶ್ವಾಸವನ್ನು ತುಂಬಿತ್ತು' ಎಂದು ಭರತ್ ವಿವರಿಸಿದ್ದಾರೆ.

ಅಂತಿಮ ಎಸೆತದಲ್ಲಿ ಆರ್‌ಸಿಬಿ ಗೆಲುವಿಗೆ ಐದು ರನ್‌ಗಳ ಅಗತ್ಯವಿತ್ತು. ಡೆಲ್ಲಿ ವೇಗದ ಬೌಲರ್ ಆವೇಶ್ ಖಾನ್ ಕೊನೆಯ ಎಸೆತವನ್ನು ಸಿಕ್ಸರ್‌ಗಟ್ಟಿದ ಭರತ್, ರೋಚಕ ಗೆಲುವು ಒದಗಿಸಿಕೊಡಲು ನೆರವಾದರು.

'ನಾನು ಕೊನೆಯ ಓವರ್‌ ಬಗ್ಗೆ ಹೆಚ್ಚು ಚಿಂತಿತನಾಗಿರಲಿಲ್ಲ. ನರ್ವಸ್ ಕೂಡಾ ಆಗಿರಲಿಲ್ಲ. ನನ್ನ ಮುಂದಿರುವ ಒಂದು ಎಸೆತದ ಕಡೆಗೆ ಮಾತ್ರ ಗಮನ ಹರಿಸಿದ್ದೆ. ಹೆಚ್ಚು ಯೋಚಿಸುವ ಬದಲು ನಾನು ವಿಷಯಗಳನ್ನು ಸರಳವಾಗಿಡಲು ಪ್ರಯತ್ನಿಸಿದ್ದೇನೆ. ಒಂದು ತಂಡವಾಗಿ ನಾವು ಈ ಪಂದ್ಯದಲ್ಲಿ ಗೆಲುವು ದಾಖಲಿಸಲು ಯಶಸ್ವಿಯಾಗಿದ್ದೇವೆ' ಎಂದು ಹೇಳಿದರು.

'ಪ್ರಾಮಾಣಿಕವಾಗಿ ಹೇಳಬೇಕೆಂದರೆ ವೇಗದ ಬೌಲಿಂಗ್ ವಿರುದ್ಧ ಬ್ಯಾಟಿಂಗ್ ಮಾಡುವುದನ್ನು ನಾನು ಇಷ್ಟಪಡುತ್ತೇನೆ. ಈ ನಿಟ್ಟಿನಲ್ಲಿ ಭಾರತ 'ಎ' ತಂಡದ ಪರ ಆಡಿರುವುದು ನೆರವಾಗಿದೆ. ವೇಗದ ಬೌಲಿಂಗ್ ವಿರುದ್ಧ ಆಡುವುದು ನನ್ನ ಪಾಲಿಗೆ ಹೊಸತಲ್ಲ. ಈ ಸವಾಲನ್ನು ಇಷ್ಟಪಡುತ್ತೇನೆ' ಎಂದು ತಿಳಿಸಿದ್ದಾರೆ.

ಶ್ರೀಕರ್ ಭರತ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಮುರಿಯದ ನಾಲ್ಕನೇ ವಿಕೆಟ್‌ಗೆ 111 ರನ್‌ಗಳ ಜೊತೆಯಾಟ ನೀಡಿದ್ದರು. 52 ಎಸೆತಗಳನ್ನು ಎದುರಿಸಿದ ಭರತ್ 78 ರನ್ (4 ಸಿಕ್ಸರ್, 3 ಬೌಂಡರಿ) ಗಳಿಸಿ ಔಟಾಗದೆ ಉಳಿದರು. ಅತ್ತ 33 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ 51 ರನ್ (8 ಬೌಂಡರಿ) ಗಳಿಸಿ ಅಜೇಯರಾಗುಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT