ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಐಪಿಎಲ್‌ ತೊರೆದ ಭಾರತೀಯ ಅಂಪೈರ್ ನಿತಿನ್ ಮೆನನ್

Last Updated 29 ಏಪ್ರಿಲ್ 2021, 10:30 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ವಿಶ್ವ ದರ್ಜೆಯ ಅಂಪೈರ್ ನಿತಿನ್ ಮೆನನ್ ವೈಯಕ್ತಿಕ ಕಾರಣಗಳಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯನ್ನು ತೊರೆಯಲು ನಿರ್ಧರಿಸಿದ್ದಾರೆ.

ಕೋವಿಡ್ ಭೀತಿ ಹಿನ್ನೆಲೆಯಲ್ಲಿ ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಲೀಗ್‌ನಿಂದ ಆಸ್ಟ್ರೇಲಿಯಾದ ನಾಲ್ವರು ಆಟಗಾರರು ನಿರ್ಗಮಿಸಿದ್ದರು. ಇದು ಐಪಿಎಲ್ ಮೇಲೆ ಕರಿನೆರಳು ಬೀಳಲು ಕಾರಣವಾಗಿತ್ತು.

ಪತ್ನಿ ಹಾಗೂ ತಾಯಿ ಅವರಿಗೆ ಕೋವಿಡ್-19 ಸೋಂಕು ದೃಢಗೊಂಡಿರುವ ಹಿನ್ನೆಲೆಯಲ್ಲಿ ಐಪಿಎಲ್ ಬಯೋಬಬಲ್ ತೊರೆಯಲು ಮೆನನ್ ನಿರ್ಧರಿಸಿದ್ದಾರೆ ಎಂಬುದು ತಿಳಿದು ಬಂದಿದೆ.

ನಿತಿನ್ ಮೆನನ್ ಐಸಿಸಿ ಎಲೀಟ್ ಪ್ಯಾನೆಲ್ ಅಂಪೈರ್ ಪಟ್ಟಿಯಲ್ಲಿರುವ ಏಕಮಾತ್ರ ಭಾರತೀಯ ಅಂಪೈರ್ ಆಗಿದ್ದಾರೆ. ಅಲ್ಲದೆ ಇತ್ತೀಚೆಗಿನ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಣೆಗಾಗಿ ಪ್ರಶಂಸೆಗೆ ಪಾತ್ರರಾಗಿದ್ದರು.

ಹೌದು, ನಿತಿನ್ ಅವರ ಕುಟುಂಬದ ಹತ್ತಿರದ ಸದಸ್ಯರಿಗೆ ಕೋವಿಡ್-19 ದೃಢಗೊಂಡಿರುವ ಹಿನ್ನೆಲೆಯಲ್ಲಿ ಐಪಿಎಲ್ ಬಿಟ್ಟು ತೆರಳಿದ್ದಾರೆ. ಪ್ರಸ್ತುತ ಅವರು ಕರ್ತವ್ಯ ನಡೆಸುವ ಮಾನಸಿಕ ಸ್ಥಿತಿಯಲ್ಲಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿತಿನ್ ಮೆನನ್, ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬಳಿಕ ಐಪಿಎಲ್ ಟೂರ್ನಿಯನ್ನು ಅರ್ಧದಲ್ಲೇ ತೊರೆದಿರುವ ಎರಡನೇ ಭಾರತೀಯ ಎಂದೆನಿಸಿದ್ದಾರೆ.

ಏತನ್ಮಧ್ಯೆ ಆಸ್ಟ್ರೇಲಿಯಾ ಮೂಲದ ಅಂಪೈರ್ ಪಾಲ್ ರೀಫೆಲ್ ಸ್ವದೇಶಕ್ಕೆ ಮರಳಲು ಟಿಕೆಟ್ ಕಾಯ್ದಿರಿಸಿದ್ದರೂ ವಿಮಾನಯಾನ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಭಾರತದಲ್ಲೇ ಉಳಿದುಕೊಳ್ಳುವಂತಾಗಿದೆ. ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕಿರುವ ವಿಮಾನಯಾನವನ್ನು ಆಸ್ಟ್ರೇಲಿಯಾ ರದ್ದುಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT