ಮಂಗಳವಾರ, ಮೇ 11, 2021
26 °C

IPL 2021: ಕೋಲ್ಕತ್ತಗೆ ಸೋಲಿನ ಶಾಕ್ ನೀಡಿದ ಮುಂಬೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 10 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. 

ಇದರೊಂದಿಗೆ ಐಪಿಎಲ್ 2021ನೇ ಸಾಲಿನಲ್ಲಿ ಹಾಲಿ ಚಾಂಪಿಯನ್ನರು ಮೊದಲ ಗೆಲುವು ದಾಖಲಿಸಿದೆ. ಅಲ್ಲದೆ ತಾವೇಕೆ ನೈಜ ಚಾಂಪಿಯನ್ ತಂಡ ಎಂಬುದನ್ನು ಮಗದೊಮ್ಮೆ ನಿರೂಪಿಸಿದೆ. 

ಒಂದು ಹಂತದಲ್ಲಿ ಕೋಲ್ಕತ್ತ ನಿರಾಯಾಸವಾಗಿ ಗೆಲುವು ದಾಖಲಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ರಾಹುಲ್ ಚಹರ್ (27ಕ್ಕೆ 4 ವಿಕೆಟ್) ಹಾಗೂ ಕೃುಣಾಲ್ ಪಾಂಡ್ಯ (13ಕ್ಕೆ 1 ವಿಕೆಟ್) ನಿಖರ ದಾಳಿ ಸಂಘಟಿಸಿ ಪಂದ್ಯದಲ್ಲಿ ಮುಂಬೈ ತಿರುಗೇಟು ನೀಡುವಲ್ಲಿ ನೆರವಾದರು. 

ಅತ್ತ ಕೋಲ್ಕತ್ತದ ಆ್ಯಂಡ್ರೆ ರಸೆಲ್ ಐದು ವಿಕೆಟ್ ಸಾಧನೆ ಮತ್ತು ಬ್ಯಾಟಿಂಗ್‌ನಲ್ಲಿ ನಿತೀಶ್ ರಾಣಾ ಸತತ ಎರಡನೇ ಅರ್ಧಶತಕದ ಹೋರಾಟವು ವ್ಯರ್ಥವೆನಿಸಿದೆ. ಅಂತಿಮವಾಗಿ ಕೋಲ್ಕತ್ತ ಏಳು ವಿಕೆಟ್ ನಷ್ಟಕ್ಕೆ 142 ರನ್ ಗಳಿಸಲಷ್ಟೇ ಸಾಧ್ಯವಾಯಿತು. 

ಸವಾಲಿನ ಮೊತ್ತ ಬೆನ್ನತ್ತಿದ ಕೋಲ್ಕತ್ತಗೆ ಆರಂಭಿಕರಾದ ಶುಭಮನ್ ಗಿಲ್ ಹಾಗೂ ನಿತೀಶ್ ರಾಣಾ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 8.5 ಓವರ್‌ಗಳಲ್ಲೇ 72 ರನ್‌ಗಳ ಜೊತೆಯಾಟ ನೀಡಿದರು. 24 ಎಸೆತಗಳನ್ನು ಎದುರಿಸಿದ ಗಿಲ್ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 33 ರನ್ ಗಳಿಸಿದರು. 

ಅತ್ತ ನಿತೀಶ್ ರಾಣಾ 40 ಎಸೆತಗಳಲ್ಲಿ ಸತತ ಎರಡನೇ ಅರ್ಧಶತಕ ಸಾಧನೆಯನ್ನು ಮಾಡಿದರು. ಆದರೆ ಇವರಿಬ್ಬರ ಪತನದೊಂದಿಗೆ ಪಂದ್ಯ ಏಕಾಏಕಿ ಮುಂಬೈ ಪರ ವಾಲಿತ್ತು. ಇದರಲ್ಲಿ ಪ್ರಮುಖ ಪಾತ್ರ ವಹಿಸಿದರು ಮುಂಬೈ ಲೆಗ್ ಸ್ಪಿನ್ನರ್ ರಾಹುಲ್ ಚಹರ್. 

ಒಂದು ಹಂತದಲ್ಲಿ 12.4 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ಕೋಲ್ಕತ್ತ ಏಕಾಏಕಿ ಕುಸಿತವನ್ನು ಕಂಡಿತ್ತು. ಅಲ್ಲದೆ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 142 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಅಂದರೆ ಅಂತಿಮ 44 ಎಸೆತಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 38 ರನ್ ಗಳಿಸಲಷ್ಟೇ ಸಾಧ್ಯವಾಯಿತು.

28 ರನ್ ತೆತ್ತ ಚಹರ್ ನಾಲ್ಕು ವಿಕೆಟ್ ಕಬಳಿಸಿ ಮಿಂಚಿದರು. ಇವರಿಗೆ ತಕ್ಕ ಸಾಥ್ ನೀಡಿದ ಕೃುಣಾಲ್ ಪಾಂಡ್ಯ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಒಂದು ವಿಕೆಟ್ ಅಷ್ಟೇ ಪಡೆದರೂ ಕೇವಲ 13 ರನ್ ಮಾತ್ರ ಬಿಟ್ಟುಕೊಟ್ಟು ಪರಿಣಾಮಕಾರಿಯೆನಿಸಿದರು.

ಕೊನೆಯಲ್ಲಿ ಅನುಭವಿ ಬೌಲರ್‌ಗಳಾದ ಜಸ್‌ಪ್ರೀತ್ ಬೂಮ್ರಾ ಹಾಗೂ ಟ್ರೆಂಟ್ ಬೌಲ್ಟ್ ಸಾಥ್ ನೀಡುವುದರೊಂದಿಗೆ ಮುಂಬೈ ಗೆಲುವಿನ ನಗೆ ಬೀರಿತು. 19ನೇ ಓವರ್‌ನಲ್ಲಿ ಬೂಮ್ರಾ ಕೇವಲ 4 ರನ್ ಮಾತ್ರ ಬಿಟ್ಟುಕೊಟ್ಟಿದ್ದರು. ಇನ್ನೊಂದೆಡೆ ಬೌಲ್ಟ್ ಎರಡು ವಿಕೆಟ್ ಕಬಳಿಸಿದರು. 

ಕೋಲ್ಕತ್ತ ಪರ ಓಪನರ್‌ಗಳನ್ನು ಹೊರುತಪಡಿಸಿದರೆ ಇತರೆ ಯಾವ ಬ್ಯಾಟ್ಸ್‌ಮನ್‌ಗಳು ಎರಡಂಕಿಯನ್ನು ತಲುಪಲಿಲ್ಲ. 47 ಎಸೆತಗಳನ್ನು ಎದುರಿಸಿದ ರಾಣಾ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 57 ರನ್ ಗಳಿಸಿದರು. 

ಇನ್ನುಳಿದಂತೆ ರಾಹುಲ್ ತ್ರಿಪಾಠಿ (5), ನಾಯಕ ಏಯಾನ್ ಮಾರ್ಗನ್ (7), ಶಕಿಬ್ ಅಲ್ ಹಸನ್ (9), ದಿನೇಶ್ ಕಾರ್ತಿಕ್ (8), ಆಂಡ್ರೆ ರಸೆಲ್ (9), ಪ್ಯಾಟನ್ ಕಮಿನ್ಸ್ (0) ಹಾಗೂ ಹರಭಜನ್ ಸಿಂಗ್ (2*) ನಿರಾಸೆ ಮೂಡಿಸಿದರು. 

ರಸೆಲ್‌ 5 ವಿಕೆಟ್, ಮುಂಬೈ 152ಕ್ಕೆ ಆಲೌಟ್...
ಈ ಮೊದಲು ಆ್ಯಂಡ್ರೆ ರಸೆಲ್ ಮಾರಕ ದಾಳಿಗೆ ಸಿಲುಕಿದ (15ರನ್ನಿಗೆ 5 ವಿಕೆಟ್) ಮುಂಬೈ ಇಂಡಿಯನ್ಸ್ ಕೇವಲ 152 ರನ್‌‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. 

ಮುಂಬೈ ತಂಡದ ಆರಂಭ ಉತ್ತಮವಾಗಿರಲಿಲ್ಲ. ಕಳೆದ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದರೂ ಕ್ರಿಸ್ ಲಿನ್ ಅವರನ್ನು ಆಯ್ಕೆಗೆ ಪರಿಗಣಿಸಿರಲಿಲ್ಲ. ಮುಂಬೈ ತಂಜದ ಈ ಯೋಜನೆ ಫಲಿಸಲಿಲ್ಲ. ಲಿನ್ ಸ್ಥಾನಕ್ಕೆ ಆಗಮಿಸಿದ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ (2) ವೈಫಲ್ಯ ಅನುಭವಿಸಿದರು. 

ಈ ಹಂತದಲ್ಲಿ ಜೊತೆಗೂಡಿದ ನಾಯಕ ರೋಹಿತ್ ಶರ್ಮಾ ಹಾಗೂ ಇನ್ ಫಾರ್ಮ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ತಂಡವನ್ನು ಎಚ್ಚರಿಕೆಯಿಂದ ಮುನ್ನಡೆಸಿದರು. ಕೆಲವೇ ಹೊತ್ತಿನಲ್ಲಿ ಸೂರ್ಯ ತಮ್ಮ ಎಂದಿನ ಲಯಕ್ಕೆ ಮರಳಿದರು. 

ಅಲ್ಲದೆ ನಾಯಕನ ಜೊತೆಗೆ ಅಮೂಲ್ಯವಾದ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು. ಅಮೋಘ ಇನ್ನಿಂಗ್ಸ್ ಕಟ್ಟಿದ ಸೂರ್ಯಕುಮಾರ್ ಕೇವಲ 33 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. 

ಆದರೂ ಫಿಫ್ಟಿ ಬೆನ್ನಲ್ಲೇ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. 36 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 56 ರನ್ ಗಳಿಸಿದರು. ಅಲ್ಲದೆ ರೋಹಿತ್ ಜೊತೆಗೆ 76 ರನ್‌ಗಳ ಜೊತೆಯಾಟ ನೀಡಿದರು. 

ಇಶಾನ್ ಕಿಶನ್ (1) ಬೇಗನೇ ನಿರ್ಗಮಿಸಿದರು. ಇನ್ನೊಂದೆಡೆ ತೀರಾ ವಿಭಿನ್ನ ಇನ್ನಿಂಗ್ಸ್ ರೋಹಿತ್, ಪ್ಯಾಟ್ ಕಮಿನ್ಸ್ ಎಸೆದ ಇನ್ನಿಂಗ್ಸ್‌ನ 16ನೇ ಓವರ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. 32 ಎಸೆತಗಳನ್ನು ಎಧುರಿಸಿದ ರೋಹಿತ್ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 43 ರನ್ ಗಳಿಸಿದರು. 

ರೋಹಿತ್ ಪತನದ ಬೆನ್ನಲ್ಲೇ ಮುಂಬೈ ದಿಢೀರ್ ಕುಸಿತವನ್ನು ಅನುಭವಿಸಿತು. ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ದಾಳಿಗಿಳಿದ ರಸೆಲ್ ಮುಂಬೈ ಓಟಕ್ಕೆ ಪೂರ್ಣ ವಿರಾಮ ಹಾಕಿದರು. 

ಅಲ್ಲದೆ ಕೇವಲ ಎರಡು ಓವರ್‌ಗಳಲ್ಲೇ 15 ರನ್ ತೆತ್ತು ಐದು ವಿಕೆಟ್‌ಗಳ ದಾಖಲೆ ಬರೆದರು. ಇದು ಐಪಿಎಲ್‌ನಲ್ಲಿ ರಸೆಲ್ ಅವರ  ಚೊಚ್ಚಲ ಐದು ವಿಕೆಟ್ ಹಾಗೂ ಜೀವನಶ್ರೇಷ್ಠ ಬೌಲಿಂಗ್ ಸಾಧನೆಯಾಗಿದೆ. 

ಪರಿಣಾಮ ಮುಂಬೈ ತಂಡವು ಕೊನೆಯ ಐದು ಓವರ್‌ಗಳಲ್ಲಿ 38 ರನ್ನಿಗೆ ಏಳು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇನ್ನುಳಿದಂತೆ ಹಾರ್ದಿಕ್ ಪಾಂಡ್ಯ (15), ಕೀರಾನ್ ಪೊಲಾರ್ಡ್ (5), ಮಾರ್ಕೊ ಜಾನ್ಸನ್ (0), ಕೃಣಾಲ್ ಪಾಂಡ್ಯ (15), ರಾಹುಲ್ ಚಹರ್ (8) ಹಾಗೂ ಜಸ್‌ಪ್ರೀತ್ ಬೂಮ್ರಾ (0) ನಿರಾಸೆ ಮೂಡಿಸಿದರು.   

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು