ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 RCB vs PBKS: ಪಂಜಾಬ್ ವಿರುದ್ಧ ಸೋಲು; ಆರ್‌ಸಿಬಿ ಪ್ಲೇ-ಆಫ್ ಹಾದಿ ಕಠಿಣ

ಅಕ್ಷರ ಗಾತ್ರ

ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 54 ರನ್ ಅಂತರದ ಹೀನಾಯ ಸೋಲಿಗೆ ಶರಣಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ-ಆಫ್ ಹಾದಿ ಮತ್ತಷ್ಟು ಕಠಿಣವೆನಿಸಿದೆ.

ಶುಕ್ರವಾರ ಮುಂಬೈನ ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್, ಜಾನಿ ಬೆಸ್ಟೊ (66) ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ (70) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಒಂಬತ್ತು ವಿಕೆಟ್ ನಷ್ಟಕ್ಕೆ 209 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.

ಬಳಿಕ ಗುರಿ ಬೆನ್ನಟ್ಟಿದ ಆರ್‌ಸಿಬಿ ಒಂಬತ್ತು ವಿಕೆಟ್ ನಷ್ಟಕ್ಕೆ 155 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಈ ಸೋಲಿನ ಹೊರತಾಗಿಯೂ ಫಫ್ ಡುಪ್ಲೆಸಿ ಪಡೆ, 13 ಪಂದ್ಯಗಳಲ್ಲಿ 14 ಅಂಕಗಳನ್ನು ಹೊಂದಿದ್ದು, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಕಾಯ್ದುಕೊಂಡಿದೆ.

ಆದರೆ ನೆಗೆಟಿವ್ ರನ್ ರೇಟ್ (-0.323) ಇರುವ ಕಾರಣ ಮೇ 19ರಂದು ಗುಜರಾತ್ ಟೈಟನ್ಸ್ ವಿರುದ್ಧ ನಡೆಯಲಿರುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಇನ್ನೊಂದೆಡೆ 12 ಪಂದ್ಯಗಳಲ್ಲಿ ಆರನೇ ಗೆಲುವು ದಾಖಲಿಸಿರುವ ಪಂಜಾಬ್, ಒಟ್ಟು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ. ಈ ಮೂಲಕ ಪ್ಲೇ-ಆಫ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿದೆ.

ವಿರಾಟ್ ಕೊಹ್ಲಿ ಹಾಗೂ ಫಫ್ ಡುಪ್ಲೆಸಿ ಮೊದಲ ವಿಕೆಟ್‌ಗೆ 3.2 ಓವರ್‌ಗಳಲ್ಲಿ 33 ರನ್ ಪೇರಿಸಿದರು. ಆದರೆ ಈ ಜೊತೆಯಾಟ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ (20) ಅವರನ್ನು ಕಗಿಸೊ ರಬಾಡ ಹೊರದಬ್ಬಿದರು. 5ನೇ ಓವರ್‌ನಲ್ಲಿ ನಾಯಕ ಡುಪ್ಲೆಸಿ (10) ಹಾಗೂ ಮಹಿಪಾಲ್ ಲೊಮ್ರೊರ್ (6) ವಿಕೆಟ್ ಕಬಳಿಸಿದ ರಿಷಿ ಧವನ್ ಡಬಲ್ ಆಘಾತ ನೀಡಿದರು.

ಪರಿಣಾಮ 4.5 ಓವರ್‌ಗಳಲ್ಲಿ 40 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಜೊತೆ ಸೇರಿದ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ರಜತ್ ಪಾಟಿದಾರ್ ಮಹತ್ವದ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು.

ಆದರೆ ಈ ವಿಕೆಟ್ ಪತನದೊಂದಿಗೆ ಆರ್‌ಸಿಬಿ ಮುಗ್ಗರಿಸಿತು. ಗ್ಲೆನ್ ಮ್ಯಾಕ್ಸ್‌ವೆಲ್ 35 ಹಾಗೂ ರಜತ್ ಪಾಟಿದಾರ್ 26 ರನ್ ಗಳಿಸಿ ಔಟ್ ಆದರು.

ಫಿನಿಶರ್ ದಿನೇಶ್ ಕಾರ್ತಿಕ್ (11) ಹಾಗೂ ಶಾಬಾಜ್ ಅಹಮದ್‌‌ಗೆ (9) ಹೆಚ್ಚೇನು ಮಾಡಲಾಗಲಿಲ್ಲ. ಅಂತಿಮವಾಗಿ ಒಂಬತ್ತು ವಿಕೆಟ್ ನಷ್ಟಕ್ಕೆ 155 ರನ್ ಗಳಿಸಲಷ್ಟೇ ಶಕ್ತವಾಯಿತು. ಇನ್ನುಳಿದಂತೆ ಹರ್ಷಲ್ ಪಟೇಲ್ (11), ವನಿಂದು ಹಸರಂಗ (1), ಮೊಹಮ್ಮದ್ ಸಿರಾಜ್ (9*) ಹಾಗೂ ಜೋಶ್ ಹ್ಯಾಜಲ್‌ವುಡ್ (7*) ನಿರಾಸೆ ಮೂಡಿಸಿದರು.

ಪಂಜಾಬ್ ಪರ ಕಗಿಸೊ ರಬಾಡ ಮೂರು ಮತ್ತು ರಿಷಿ ಧವನ್ ಹಾಗೂ ರಾಹುಲ್ ಚಾಹರ್ ತಲಾ ಎರಡು ವಿಕೆಟ್ ಗಳಿಸಿದರು.

ಬೆಸ್ಟೊ, ಲಿವಿಂಗ್‌ಸ್ಟೋನ್ ಅಬ್ಬರ...

ಈ ಮೊದಲು ಜಾನಿ ಬೆಸ್ಟೊ (66) ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ (70) ಸ್ಫೋಟಕ ಅರ್ಧಶತಕಗಳ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು.

ಪಂಜಾಬ್ ತಂಡಕ್ಕೆ ಜಾನಿ ಬೆಸ್ಟೊ ಹಾಗೂ ಶಿಖರ್ ಧವನ್ ಬಿರುಸಿನ ಆರಂಭವೊದಗಿಸಿದರು. ಬೆಸ್ಟೊ ಹಾಗೂ ಧವನ್ (21) ಮೊದಲ ವಿಕೆಟ್‌ಗೆ 5 ಓವರ್‌ಗಳಲ್ಲೇ 60 ರನ್‌ಗಳ ಜೊತೆಯಾಟ ಕಟ್ಟಿದರು.

ಅತ್ತ ಸ್ಫೋಟಕ ಬ್ಯಾಟಿಂಗ್ ಮಾಡಿದ ಬೆಸ್ಟೊ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಈ ನಡುವೆ ಭಾನುಕ ರಾಜಪಕ್ಸ (1) ನಿರಾಸೆ ಮೂಡಿಸಿದರು.

9ನೇ ಓವರ್‌ನಲ್ಲಿ ಪಂಜಾಬ್ 100 ರನ್‌ಗಳ ಗಡಿ ದಾಟಿತು. ಬೆನ್ನಲ್ಲೇ ಉತ್ತಮವಾಗಿ ಆಡುತ್ತಿದ್ದ ಬೆಸ್ಟೊ 66 ರನ್ ಗಳಿಸಿ ಔಟ್ ಆದರು. ಕೇವಲ 29 ಎಸೆತಗಳನ್ನು ಎದುರಿಸಿದ ಬೆಸ್ಟೊ ಇನ್ನಿಂಗ್ಸ್‌ನಲ್ಲಿ ಏಳು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳು ಸೇರಿದ್ದವು.

ಈ ನಡುವೆ ಪ್ರಭಾವಿ ದಾಳಿ ಸಂಘಟಿಸಿದ ವನಿಂದು ಹಸರಂಗ ಪಂಜಾಬ್ ಓಟಕ್ಕೆ ಕಡಿವಾಣ ಹಾಕಿದರು.

ಬಳಿಕ ಐದನೇ ವಿಕೆಟ್‌ಗೆ ನಾಯಕ ಮಯಂಕ್ ಅಗರವಾಲ್ (19) ಜೊತೆ ಸೇರಿದ ಲಿಯಾಮ್ ಲಿವಿಂಗ್‌ಸ್ಟೋನ್ ಮಹತ್ವದ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು.

ನಿರಂತಕವಾಗಿ ಬ್ಯಾಟ್ ಬೀಸಿದ ಲಿವಿಂಗ್‌ಸ್ಟೋನ್, ಪಂಜಾಬ್ ಸವಾಲಿನ ಮೊತ್ತ ಪೇರಿಸಲು ನೆರವಾದರು. ಅಲ್ಲದೆ 35 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.

ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಔಟ್ ಆದ ಲಿವಿಂಗ್‌ಸ್ಟೋನ್ 42 ಎಸೆತಗಳಲ್ಲಿ 70 ರನ್ ಗಳಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳು ಸೇರಿದ್ದವು.

ಅಂತಿಮವಾಗಿ ಪಂಜಾಬ್ ವಿಕೆಟ್ ನಷ್ಟಕ್ಕೆ ರನ್ ಗಳಿಸಿತು. ಇನ್ನುಳಿದಂತೆ ಜಿತೇಶ್ ಶರ್ಮಾ 9, ಹರಪ್ರೀತ್ ಬ್ರಾರ್ ಹಾಗೂ ರಿಷಿ ಧವನ್ ತಲಾ ಏಳು ರನ್ ಗಳಿಸಿದರು.

ಆರ್‌ಸಿಬಿ ಪರ ಹರ್ಷಲ್ ಪಟೇಲ್ ನಾಲ್ಕು ವಿಕೆಟ್ ಗಳಿಸಿದರು. ನಾಲ್ಕು ಓವರ್‌ಗಳಲ್ಲಿ 15 ರನ್ ಮಾತ್ರ ಬಿಟ್ಟುಕೊಟ್ಟ ಹಸರಂಗ ಎರಡು ವಿಕೆಟ್ ಕಿತ್ತು ಮಿಂಚಿದರು. ಜೋಶ್ ಹ್ಯಾಜಲ್‌ವುಡ್ ನಾಲ್ಕು ಓವರ್‌ಗಳಲ್ಲಿ 64 ರನ್ ಹಾಗೂ ಮೊಹಮ್ಮದ್ ಸಿರಾಜ್ ಎರಡು ಓವರ್‌ಗಳಲ್ಲಿ 36 ರನ್ ಬಿಟ್ಟುಕೊಟ್ಟು ದುಬಾರಿಯೆನಿಸಿದರು.

ಆರ್‌ಸಿಬಿ ಫೀಲ್ಡಿಂಗ್...

ಈ ಮೊದಲುಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಫ್ ಡುಪ್ಲೆಸಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಪ್ಲೇ-ಆಫ್ ಪ್ರವೇಶದ ಹಾದಿ ಸುಗಮಗೊಳಿಸುವ ನಿಟ್ಟಿನಲ್ಲಿ ಆರ್‌ಸಿಬಿ ಈ ಪಂದ್ಯದಲ್ಲಿ ಗೆಲ್ಲಬೇಕಿದೆ. ಇದುವರೆಗೆ ಆಡಿರುವ 12 ಪಂದ್ಯಗಳಲ್ಲಿ ಏಳು ಗೆಲುವು ದಾಖಲಿಸಿರುವ ಫಫ್ ಡುಪ್ಲೆಸಿ ಬಳಗವು, ಒಟ್ಟು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಅತ್ತ ಪಂಜಾಬ್ ತಂಡವು ಪ್ಲೇ-ಆಫ್‌ಗೆ ಲಗ್ಗೆಯಿಡಲು ಉಳಿದಿರುವ ಎಲ್ಲ ಮೂರು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಮಯಂಕ್ ಅಗರವಾಲ್ ಪಡೆಈವರೆಗೆ ಆಡಿರುವ 11 ಪಂದ್ಯಗಳಲ್ಲಿ ಐದು ಗೆಲುವಿನೊಂದಿಗೆ ಒಟ್ಟು 10 ಅಂಕ ಗಳಿಸಿದ್ದು, ಎಂಟನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT