ಐಪಿಎಲ್ಗೆ ನಿವೃತ್ತಿ ಘೋಷಣೆ ಟ್ವೀಟ್ ಮಾಡಿ ಅಳಿಸಿ ಹಾಕಿದ ರಾಯುಡು

ಮುಂಬೈ: ಕುತೂಹಲಕಾರಿ ಬೆಳವಣಿಗೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟರ್ ಅಂಬಟಿ ರಾಯುಡು, ಐಪಿಎಲ್ಗೆ ನಿವೃತ್ತಿ ಘೋಷಣೆ ಟ್ವೀಟ್ ಮಾಡಿ ಬಳಿಕ ಅಳಿಸಿ ಹಾಕಿರುವ ಘಟನೆ ನಡೆದಿದೆ.
ರಾಯುಡು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇದು ತಮ್ಮ ಕೊನೆಯ ಐಪಿಎಲ್ ಎಂದು ಬರೆದುಕೊಂಡಿದ್ದರು. ಅಲ್ಲದೆ ಕಳೆದ 13 ವರ್ಷಗಳಿಂದ ಎರಡು ಶ್ರೇಷ್ಠ ತಂಡಗಳ ಭಾಗವಾಗುವ ಮೂಲಕ ಅದ್ಭುತ ಸಮಯವನ್ನು ಕಳೆದಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಔಟಾಗಿ ತೆರಳುವಾಗ ಆಗಸದತ್ತ ಮುಖ ಮಾಡಿ ಮಾತನಾಡಿಕೊಂಡ ವಿರಾಟ್: ವಿಡಿಯೊ ವೈರಲ್
ಈ ಅದ್ಭುತ ಪಯಣಕ್ಕಾಗಿ ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್ಕೆಗೆ ಪ್ರಾಮಾಣಿಕವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ರಾಯುಡು ಅವರ ಮುಂದಿನ ಪಯಣಕ್ಕೆ ಶುಭ ಹಾರೈಸಿದ್ದರು.
ಆದರೆ ಅಚ್ಚರಿಯೆಂಬಂತೆ ಸ್ವಲ್ಪ ಹೊತ್ತಲ್ಲೇ ರಾಯುಡು ತಮ್ಮ ಟ್ವೀಟ್ ಅಳಿಸಿ ಹಾಕಿದ್ದಾರೆ. ಇದರಿಂದಾಗಿ ಅಭಿಮಾನಿಗಳಲ್ಲೂ ಗೊಂದಲ ಉಂಟಾಗಿದೆ.
Ambati Rayudu first announced his retirement from IPL, then deleted the tweet. #ambatirayudu pic.twitter.com/OgPSknDpup
— Aditya Kumar (@adityavaisya) May 14, 2022
ಬಳಿಕ 'ಎನ್ಡಿಟಿವಿ'ಗೆ ಸ್ಪಷ್ಟನೆ ಕೊಟ್ಟಿರುವ ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್, 'ರಾಯುಡು ನಿವೃತ್ತಿಯಾಗುತ್ತಿಲ್ಲ. ಉತ್ತಮ ಪ್ರದರ್ಶನ ನೀಡದಿರುವುದರಿಂದ ಅವರು ನಿರಾಸೆಗೊಂಡಿದ್ದರು. ಹಾಗಾಗಿ ಎಡವಟ್ಟಾಗಿ ಟ್ವೀಟ್ ಹಾಕಿದ್ದಾರೆ. ನಾನು ಅವರಿಗೆ ವಿಷಯ ವಿವರಿಸಿದ್ದೇನೆ. ಅವರು ನಿವೃತ್ತಿಯಾಗುತ್ತಿಲ್ಲ. ನಮ್ಮೊಂದಿಗೆ ಇರುತ್ತಾರೆ' ಎಂದು ಹೇಳಿದ್ದಾರೆ.
2019ರಲ್ಲಿ ಭಾರತದ ಏಕದಿನ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದಿದ್ದಾಗ ರಾಯುಡು ಎಲ್ಲ ಪ್ರಕಾರದ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಬಳಿಕ ತಮ್ಮ ನಿರ್ಧಾರ ಬದಲಿಸಿ ದೇಶೀಯ ಕ್ರಿಕೆಟ್ಗೆ ಮರಳಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.