ಬೆಂಗಳೂರು: ನಗರದಲ್ಲಿ ಶನಿವಾರ ಮಳೆ ಬರಲಿಲ್ಲ. ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಸಂಭ್ರಮದ ಹೊಳೆಯಲ್ಲಿ ಮುಳುಗೆದ್ದರು.

ಕೊನೆಯ ಎಸೆತದವರೆಗೂ ರೋಚಕ ರಸದೌತಣ ನೀಡಿದ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿಯು 2 ರನ್ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಎದುರು ಜಯಿಸಿತು. ಇದರೊಂದಿಗೆ ಪ್ಲೇ ಆಫ್ ಹೊಸ್ತಿಲಿಗೆ ಬಂದು ನಿಂತಿತು. ವೇಗದ ಬೌಲರ್ಗಳಾದ ಲುಂಗಿ ಗಿಡಿ ಮತ್ತು ಯಶ್ ದಯಾಳ್ ಅವರು ಕೊನೆಯ ಹಂತದ ಓವರ್ಗಳಲ್ಲಿ ತೋರಿದ ಚಾಣಾಕ್ಷತನ ಆರ್ಸಿಬಿ ಜಯಕ್ಕೆ ಕಾರಣವಾಯಿತು. ಒಂದೇ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ತಂಡವನ್ನು ಎರಡೂ ಪಂದ್ಯಗಳಲ್ಲಿ ಆರ್ಸಿಬಿಯು ಸೋಲಿಸಿದ್ದು ಇದೇ ಮೊದಲು.

214 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಮಹೇಂದ್ರಸಿಂಗ್ ಧೋನಿ ಬಳಗವು ‘ಹೊಸ ಚಿಗುರು’ ಆಯುಷ್ ಮ್ಹಾತ್ರೆ (94; 48ಎ, 4X9, 6X5) ಮತ್ತು ‘ಹಳೆ ಬೇರು’ ರವೀಂದ್ರ ಜಡೇಜ (ಅಜೇಯ 77; 45ಎ, 4X8, 6X1) ಅವರ ಅಮೋಘ ಬ್ಯಾಟಿಂಗ್ ಬಲದಿಂದ ಗೆಲುವಿನ ಸನಿಹ ಬಂದು ನಿಂತಿತ್ತು. ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ 114 ರನ್ ಸೇರಿಸಿದರು. ಆದರೆ 17ನೇ ಓವರ್ನಲ್ಲಿ ವೇಗಿ ಲುಂಗಿ ಗಿಡಿ ಅವರು ಆಯುಷ್ ಮತ್ತು ಬ್ರೆವಿಸ್ ಡಿವಾಲ್ಡ್ ಅವರ ವಿಕೆಟ್ ಕಬಳಿಸಿ, ಆರ್ಸಿಬಿ ಗೆಲುವಿನಾಸೆಗೆ ಮರುಜೀವ ನೀಡಿದರು.

ಜಡೇಜ ಜೊತೆಗೂಡಿದ ಧೋನಿ ತಂಡದ ಜಯದ ಆಸೆಯನ್ನು ಜೀವಂತವಾಗಿಟ್ಟರು. ಇದರಿಂದಾಗಿ ಕೊನೆಯ ಓವರ್ನಲ್ಲಿ ತಂಡದ ಗೆಲುವಿಗೆ ಕೇವಲ 16 ರನ್ಗಳ ಅಗತ್ಯವಿತ್ತು. ಆದರೆ ಯಶ್ ದಯಾಳ್ ಹಾಕಿದ ಈ ಓವರ್ ನಾಟಕೀಯ ತಿರುವುಗಳಿಗೆ ಕಾರಣವಾಯಿತು.

ಮೊದಲ ಎಸೆತದಲ್ಲಿ ಧೋನಿ ಮತ್ತು ಎರಡನೇಯದ್ದರಲ್ಲಿ ಜಡೇಜ ತಲಾ ಒಂದು ರನ್ ಗಳಿಸಿದರು. ಆದರೆ ಮೂರನೇ ಎಸೆತದಲ್ಲಿ ಧೋನಿಯನ್ನು ಎಲ್ಬಿ ಬಲೆಗೆ ಬೀಳಿಸುವಲ್ಲಿ ದಯಾಳ್ ಯಶಸ್ವಿಯಾದರು. ಕ್ರೀಸ್ಗೆ ಬಂದ ಶಿವಂ ದುಬೆ ಸಿಕ್ಸರ್ ಹೊಡೆದರು. ಆ ಎಸೆತವು ದುಬೆಯವರ ನಡುಮಟ್ಟಕ್ಕಿಂತ ಮೇಲಿದ್ದ ಕಾರಣ ನೋಬಾಲ್ ಆಗಿ ಒಟ್ಟು ಏಳು ರನ್ಗಳು ಸಿಕ್ಕವು. ಆದರೆ ಯಶ್ ದಯಾಳ್ ಎದೆಗುಂದಲಿಲ್ಲ. ನಂತರದ ಮೂರು ಎಸೆತಗಳಲ್ಲಿ 3 ರನ್ಗಳನ್ನಷ್ಟೇ ಕೊಟ್ಟರು. ಅದರೊಂದಿಗೆ ಜೇಕಬ್ ಬೆಥಲ್, ವಿರಾಟ್ ಕೊಹ್ಲಿ ಮತ್ತು ರೊಮೆರಿಯೊ ಶೆಫರ್ಡ್ ಅವರ ಅಬ್ಬರದ ಬ್ಯಾಟಿಂಗ್ ವ್ಯರ್ಥವಾಗದಂತೆ ನೋಡಿಕೊಂಡರು. ಅಲ್ಲದೇ ಆರ್ಸಿಬಿಯು ನಾಲ್ಕು ಕ್ಯಾಚ್ಗಳನ್ನು ಕೈಚೆಲ್ಲಿದ್ದನ್ನೂ ಮರೆಸಿದರು.

ಗುಡುಗಿದ ಶೆಫರ್ಡ್:

ಟಾಸ್ ಗೆದ್ದ ಚೆನ್ನೈ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರ್ಸಿಬಿ ತಂಡವು 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 213 ರನ್ ಗಳಿಸಿತು.

ಅದಕ್ಕೆ ಕಾರಣವಾಗಿದ್ದು ರೊಮೆರಿಯೊ ಶೆಫರ್ಡ್ ಅವರ ಅಬ್ಬರದ ಆಟ. ಆರ್ಸಿಬಿ ಇನಿಂಗ್ಸ್ನ ಕೊನೆಯ ಎರಡು ಓವರ್ಗಳಲ್ಲಿ 54 ರನ್ಗಳ ಹೊಳೆ ಹರಿಯಲು ವೆಸ್ಟ್ ಇಂಡೀಸ್ ಆಟಗಾರ ಕಾರಣರಾದರು. ಇದರಲ್ಲಿ ಅವರ ಪಾಲು 53 ರನ್ಗಳು! ಶೆಫರ್ಡ್ 378.57ರ ಸ್ಟ್ರೈಕ್ರೇಟ್ನಲ್ಲಿ ರನ್ ಸೂರೆ ಮಾಡಿದರು.

ದುಬಾರಿಯಾದ ಖಲೀಲ್:

ಇಂಗ್ಲೆಂಡ್ನ ಜೇಕಬ್ ಬೆಥೆಲ್ ಮತ್ತು ಶೆಫರ್ಡ್ ಅವರನ್ನು ಚೆನ್ನೈ ತಂಡದ ಎಡಗೈ ವೇಗಿ ಖಲೀಲ್ ಅಹಮದ್ ಎಂದಿಗೂ ಮರೆಯುವುದಿಲ್ಲ. ಈ ಇಬ್ಬರೂ ಬ್ಯಾಟರ್ಗಳಿಂದಾಗಿ ಖಲೀಲ್ 3 ಓವರ್ಗಳಲ್ಲಿ 65 ರನ್ ಬಿಟ್ಟುಕೊಟ್ಟರು.

ಖಲೀಲ್ ಹಾಕಿದ ಮೊದಲ ಸ್ಪೆಲ್ನಲ್ಲಿ (2–0–32–0) ಜೇಕಬ್ ಮತ್ತು ಕೊಹ್ಲಿ ದಂಡಿಸಿದರು. ಅದರ ನಂತರ ಖಲೀಲ್ಗೆ 19ನೇ ಓವರ್ನವರೆಗೂ ಬೌಲಿಂಗ್ ಲಭಿಸಲಿಲ್ಲ. ಪಥಿರಾಣ ಮತ್ತು ಸ್ಪಿನ್ನರ್ ನೂರ್ ಅಹಮದ್ ಅವರು ಆರ್ಸಿಬಿ ರನ್ ಗಳಿಕೆಗೆ ಕಡಿವಾಣ ಹಾಕಿದ್ದರು. ಒಂದು ಹಂತದಲ್ಲಿ ಆತಿಥೇಯ ತಂಡವು 200ರ ಗಡಿ ಮುಟ್ಟುವುದು ಕೂಡ ಅನುಮಾನವಾಗಿತ್ತು. ಈ ನಡುವೆ 60 ರನ್ಗಳ ಅಂತರದಲ್ಲಿ 5 ವಿಕೆಟ್ ಕೂಡ ಕಳೆದುಕೊಂಡಿತ್ತು. 18 ಓವರ್ಗಳಲ್ಲಿ 5 ವಿಕೆಟ್ಗಳಿಗೆ 159 ರನ್ ಗಳಿಸಿತ್ತು. ಆದರ ನಂತರದ ಓವರ್ನಲ್ಲಿ ಬೌಲಿಂಗ್ಗೆ ಇಳಿದ ಖಲೀಲ್, ಬೆಚ್ಚಿ ಬೀಳುವಂತೆ ಶೆಫರ್ಡ್ ಆಡಿದರು. ಕೊನೆಯ ಓವರ್ನಲ್ಲಿ ಪಥಿರಾಣ ಅವರನ್ನೂ ಶೆಫರ್ಡ್ ಬಿಡಲಿಲ್ಲ.

ಕೊಹ್ಲಿ 7ನೇ ಅರ್ಧಶತಕ: 21 ವರ್ಷದ ಆಟಗಾರ ಜೇಕಬ್ ಜೊತೆಗೆ ಮೊದಲ ವಿಕೆಟ್ಗೆ 97 ರನ್ ಸೇರಿಸಿದ ವಿರಾಟ್ ಕೊಹ್ಲಿ ಆಟ ರಂಗೇರಿತು. ಅವರು ಈ ಟೂರ್ನಿಯಲ್ಲಿ ಸತತ 4ನೇ ಮತ್ತು ಒಟ್ಟಾರೆ 7ನೇ ಅರ್ಧಶತಕ ದಾಖಲಿಸಿದರು. 29 ಎಸೆತಗಳಲ್ಲಿ ಅವರು 50ರ ಗಡಿ ದಾಟಿದರು.

ಡೆವಾಲ್ಡ್ಗೆ ಸಿಗದ ಡಿಆರ್ಎಸ್:

ಲುಂಗಿ ಗಿಡಿ ಎಸೆತದಲ್ಲಿ ಎಲ್ಬಿಡಬ್ಲ್ಯು ಆದ ಬ್ರೆವಿಸ್ ಡೆವಾಲ್ಡ್ ಅವರಿಗೆ ಡಿಆರ್ಎಸ್ ತೆಗೆದುಕೊಳ್ಳುವ ಅವಕಾಶ ಸಿಗಲಿಲ್ಲ. ಅದಕ್ಕೆ ಕಾರಣ ಅವರು ಡಿಆರ್ಎಸ್ ಕೇಳುವಾಗ ನಿಗದಿಯ ಸಮಯ ಮುಗಿದಿತ್ತು. ಲೋವರ್ ಫುಲ್ಟಾಸ್ ಎಸೆತವು ಅವರ ಪ್ಯಾಡ್ಗೆ ತಗುಲಿ ಹಿಂದೆ ಸಾಗಿತು. ಅಂಪೈರ್ ಎಲ್ಬಿ ನೀಡಿದರು. ಆಗಲೇ ಮನವಿ ಸಲ್ಲಿಸುವ ಬದಲು ಒಂದು ರನ್ಗಾಗಿ ಬ್ರೆವಿಸ್ ಮತ್ತು ಜಡೇಜ ಓಡಿದರು. ನಂತರ ಪರಸ್ಪರ ಮಾತನಾಡಿ ಡಿಆರ್ಎಸ್ ಮನವಿ ಸಲ್ಲಿಸಿದರು. ಆದರೆ ಅಂಪೈರ್ ಪುರಸ್ಕರಿಸಲಿಲ್ಲ. ಏಕೆಂದರೆ; ಒಮ್ಮೆ ಅಂಪೈರ್ ಔಟ್ ಎಂದು ತೀರ್ಪು ಕೊಟ್ಟಾಗ ಬಾಲ್ ಡೆಡ್ ಆಗುತ್ತದೆ. ಜೊತೆಗೆ ಡಿ ಆರ್ಎಸ್ ಪಡೆಯುವ ಕ್ಷಣಗಣನೆಯೂ ಆರಂಭವಾಗಿರುತ್ತದೆ. ಡೆವಾಲ್ಡ್ ಪೆವಿಲಿಯನ್ಗೆ ಮರಳಿದ ರು. ಅದರ ನಂತರ ಟಿ.ವಿ. ರಿಪ್ಲೆಯಲ್ಲಿ ಮೂಡಿದ ದೃಶ್ಯದಲ್ಲಿ ಡೆವಾಲ್ಡ್ ನಾಟ್ಔಟ್ ಆಗಿರುವುದು ಸ್ಪಷ್ಟವಾಗಿತ್ತು.

ತವರಿನಲ್ಲಿ ಟಾಸ್ ಸೋಲು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ವರ್ಷ ಆಡಿದ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಗಳ 9 ಪಂದ್ಯಗಳಲ್ಲಿ
ಟಾಸ್ ಸೋತಿದೆ. ಪುರುಷರ ತಂಡವು ಈ ವರ್ಷ ಇಲ್ಲಿ ಐದು ಪಂದ್ಯಗಳನ್ನು ಆಡಿದೆ. ಸ್ಮೃತಿ ಮಂದಾನ ನಾಯಕತ್ವದ ಆರ್ಸಿಬಿಯು 4 ಪಂದ್ಯಗಳನ್ನು ಈ ಕ್ರೀಡಾಂಗಣದಲ್ಲಿ ಆಡಿದೆ.

ಹೋದ ವರ್ಷದ ನೆನಪು

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೋದ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ಎದುರು ನಡೆದಿದ್ದ ಪಂದ್ಯದಲ್ಲಿ ಆರ್ಸಿಬಿ ಗೆಲುವಿನಲ್ಲಿ ಯಶ್ ದಯಾಳ್ ಪ್ರಮುಖ ಪಾತ್ರ ವಹಿಸಿದ್ದರು. ಆ ಪಂದ್ಯದಲ್ಲಿಯೂ ಯಶ್ ಕೊನೆಯ ಓವರ್ ಹಾಕಿದ್ದರು. ಚೆನ್ನೈಗೆ ಆಗ 17 ರನ್ ಅಗತ್ಯವಿತ್ತು. ಅದೇ ಓವರ್ನಲ್ಲಿ ಮಹೇಂದ್ರಸಿಂಗ್ ಧೋನಿಯ ವಿಕೆಟ್ ಯಶ್ ಪಾಲಾಗಿತ್ತು. ರೋಚಕತೆ ಕೆರಳಿಸಿದ್ದ ಆ ಓವರ್ನಲ್ಲಿ ಯಶ್ ಚಾಣಾಕ್ಷತನ ಮೆರೆದಿದ್ದರು. ಆರ್ಸಿಬಿ ಗೆದ್ದಿತ್ತು. ಈ ಬಾರಿಯೂ ಅದೇ ರೀತಿಯ ಕೊನೆಯ ಓವರ್ ಥ್ರಿಲ್ಲರ್ ಅಭಿಮಾನಿಗಳ ಮನಗೆದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.