ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐ ಅಧ್ಯಕ್ಷ ಸ್ಥಾನ: ಬ್ರಿಜೇಶ್ ಪಟೇಲ್‌ಗೆ ಇನ್ನೂ ಇದೆ ಅವಕಾಶ

ಕೂಲಿಂಗ್ ಆಫ್ ನಿಯಮದ ಆಟ; ಗಂಗೂಲಿ, ಜಯ್‌ ಶಾ ಅಧಿಕಾರಾವಧಿ ಹತ್ತು ತಿಂಗಳು?
Last Updated 16 ಅಕ್ಟೋಬರ್ 2019, 3:44 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಕರ್ನಾಟಕದ ಹಿರಿಯ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ಅವರ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಭಾನುವಾರದ ಬೆಳವಣಿಗೆಯಲ್ಲಿ ಸೌರವ್ ಗಂಗೂಲಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿ, ಕಾರ್ಯದರ್ಶಿ ಸ್ಥಾನಕ್ಕೆ ಜಯ್‌ಅಮಿತ್‌ಭಾಯಿ ಶಾ ಅವರ ಹೆಸರನ್ನು ಅಂತಿಮಗೊಳಿಸಲಾಯಿತು.

ಬ್ರಿಜೇಶ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಈ ಬೆಳವಣಿಗೆ ಕ್ರಿಕೆಟ್‌ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ಆದರೆ, ಇದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ‘ನಡೆ’ ಎಂದೇ ಬಿಸಿಸಿಐ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಕೂಲಿಂಗ್ ಆಫ್‌ ನಿಯಮದ ಕಾರಣ ಬ್ರಿಜೇಶ್ ಬದಲಿಗೆ ಸೌರವ್ ಅವರನ್ನು ಮುನ್ನೆಲೆಗೆ ತರಲಾಗಿದೆ ಎಂದು ಹೇಳಲಾಗುತ್ತಿದೆ. ಈ ಮಾತು ನಿಜವಾದರೆ; 67 ವರ್ಷದ ಬ್ರಿಜೇಶ್ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನ ಪಡೆಯಲು ಇನ್ನೂ ಒಂದು ಅವಕಾಶ ಇದೆ. ಅದಕ್ಕಾಗಿ ಅವರು ಇನ್ನೂ ಹತ್ತು ತಿಂಗಳು ಕಾಯಬೇಕಷ್ಟೇ!

2017ರ ಜನವರಿಯಲ್ಲಿ ಸುಪ್ರೀಂ ಕೋರ್ಟ್‌ನಿಂದ ವಿನೋದ್ ರಾಯ್ ನೇತೃತ್ವದ ಆಡಳಿತ ಸಮಿತಿಯನ್ನು ನೇಮಕ ಮಾಡಲಾಗಿತ್ತು. ಸುಳ್ಳು ಅಫಿಡವಿಟ್ ನೀಡಿದ್ದ ಆರೋಪದ ಮೇಲೆ ಆಗ ಬಿಸಿಸಿಐ ಆಧ್ಯಕ್ಷರಾಗಿದ್ದ ಅನುರಾಗ್ ಠಾಕೂರ್ ಮತ್ತು ಕಾರ್ಯದರ್ಶಿಯಾಗಿದ್ದ ಅಜಯ್ ಶಿರ್ಕೆ ಅವರನ್ನು ಪದಚ್ಯುತಗೊಳಿಸಲಾಗಿತ್ತು. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯಲ್ಲಿ ಒಂಬತ್ತು ವರ್ಷಗಳಿಗಿಂತ ಹೆಚ್ಚು ಅವಧಿಗೆ ಪದಾಧಿಕಾರಿಯಾಗಿದ್ದ ಬ್ರಿಜೇಶ್ ಪಟೇಲ್ ಅವರೂ ನಿಯಮದನ್ವಯ ಕಾರ್ಯದರ್ಶಿ ಸ್ಥಾನ ಬಿಟ್ಟಿದ್ದರು.

‘ಬ್ರಿಜೇಶ್ ಅವರು ಕೆಎಸ್‌ಸಿಯಲ್ಲಿ ಒಂಬತ್ತು ವರ್ಷಗಳಿಗೂ ಹೆಚ್ಚು ಕಾಲ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಇದುವರೆಗೆ ಬಿಸಿಸಿಐನಲ್ಲಿ ಅವರು ಯಾವುದೇ ಪದಾಧಿಕಾರಿ ಹುದ್ದೆ ಹೊಂದಿಲ್ಲ. ಆದ್ದರಿಂದ ಅವರು ಬಿಸಿಸಿಐ ಅಧ್ಯಕ್ಷ ಅಥವಾ ಕಾರ್ಯದರ್ಶಿ ಸ್ಥಾನಗಳಿಗೆ ಪೂರ್ಣ ಅರ್ಹರಾಗಿದ್ದಾರೆ’ ಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ. ಗಂಗೂಲಿ ಅವರು 2014ರಲ್ಲಿ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ)ಗೆ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಸೆಪ್ಟೆಂಬರ್‌ 2015ರಲ್ಲಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರು ನಿಧನರಾದರು. ಆಗ ಗಂಗೂಲಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ದಾಲ್ಮಿಯಾ ಅವರ ಮಗ ಅವಿಷೇಕ್ ಅವರನ್ನು ಜಂಟಿ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು. ಕಳೆದ ವಾರ ನಡೆದ ಸಿಎಬಿ ಸರ್ವಸದಸ್ಯರ ಸಭೆಯಲ್ಲಿ ಮತ್ತೊಮ್ಮೆ ಗಂಗೂಲಿ ಅವರನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

‘ನಿವೃತ್ತ ನ್ಯಾಯಮೂರ್ತಿ ಆರ್‌.ಎಂ. ಲೋಧಾ ಸಮಿತಿಯ ಶಿಫಾರಸುಗಳಲ್ಲಿ ಪ್ರಮುಖವಾಗಿರುವ ಕೂಲಿಂಗ್ ಆಫ್‌ ನಿಯಮಕ್ಕೆ ಗಂಗೂಲಿ ಒಳಪಡಲಿದ್ದಾರೆ. ಅವರು ಬಂಗಾಳ ಕ್ರಿಕೆಟ್‌ ಸಂಸ್ಥೆಗೆ ಕಳೆದ ಐದು ವರ್ಷ, ಎರಡು ತಿಂಗಳುಗಳಿಂದ ಪದಾಧಿಕಾರಿಯಾಗಿದ್ದಾರೆ. ಮುಂದಿನ ಜುಲೈವರೆಗೆ ಆರು ವರ್ಷಗಳ ಅವಧಿ ಪೂರೈಸುವರು. ಅದರ ನಂತರ ಅವರು ಮೂರು ವರ್ಷ ರಾಜ್ಯ ಸಂಸ್ಥೆ ಮತ್ತು ಬಿಸಿಸಿಐ ಅಧಿಕಾರದಿಂದ ದೂರ ಉಳಿಯುವುದು ಕಡ್ಡಾಯವಾಗಿದೆ. ಜಯ್‌ ಶಾ ಅವರಿಗೂ ಹತ್ತು ತಿಂಗಳಷ್ಟೇ ಸಮಯ ಇದೆ. ಗುಜರಾತ್ ಕ್ರಿಕೆಟ್ ಸಂಸ್ಥೆಯಲ್ಲಿ ಅವರು ಐದು ವರ್ಷಗಳಿಗಿಂತ ಹೆಚ್ಚು ಅವಧಿಗೆ ಪದಾಧಿಕಾರಿಯಾಗಿದ್ದಾರೆ. ಆಗ ಬ್ರಿಜೇಶ್ ಅವರಿಗೇ ಅಧ್ಯಕ್ಷ ಸ್ಥಾನ ಸಿಗುವುದು ಬಹುತೇಕ ಖಚಿತ’ ಎಂದು ಕೆಎಸ್‌ಸಿಎ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.

ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ

ಬಿಸಿಸಿಐ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳ ಅಂತಿಮಪಟ್ಟಿಯನ್ನು ಚುನಾವಣಾಧಿಕಾರಿಗಳು ಮಂಗಳವಾರ ಬಿಡುಗಡೆ ಮಾಡಿದ್ಧಾರೆ. ಈಗಾಗಲೇ ನಾಮಪತ್ರ ಸಲ್ಲಿರುವ ಸೌರವ್‌ ಗಂಗೂಲಿ ಮತ್ತು ತಂಡದ ವಿರುದ್ಧ ಯಾರೂ ಕಣಕ್ಕಿಳಿದಿಲ್ಲ. ಅಕ್ಟೋಬರ್ 23ರಂದು ನಡೆಯಲಿರುವ ಸರ್ವಸದಸ್ಯರ ಸಭೆಯಲ್ಲಿ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ ಎಂದು ಮೂಲಗಳು ತಿಳಿಸಿವೆ.

ಅಭ್ಯರ್ಥಿಗಳ ಅಂತಿಮ ಪಟ್ಟಿ: ಸೌರವ್ ಗಂಗೂಲಿ (ಅಧ್ಯಕ್ಷ), ಮಹೀಮ್ ವರ್ಮಾ (ಉಪಾಧ್ಯಕ್ಷ), ಜಯ್‌ ಅಮಿತ್‌ಭಾಯಿ ಶಾ (ಕಾರ್ಯದರ್ಶಿ), ಜಯೇಶ್ ಜಾರ್ಜ್ (ಜಂಟಿ ಕಾರ್ಯದರ್ಶಿ), ಅರುಣಸಿಂಗ್ ಧುಮಾಲ್ (ಖಜಾಂಚಿ), ಪ್ರಭತೇಜ್ ಸಿಂಗ್ ಭಾಟಿಯಾ (ಕೌನ್ಸಿಲರ್), ಬ್ರಿಜೇಶ್ ಪಟೇಲ್ (ವ್ಯವಸ್ಥಾಪನ ಸಮಿತಿ ಸದಸ್ಯ), ಎಂ. ಖೈರುಲ್ ಜಮಾಲ್ ಮಜುಮದಾರ್ (ವ್ಯವಸ್ಥಾಪನ ಸಮಿತಿ ಸದಸ್ಯ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT