ಶುಕ್ರವಾರ, ಜುಲೈ 1, 2022
26 °C
ಸನ್‌ರೈಸರ್ಸ್‌ ಹೈದರಾಬಾದ್‌ ಎದುರು 154 ರನ್ ಗಳಿಸಿದ ರಾಜಸ್ಥಾನ ತಂಡ

IPL-2020: ಹೋಲ್ಡರ್ ದಾಳಿಗೆ ಕುಸಿದ ರಾಯಲ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದುಬೈ: ಕೆರಿಬಿಯನ್ ತಾರೆ ಜೇಸನ್ ಹೋಲ್ಡರ್ ಅವರ ಪರಿಣಾಮಕಾರಿ ದಾಳಿಯ ಮುಂದೆ ರಾಜಸ್ಥಾನ ರಾಯಲ್ಸ್ ತಂಡವು ಸಾಧಾರಣ ಮೊತ್ತ ಗಳಿಸಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಸನ್‌ರೈಸರ್ಸ್‌ ತಂಡದ ಯೋಜನೆಗೆ ತಕ್ಕಂತೆ  ಹೋಲ್ಡರ್ (33ಕ್ಕೆ3) ಸಂಘಟಿಸಿದ ದಾಳಿಯಿಂದಾಗಿ ಸನ್‌ರೈಸರ್ಸ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 154 ರನ್‌ಗಳ ಮೊತ್ತ ಗಳಿಸಿತು.

ಸ್ಪೋಟಕ ಬ್ಯಾಟ್ಸ್‌ಮನ್‌ಗಳು ಇರುವ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ಹೋಲ್ಡರ್ ನಾಲ್ಕನೇ ಓವರ್‌ನಲ್ಲಿ ಮೊದಲ ಏಟು ಕೊಟ್ಟರು. ರಾಬಿನ್ ಉತ್ತಪ್ಪ ರನೌಟ್ ಆಗಲು ಹೋಲ್ಡರ್ ಕಾರಣರಾದರು.

ಅಲ್ಲಿಂದ ರಾಯಲ್ಸ್‌ನ ಪರದಾಟ ಆರಂಭವಾಯಿತು. ತೊಡೆಯ ಸ್ಯಾಯುಸೆಳೆತದಲ್ಲಿಯೇ ಆಡುತ್ತಿದ್ದ ಬೆನ್‌ ಸ್ಟೋಕ್ಸ್‌ ಜೊತೆಗೂಡಿದ ಸಂಜು ಸ್ಯಾಮ್ಸನ್ ತಮ್ಮ ಲಯ ಕಂಡುಕೊಳ್ಳಲು ಕಷ್ಟಪಟ್ಟರು. ಆದರೂ ಎರಡನೇ ವಿಕೆಟ್‌ಗೆ 56 ರನ್ ಸೇರಿಸುವಲ್ಲಿ ಸಫಲರಾದರು.  12ನೇ ಓವರ್‌ನಲ್ಲಿ ಹೋಲ್ಡರ್ ಎಸೆತವನ್ನು ಅಂದಾಜಿಸುವಲ್ಲಿ ಸಂಜು ವಿಫಲರಾದರು. ಚೆಂಡು ಸ್ಟಂಪ್ ಎಗರಿಸಿತು. 

ನಂತರದ ಓವರ್‌ನಲ್ಲಿ ಸ್ಪಿನ್ನರ್ ರಶೀದ್ ಎಸೆತದಲ್ಲಿ ಬೆನ್ ಸ್ಟೋಕ್ಸ್‌  (30; 32ಎ) ಕ್ಲೀನ್‌ ಬೌಲ್ಡ್ ಆಗಿ ಮರಳಿದರು. ಭರವಸೆಯ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಕೇವಲ ಒಂಬತ್ತು ರನ್ ಗಳಿಸಿ ವಿಜಯಶಂಕರಗೆ ವಿಕೆಟ್ ಕೊಟ್ಟರು. 

19ನೇ ಓವರ್‌ನಲ್ಲಿ ಹೋಲ್ಡರ್ ಸತತ ಎರಡು ಎಸೆತಗಳಲ್ಲಿ ಸ್ಟೀವನ್ ಸ್ಮಿತ್ (19 ರನ್) ಮತ್ತು ರಿಯಾನ್ ಪರಾಗ್ (20 ರನ್) ವಿಕೆಟ್‌ಗಳನ್ನು ಕಬಳಿಸಿದರು.  ಸಿಕ್ಸರ್ ಬಾಯ್ ರಾಹುಲ್ ತೆವಾಟಿಯಾಗೆ ಹೆಚ್ಚು ಎಸೆತಗಳನ್ನು ಆಡುವ ಅವಕಾಶ ಸಿಗಲಿಲ್ಲ. 3 ಎಸೆತಗಳಲ್ಲಿ2  ರನ್ ಮಾತ್ರ ಗಳಿಸಿದರು.

ಆದರೆ ಜೋಫ್ರಾ ಆರ್ಚರ್ ತಮ್ಮ ಮೇಲಿನ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ.  ಒಂದು ಬೌಂಡರಿ ಮತ್ತು ಸಿಕ್ಸರ್ ಸಹಿತ 16 ರನ್ ಗಳಿಸಿದರು. ಕೇವಲ ಏಳು  ಎಸೆತಗಳನ್ನು ಆಡಿದರು. ಅದರಿಂದಾಗಿ ತಂಡದ ಮೊತ್ತವು 150ರ ಗಡಿ ದಾಟಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು