ಮಂಗಳವಾರ, ನವೆಂಬರ್ 24, 2020
22 °C

IPL-2020 | MI vs DC: ಮುಂಬೈ ಆರನೇ ಬಾರಿ ಫೈನಲ್‌ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ (ಎಎಫ್‌ಪಿ): ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಭರ್ಜರಿ ಬ್ಯಾಟಿಂಗ್ ಮತ್ತು ಪರಿ ಣಾಮಕಾರಿ ಬೌಲಿಂಗ್ ದಾಳಿಯ ಮುಂದೆ ಡೆಲ್ಲಿ ಕ್ಯಾಪಿಟಲ್ಸ್‌ ಮಂಕಾ ಯಿತು. ಗುರುವಾರ ರಾತ್ರಿ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ
ದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಅಧಿಕಾರಯುತ ಜಯ ಸಾಧಿಸಿದ ಮುಂಬೈ ತಂಡ ಆರನೇ ಬಾರಿ ಫೈನಲ್ ಪ್ರವೇಶಿಸಿತು.

ಇಶಾನ್ ಕಿಶನ್ (ಔಟಾಗದೆ 55; 30ಎ, 4ಬೌಂ, 3ಸಿ) ಮತ್ತು ಹಾರ್ದಿಕ್ ಪಾಂಡ್ಯ (ಔಟಾಗದೆ 37; 14ಎಸೆತ, 5ಸಿಕ್ಸರ್) ಮಿಂಚಿನ ಬ್ಯಾಟಿಂಗ್‌ ಮತ್ತು ಜಸ್‌ಪ್ರೀತ್ ಬೂಮ್ರಾ–ಟ್ರೆಂಟ್ ಬೌಲ್ಟ್‌ ಅವರ ವೇಗದ ದಾಳಿ ಮುಂಬೈಗೆ 57 ರನ್‌ಗಳ ಗೆಲುವು ತಂದುಕೊಟ್ಟಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಡೆಲ್ಲಿ ತಂಡ ಎರಡನೇ ಓವರ್‌ನಲ್ಲಿ ನಾಯಕ ರೋಹಿತ್ ಶರ್ಮಾ ಅವರ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಯಿತು. ಆದರೆ ನಂತರ ಮುಂಬೈ ಬ್ಯಾಟ್ಸ್‌ಮನ್‌ಗಳು ಮೇಲುಗೈ ಸಾಧಿಸಿದರು. ಹೀಗಾಗಿ ತಂಡ ಐದು ವಿಕೆಟ್ ಕಳೆದುಕೊಂಡು 200 ರನ್ ಕಲೆ ಹಾಕಿತು.

ಗುರಿ ಬೆನ್ನತ್ತಿದ ಡೆಲ್ಲಿಗೆ ಮೊದಲ ಓವರ್‌ನಲ್ಲೇ ಎಡಗೈ ವೇಗಿ ಟ್ರೆಂಟ್ ಬೌಲ್ಟ್‌ ಪೆಟ್ಟು ನೀಡಿದರು. ತಂಡ ಖಾತೆ ತೆರೆಯುವ ಮುನ್ನ ಪೃಥ್ವಿ ಶಾ ಮತ್ತು ಅಜಿಂಕ್ಯ ರಹಾನೆ ಅವರ ವಿಕೆಟ್ ಕಳೆದುಕೊಂಡಿತು. ಎರಡನೇ ಓವರ್‌ನಲ್ಲಿ ಶಿಖರ್ ಧವನ್ ಕೂಡ ವಾಪಸಾದರು. ಆಗಲೂ ಖಾತೆಗೆ ರನ್ ಸೇರಿರಲಿಲ್ಲ.

ನಾಯಕ ಶ್ರೇಯಸ್ ಅಯ್ಯರ್ ಮತ್ತು ಮಾರ್ಕಸ್ ಸ್ಟೋಯಿನಿಸ್ ಜೊತೆಗೂಡಿ 20 ರನ್ ಕಲೆ ಹಾಕಿದರು. ಒಂದು ರನ್ ಅಂತರದಲ್ಲಿ ಅಯ್ಯರ್ ಮತ್ತು ರಿಷಭ್ ಪಂತ್ ಔಟಾದರು. ಸ್ಟೋಯಿನಿಸ್ (65; 46 ಎ, 6 ಬೌಂ, 3 ಸಿ) ಮತ್ತು ಅಕ್ಷರ್ ಪಟೇಲ್ (42; 33 ಎ, 2 ಬೌಂ, 3 ಸಿ) 73 ರನ್‌ಗಳ ಜೊತೆಯಾಟ ಆಡಿದರು. ಆದರೆ ತಂಡವನ್ನು ಸೋಲಿನಿಂದ ಪಾರು ಮಾಡಲು ಅವರಿಗೆ ಸಾಧ್ಯವಾಗಲಿಲ್ಲ.

ಇಶಾನ್–ಪಾಂಡ್ಯ ಆಟ: ಮುಂಬೈ ಇಂಡಿಯನ್ಸ್‌ಗೆ ಕ್ವಿಂಟನ್ ಡಿ ಕಾಕ್ ಮತ್ತು ಸೂರ್ಯಕುಮಾರ್ ಯಾದವ್ ಉತ್ತಮ ಬುನಾದಿ ಹಾಕಿಕೊಟ್ಟಿದ್ದರು. ಇನಿಂಗ್ಸ್‌ನ ಕೊನೆಯ 23 ಎಸೆತಗಳಲ್ಲಿ ಇಶಾನ್ ಕಿಶನ್ ಮತ್ತು  ಹಾರ್ದಿಕ್ ಪಾಂಡ್ಯ 60 ರನ್‌ ಸೂರೆ ಮಾಡಿದರು. ಹಾರ್ದಿಕ್ ಪಾಂಡ್ಯ ಸಿಡಿಸಿದ ಸಿಕ್ಸರ್‌ಗಳಿಗೆ  ಶ್ರೇಯಸ್ ಅಯ್ಯರ್ ಬಳಗದ ಬೌಲರ್‌ಗಳು ಬೇಸ್ತು ಬಿದ್ದರು. 16.1 ಓವರ್‌ಗಳಲ್ಲಿ 140 ರನ್‌ಗಳಿಗೆ ಐದು ವಿಕೆಟ್ ಕಳೆದು ಕೊಂಡಿದ್ದ ಮುಂಬೈ ಮೇಲೆ ಹಿಡಿತ ಸಾಧಿಸುವ ಶ್ರೇಯಸ್ ಯೋಜನೆ ತಲೆ ಕೆಳಗಾಯಿತು. ಮುಂಬೈ ತಂಡಕ್ಕೆ ಡೆಲ್ಲಿಯ ಆಫ್‌ಸ್ಪಿನ್ನರ್ ಆರಂಭದಲ್ಲಿಯೇ ಪೆಟ್ಟು ಕೊಟ್ಟರು. ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ರೋಹಿತ್ ಶರ್ಮಾ ಖಾತೆ ತೆರೆಯುವ ಮುನ್ನವೇ ಅಶ್ವಿನ್ ಅವರ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಈ ಹಂತದಲ್ಲಿ ಜೊತೆಗೂಡಿದ ಕ್ವಿಂಟನ್ ಡಿ ಕಾಕ್ (40; 25 ಎ,5 ಬೌಂ, 1ಸಿ) ಮತ್ತು ಸೂರ್ಯಕುಮಾರ್ ಯಾದವ್  (51; 38 ಎಸೆತ, 6 ಬೌಂಡರಿ, 2 ಸಿಕ್ಸರ್)  ಎರಡನೇ ವಿಕೆಟ್‌ ಜೊತೆಯಾಟದಲ್ಲಿ 62 ರನ್ ಸೇರಿಸಿದರು. ಇದರಿಂದಾಗಿ ತಂಡದ ಮೊತ್ತ ಎಂಟು ಓವರ್‌ ದಾಟುವ ಮುನ್ನವೇ 78 ಆಗಿತ್ತು. ಅಶ್ವಿನ್ ಜೊತೆಯಾಟ ಮುರಿದರು. ಕ್ವಿಂಟನ್ ವಿಕೆಟ್ ಉರುಳಿಸಿದರು. ಯುವ ಬ್ಯಾಟ್ಸ್‌ ಮನ್ ಇಶಾನ್ ಕಿಶನ್ ಕ್ರೀಸ್‌ನಲ್ಲಿ ಕಾಲೂರುವ ಮುನ್ನವೇ ಇನ್ನೊಂದು ಕಡೆ ವಿಕೆಟ್‌ಗಳು ಪತನವಾಗತೊಡಗಿದವು.  12ನೇ ಓವರ್‌ನಲ್ಲಿ ಸೂರ್ಯ ಔಟಾದರು.

ಕೀರನ್ ಪೊಲಾರ್ಡ್‌ಗೆ ಖಾತೆ ತೆರೆಯಲು ಅಶ್ವಿನ್ ಬಿಡಲಿಲ್ಲ. ಕೃಣಾಲ್ ಪಾಂಡ್ಯ ಕೇವಲ 13 ರನ್ ಗಳಿಸಿ ಔಟಾದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು